ಸಮಿತಿ ಸ್ಥಾಪಕ, ವಕೀಲ ಪ್ರೇಮ್ ಪ್ರಸಾದ್ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಉಡುಪಿ: ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳನ್ನು ಒಳಗೊಂಡಂತೆ ಕರ್ನಾಟಕ ಹೈಕೋರ್ಟ್ ಸಂಚಾರಿ ಪೀಠವನ್ನು ಮಂಜೂರು ಮಾಡಬೇಕೆಂಬ ಸುದೀರ್ಘ ಬೇಡಿಕೆ ಈಡೇರಿಕೆಗಾಗಿ ಸಂಘಟಿತ ಹೋರಾಟ ನಡೆಸಲು ಯು-ಆ್ಯಕ್ಟ್ ಮತ್ತು ಕರಾವಳಿ ಹೈಕೋರ್ಟ್ ಪೀಠ ಹೋರಾಟ ಸಮಿತಿಯ ವತಿಯಿಂದ ಆಗಸ್ಟ್ 22 ರಂದು ಮಧ್ಯಾಹ್ನ 3 ಗಂಟೆಗೆ ಎಂಜಿಎಂ ಕಾಲೇಜಿನ ರವೀಂದ್ರ ಮಂಟಪದಲ್ಲಿ ಸಮಾಲೋಚನ ಸಭೆ ನಡೆಯಲಿದೆ ಎಂದು ಸಮಿತಿ ಸ್ಥಾಪಕ, ವಕೀಲ ಪ್ರೇಮ್ ಪ್ರಸಾದ್ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಸಭೆಯಲ್ಲಿ ವಕೀಲರ ಸಂಘಗಳು, ಪತ್ರಕರ್ತ ಸಂಘ, ಸಾಮಾಜಿಕ ಸಂಸ್ಥೆಗಳು, ಉದ್ಯಮದಾರರ ಸಂಸ್ಥೆಗಳು, ವಿದ್ಯಾರ್ಥಿ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು, ಮಾಜಿ ಸೈನಿಕರ ಸಂಘಗಳು, ಆಟೋ ಮತ್ತು ನೌಕರರ ಯೂನಿಯನ್ಗಳು ಹೀಗೆ ಎಲ್ಲಾ ವರ್ಗವನ್ನು ಪ್ರತಿನಿಧಿಸುವ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದು ಹಕ್ಕೊತ್ತಾಯ ಮಾಡಲಿದ್ದಾರೆ ಎಂದರು.
ಕರಾವಳಿ ಭಾಗದಿಂದ ಬೆಂಗಳೂರಿನ ಹೈಕೋರ್ಟ್ನಲ್ಲಿ ಪ್ರಕರಣಗಳನ್ನು ನಡೆಸಲು ಸಾರ್ವಜನಿಕರು ಹಲವಾರು ಬಾರಿ 900 ರಿಂದ -1000 ಕಿಮೀ ಪ್ರಯಾಣಿಸಬೇಕಾಗಿದೆ. ಮಳೆಗಾಲದ ಸಂದರ್ಭಗಳಲ್ಲಿ ಘಾಟಿ ರಸ್ತೆಗಳ ಸಂಚಾರವೂ ಕಷ್ಟಕರವಾಗಿರುತ್ತದೆ. ಇದರಿಂದ ಸಾರ್ವಜನಿಕರು, ಕಕ್ಷಿದಾರರು ಹಾಗೂ ಮಹಿಳೆಯರು ಅಪಾರ ಸಮಯ ಮತ್ತು ಹಣವನ್ನು ವ್ಯಯಿಸಬೇಕಾಗಿದೆ. ಈ ಭಾಗದಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಯಾದರೆ ಶೀಘ್ರ ಮತ್ತು ಅಗ್ಗದ ವೆಚ್ಚದಲ್ಲಿ ನ್ಯಾಯ ದೊರೆಯಲು, ಪರಿಸರ ಸಮಸ್ಯೆಗಳು,- ಭೂ&ವ್ಯಾಜ್ಯಗಳು,- ಸಿಆರ್ಝಡ್, - ಹಿರಿಯ ನಾಗರಿಕರು, - ಮಹಿಳೆಯರ ಸಮಸ್ಯೆಗಳಿಗೆ ಸ್ಥಳಿಯವಾಗಿ ಪರಿಹಾರ ದೊರಕಲು ಅನುಕೂಲವಾಗಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಪ್ರಮುಖರಾದ ಪೌರ್ಣಮಿ ಪ್ರೇಮ್, ವಿಜಯ್ ಡಿಸೋಜಾ, ಮಾಧವ ಕಾಮತ್, ಸರಿತಾ, ಸುರೇಶ್ ಕಾಮತ್ ಉಪಸ್ಥಿತರಿದ್ದರು.