ಉಡುಪಿ ಯಕ್ಷಶಿಕ್ಷಣ ಟ್ರಸ್ಟ್​ ವತಿಯಿಂದ ಆಯೋಜಿಸಿದ್ದ ಸಭೆಯಲ್ಲಿ ಗುರುರಾಜ್​ ಶೆಟ್ಟಿ ಗಂಟಿಹೊಳೆ ಮಾತನಾಡಿದರು. ಮುರಳಿ ಕಡೆಕಾರ್​, ಶೋಭಾ ಶೆಟ್ಟಿ, ನಾಗೇಶ್​ ನಾಯಕ್​, ನಾರಾಯಣ ಹೆಗಡೆ ಇದ್ದರು. 
ಉಡುಪಿ

ಯಕ್ಷಗಾನ ಕಲಿಕೆಯಿಂದ ವಿದ್ಯಾರ್ಥಿಗಳ ಜ್ಞಾನ ವೃದ್ಧಿ

* ಬೈಂದೂರು ಶಾಸಕ ಗುರುರಾಜ್​ ಗಂಟಿಹೊಳೆ ಅನಿಸಿಕೆ 

* ಯಕ್ಷಶಿಕ್ಷಣ ಟ್ರಸ್ಟ್​ನೊಂದಿಗೆ ಸಮಾಲೋಚನಾ ಸಭೆ

ಉಡುಪಿ: ಉಡುಪಿಯ ಯಕ್ಷಗಾನ ಕಲಾರಂಗದ ಸಮಾಜಮುಖಿ ಕಾರ್ಯ ಶ್ಲಾಘನೀಯ. ಕಲಾರಂಗದ ಕಾರ್ಯಕರ್ತರ ಪರಿಶ್ರಮ, ಯಕ್ಷಶಿಕ್ಷಣ ಟ್ರಸ್ಟ್​ನ ಉದ್ದೇಶ ಈಡೇರುವಲ್ಲಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕರ ತೊಡಗಿಸಿಕೊಳ್ಳುವಿಕೆಯೂ ಬಹಳ ಮುಖ್ಯ. ಶೈಕ್ಷಣಿಕ ಚಟುವಟಿಕೆಯೊಂದಿಗೆ ವಿದ್ಯಾರ್ಥಿಗಳು ಯಕ್ಷಗಾನವನ್ನೂ ಕಲಿತರೆ ಅವರ ಜ್ಞಾನವೂ ವೃದ್ಧಿಯಾಗುತ್ತದೆ ಎಂದು ಬೈಂದೂರು ಶಾಸಕ ಗುರುರಾಜ್​ ಶೆಟ್ಟಿ ಗಂಟಿಹೊಳೆ ಅನಿಸಿಕೆ ವ್ಯಕ್ತಪಡಿಸಿದರು. 
ಉಡುಪಿ ಜಿಲ್ಲೆಯ ನಾಲ್ಕು ವಿಧಾನಸಭಾ ವ್ಯಾಪ್ತಿಯ ಪ್ರೌಢಶಾಲೆಗಳಲ್ಲಿ ಉಡುಪಿ ಯಕ್ಷಶಿಕ್ಷಣ ಟ್ರಸ್ಟ್​ ವತಿಯಿಂದ ಯಕ್ಷಶಿಕ್ಷಣ ತರಬೇತಿ ನೀಡಲಾಗುತ್ತಿದ್ದು ಬೈಂದೂರು ವಿಧಾನಸಭಾ ವ್ಯಾಪ್ತಿಯ ಪ್ರೌಢಶಾಲಾ ಮುಖ್ಯೋಪಾಧ್ಯಾಯರೊಂದಿಗೆ ಕುಂದಾಪುರದ ತಾಪಂ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.
ಕಲಿಕೆಗೆ ಪೂರಕ
ಟ್ರಸ್ಟ್​ನ ಕಾರ್ಯದರ್ಶಿ ಮುರಳಿ ಕಡೆಕಾರ್​ ಮಾತನಾಡಿ, ಯಕ್ಷಗಾನ ತರಬೇತಿಯ ಸ್ವರೂಪ ಮತ್ತು ಶಾಲೆಗಳಲ್ಲಿ ಅನುಷ್ಠಾನಗೊಳಿಸದ ಸಂದರ್ಭದಲ್ಲಿ ಮುಖ್ಯ ಶಿಕ್ಷಕರು ಕೈಗೊಳ್ಳಬೇಕಾದ ಸಂಗತಿಯನ್ನು ವಿವರಿಸಿದರು. ಯಕ್ಷಶಿಕ್ಷಣದಿಂದ ವಿದ್ಯಾರ್ಥಿಗಳ ನಿತ್ಯದ ಕಲಿಕೆಗೆ ಮಾರಕವಾಗದು. ಅವರ ಶಿಕ್ಷಣಕ್ಕೆ ಪೂರಕವಾಗುತ್ತದೆ. ಈ ವರ್ಷ ಬೈಂದೂರು ತಾಲೂಕಿನ 19 ಪ್ರೌಢಶಾಲೆಗಳಲ್ಲಿ ಯಕ್ಷಶಿಕ್ಷಣ ತರಬೇತಿ ನಡೆಯಲಿದೆ ಎಂದರು.
ಸಭೆಯಲ್ಲಿ ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಶೆಟ್ಟಿ, ಟ್ರಸ್ಟಿ ನಾರಾಯಣ ಹೆಗಡೆ ಉಪಸ್ಥಿತರಿದ್ದರು. ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್​ ನಾಯಕ್​ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ವಿವಿಧ ಶಾಲೆಗಳ ಮುಖ್ಯೋಪಾಧ್ಯಾಯರು ಪಾಲ್ಗೊಂಡಿದ್ದರು.