ಉಡುಪಿಯ ಕಲ್ಸಂಕದಲ್ಲಿರುವ ದುರ್ಗಾ ಪ್ರಸಾದ್​ ಹೋಟೆಲ್​ನಲ್ಲಿ ಕಟ್ಟಿಗೆ ಒಲೆಯ ಮೂಲಕ ಅನ್ನ ಬೇಯಿಸುತ್ತಿರುವ ಬಾಣಸಿಗ. 
ಉಡುಪಿ

ಕೈಕೊಟ್ಟ 'ಕಮರ್ಷಿಯಲ್' ಗ್ಯಾಸ್​

* ಹೋಟೆಲ್​ಗಳಿಗೆ ಕಟ್ಟಿಗೆ ಒಲೆಯೇ ಆಧಾರ

* ಗ್ರಾಹಕರಿಗೆ ಲಭಿಸುತ್ತಿದೆ ಹೆಚ್ಚಿನ ಆಹಾರ

ಪ್ರಶಾಂತ ಭಾಗ್ವತ ಉಡುಪಿ
ಸೋಮವಾರ (ಮಾ.16) ವಾದರೂ ಕಮರ್ಷಿಯಲ್​ ಗ್ಯಾಸ್​ ಲಭಿಸಬಹುದೆಂಬ ನಿರೀಕ್ಷೆಯಲ್ಲಿದ್ದ ಹೋಟೆಲ್​, ರೆಸ್ಟೋರೆಂಟ್​ ಮಾಲೀಕರಿಗೆ ಮತ್ತೆ ನಿರಾಸೆ ಉಂಟಾಗಿದೆ. ಗ್ಯಾಸ್​ ಸಿಲಿಂಡರ್​ ಲಭಿಸದ್ದರಿಂದ ಕಟ್ಟಿಗೆ ಒಲೆಯೇ ಆಧಾರ ಎಂಬಂತಾಗಿದೆ.
ಅಡುಗೆ ಅನಿಲ ಲಭಿಸಿದ ಬಳಿಕವೇ ಹೋಟೆಲ್​ನವರು ಹೆಚ್ಚಿನ ಪ್ರಮಾಣದಲ್ಲಿ ಹಾಗೂ ವಿವಿಧ ಬಗೆಯ ಆಹಾರೋತ್ಪನ್ನ ಸಿದ್ಧಪಡಿಸಿ ಗ್ರಾಹಕರಿಗೆ ನೀಡುವ ತವಕದಲ್ಲಿದ್ದರು. ಆದರೆ, ಗ್ಯಾಸ್​ ಲಭಿಸದ್ದರಿಂದ ಕಟ್ಟಿಗೆ ಒಲೆಯಲ್ಲೇ ಇನ್ನೆರಡು ಹೆಚ್ಚಿನ ಬಗೆಯ ಆಹಾರ ಸಿದ್ಧಪಡಿಸಿದ್ದರು.

ಗ್ರಾಹಕರಿಗೆ ಲಭಿಸುತ್ತಿದೆ ಆಹಾರ

ಕಳೆದ ಒಂದು ವಾರದಿಂದ ಯಾವುದೇ ಹೋಟೆಲ್​ಗಳಲ್ಲಿ ಗ್ರಾಹಕರಿಗೆ ಬೇಕಾಗಿದ್ದ ತಿಂಡಿ-ತಿನಿಸು, ಬಗೆಬಗೆಯ ಊಟ ಲಭಿಸುತ್ತಿರಲಿಲ್ಲ. ಬೆಳಗ್ಗೆ ತಿಂಡಿಗೆ ಇಡ್ಲಿ-ಸಾಂಬಾರ್​ ಅಥವಾ ಉಪ್ಪಿಟ್ಟು, ಮಧ್ಯಾಹ್ನ ಹಾಗೂ ರಾತ್ರಿಯ ಊಟಕ್ಕೆ ಅನ್ನ-ರಸಂ ಮಾತ್ರ ಲಭಿಸುತ್ತಿತ್ತು. ಅನೇಕ ಹೋಟೆಲ್​ನವರು ಮಧ್ಯಾಹ್ನ ಮತ್ತು ರಾತ್ರಿಯ ಊಟವನ್ನೇ ಬಂದ್​ ಮಾಡಿದ್ದರು. ಇದೀಗ ಕಟ್ಟಿಗೆ ಒಲೆಯ ಮೂಲಕವೇ ಆಹಾರ ಸಿದ್ಧಪಡಿಸಲಾಗುತ್ತಿದ್ದು, ಇನ್ನೆರಡು ಒಲೆಗಳ ಮೂಲಕ ಹೆಚ್ಚಿನ ಆಹಾರ ಸಿದ್ಧಪಡಿಸುತ್ತಿದ್ದಾರೆ. ಗ್ರಾಹಕರಿಗೆ ಬಹುತೇಕ ಎಲ್ಲ ಬಗೆಯ ತಿಂಡಿ&ತಿನಿಸು, ಊಟ ನೀಡಲು ಹೋಟೆಲ್​ನವರು ಅಣಿಯಾಗಿದ್ದಾರೆ.

ಇನ್ನೂ ನಾಲ್ಕೈದು ದಿನ ಸಿಗಲ್ಲ ಅನಿಲ

ನಾಲ್ಕು ದಿನದ ಹಿಂದೆ ಹಮುರ್ಜ್​ ಜಲಸಂಧಿಯಿಂದ ಭಾರತಕ್ಕೆ ತೈಲ ಟ್ಯಾಂಕರ್​ಗಳು ಬರುತ್ತಿದ್ದು ಸೋಮವಾರ (ಮಾ.16) ಕನಿಷ್ಠ ಪ್ರಮಾಣದಲ್ಲಾದರೂ ಕಮರ್ಷಿಯಲ್​ ಗ್ಯಾಸ್​ ಲಭಿಸಬಹುದು ಎಂದು ಹೇಳಲಾಗುತ್ತಿತ್ತು. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಇನ್ನೂ ನಾಲ್ಕೈದು ದಿನ ವಾಣಿಜ್ಯ ಬಳಕೆಯ ಗ್ಯಾಸ್​ ಸಿಲಿಂಡರ್​ ಲಭಿಸುವುದು ಅಸಾಧ್ಯ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ. ಹಾಸ್ಟೆಲ್​, ಆಸ್ಪತ್ರೆ ಹಾಗೂ ವಸತಿ ಶಾಲೆಗಳಿಗೆ ರೇಶನಿಂಗ್​ ಮೂಲಕ ಕಮರ್ಷಿಯಲ್​ ಗ್ಯಾಸ್​ ಪೂರೈಕೆ ಮಾಡಲಾಗುತ್ತಿದೆ. ಮಂಗಳೂರಿನ ಎಚ್​ಪಿಸಿಎಲ್​ನಲ್ಲಿ ಇನ್ನೂ ಕಮರ್ಷಿಯಲ್​ ಗ್ಯಾಸ್​ಗಳ ಬಿಲ್ಲಿಂಗ್​ ಆರಂಭಗೊಂಡಿಲ್ಲ. ಹೀಗಾಗಿ ಅಗತ್ಯಕ್ಕೆ ತಕ್ಕಷ್ಟು ಗ್ಯಾಸ್​ ಪೂರೈಕೆ ಇನ್ನೂ ನಾಲ್ಕೈದು ಸಾಧ್ಯವಿಲ್ಲ ಎನಿಸುತ್ತಿದೆ ಎನ್ನುತ್ತಾರೆ ಉಡುಪಿಯ ಎಚ್​ಪಿ ಗ್ಯಾಸ್​ನ ಪಾಲುದಾರ ರಾಘವೇಂದ್ರ ಗ್ಯಾಸ್​ ಏಜೆನ್ಸಿಯ ಮಾಲೀಕ ಬಾಲಾಜಿ ವಿಷ್ಣು ಆಚಾರ್ಯ.
"

ಕಮರ್ಷಿಯಲ್​ ಸಿಲಿಂಡರ್​ ಇಲ್ಲದೆ ಹೋಟೆಲ್​ ಉದ್ಯಮ ಹಿನ್ನಡೆ ಅನುಭವಿಸುತ್ತಿದೆ. ಶೇ.60ರಷ್ಟು ಸಣ್ಣ-ಮಧ್ಯಮ ಹೋಟೆಲ್​ಗಳು ಬಂದ್​ ಆಗಿವೆ. ವಾರದೊಳಗೆ ಭಾರತಕ್ಕೆ ತೈಲ ಸ್ಟೀಮರ್​ ಬರಲಿದೆ ಎಂದು ಹೋಟೆಲ್​ ಮಾಲೀಕರ ರಾಜ್ಯ ಸಂಘಟನೆಗೆ ಸರ್ಕಾರ ಮಾಹಿತಿ ನೀಡಿದೆ. ಬೇರೆ ಸ್ಥಳಾವಕಾಶ ಇರುವ ಕೆಲವು ಹೋಟೆಲ್​ಗಳು ಅತ್ಯಂತ ಪ್ರಯಾಸದಿಂದ ಕಟ್ಟಿಗೆ ಒಲೆ ಮೂಲಕ ಆಹಾರೋತ್ಪನ್ನ ತಯಾರಿಸುತ್ತಿವೆ. ವಾಣಿಜ್ಯ ಅಡುಗೆ ಅನಿಲದ ಸಮಸ್ಯೆ ಸದ್ಯ ದೇಶವ್ಯಾಪಿ ಇರುವುದರಿಂದ ಪರಿಹಾರ ಸಿಗುವವವರೆಗೆ ಇದೇ ಪರಿಸ್ಥಿತಿ ಎದುರಿಸುವುದು ಅನಿವಾರ್ಯ ಆಗಿದೆ.