ಅರ್ಧಕ್ಕೇ ಸ್ಥಗಿತಗೊಂಡಿರುವ ಕಾಸರಗೋಡು ಜನರಲ್ ಆಸ್ಪತ್ರೆ ಕಟ್ಟಡ ನಿರ್ಮಾಣ. 
ಉಡುಪಿ

ಏಳಂತಸ್ತಿನ ಆಸ್ಪತ್ರೆ ನಿರ್ಮಾಣ ಸ್ಥಗಿತ

ವಿಜಯವಾಣಿ ಸುದ್ದಿಜಾಲ ಕುಂಬಳೆ
ಕಾಸರಗೋಡು ಜನರಲ್ ಆಸ್ಪತ್ರೆಯ ಏಳಂತಸ್ತಿನ ಕಟ್ಟಡ ನಿರ್ಮಾಣ ಕಳೆದ ಎಂಟು ವರ್ಷಗಳಿಂದ ಸ್ಥಗಿತಗೊಂಡಿದ್ದು, ರಾಜ್ಯದಲ್ಲಿ ಹೊಸ ಸರ್ಕಾರ ಆಡಳಿತ ಚುಕ್ಕಾಣಿ ಹಿಡಿಯುತ್ತಿದ್ದಂತೆ ಆಸ್ಪತ್ರೆಯ ನಿರ್ಮಾಣ ಕಾರ್ಯಕ್ಕೆ ವೇಗ ಸಿಗಬಹುದೆಂಬ ಆಶಾಭಾವನೆ ಆಸ್ಪತ್ರೆ ಅಧಿಕಾರಿಗಳು ಹಾಗೂ ಸ್ಥಳೀಯರಲ್ಲಿದೆ.
220 ಹಾಸಿಗೆ ಸಾಮರ್ಥ್ಯದ ಕಾಸರಗೋಡು ಜನರಲ್ ಆಸ್ಪತ್ರೆ ನಿರ್ಮಾಣದಿಂದ ಜಿಲ್ಲೆಯ ರೋಗಿಗಳಿಗೆ ಅನುಕೂಲಕವಾಗಲಿದೆ. ಉಕಿನಡ್ಕದಲ್ಲಿರುವ ಕಾಸರಗೋಡು ವೈದ್ಯಕೀಯ ಕಾಲೇಜು ಆಸ್ಪತ್ರೆ ಸಂಕೀರ್ಣದ ನಿರ್ವಾಣ ಇನ್ನೂ ಅಪೂರ್ಣವಾಗಿರುವುದರಿಂದ ಸರ್ಕಾರ ಕಳೆದ ವರ್ಷ ಈ ಜನರಲ್ ಆಸ್ಪತ್ರೆಯನ್ನು ತಾತ್ಕಾಲಿಕ ವೈದ್ಯಕೀಯ ಕಾಲೇಜು ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಿತ್ತು. ಪ್ರಸ್ತುತ ರೋಗಿಗಳ ದಟ್ಟಣೆ ಹೆಚ್ಚಾಗಿದ್ದು, ಈಗಿರುವ ಆರು ಅಂತಸ್ತಿನ ಹಳೇ ಕಟ್ಟಡದಲ್ಲಿ ಸ್ಥಳಾವಕಾಶ ಕೊರತೆ ಇದೆ. ಆಸ್ಪತ್ರೆಯ ಹಲವು ವಿಭಾಗಗಳು ಇಕ್ಕಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿವೆ.

ಪ್ಲಂಬಿಂಗ್ ಕೆಲಸ ಬಾಕಿ

ಜನರಲ್ ಆಸ್ಪತ್ರೆಗೆ ನಬಾರ್ಡ್ ಯೋಜನೆಯ ಮೂಲಕ ಮೊದಲ ಹಂತದಲ್ಲಿ 8 ಕೋಟಿ ರೂ. ಬಿಡುಗಡೆ ಮಾಡಲಾಯಿತು. ನಂತರ ನಿರ್ವಾಣ ಕಾರ್ಯ ಸ್ಥಗಿತಗೊಳ್ಳದಂತೆ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‌ನ 2ನೇ ಹಂತದಲ್ಲಿ 3 ಕೋಟಿ ರೂ. ಬಿಡುಗಡೆ ಮಾಡಲಾಯಿತು. ಪ್ರಸ್ತುತ ವಿದ್ಯುದ್ದೀಕರಣ ಕಾರ್ಯ ಸಹಿತ ವಿವಿಧ ಕಾರ್ಯಗಳು ಪೂರ್ಣಗೊಂಡಿದ್ದು, ಪ್ಲಂಬಿಂಗ್ ಕೆಲಸ ವಾತ್ರ ಉಳಿದಿದೆ. ಇದನ್ನು ಕಾಸರಗೋಡಿನ ನೂತನ ಶಾಸಕ ಕಲ್ಲತ್ತರ ವಾಹಿನ್ ಹಾಜಿ ಅವರ ಗಮನಕ್ಕೂ ತರಲಾಗಿದೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.

ಸ್ಥಳಾಂತರಗೊಳ್ಳುವ ವಿಭಾಗಗಳು

ಹೊಸ ಕಟ್ಟಡ ಪೂರ್ತಿಗೊಂಡ ಬಳಿಕ ಕಣ್ಣಿನ ಆರೈಕೆ ವಿಭಾಗ ಮತ್ತು ದಂತ ವಿಭಾಗ ಸಹಿತ ಪ್ರಮುಖ ವಿಭಾಗಗಳು ಹಳೇ ಕಟ್ಟಡದಿಂದ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲಿವೆ.

ನಬಾರ್ಡ್ ನೆರವು

ಆಸ್ಪತ್ರೆಯ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಕೇರಳ ಸರ್ಕಾರ 2011ರಲ್ಲಿ ಏಳು ಅಂತಸ್ತಿನ ಕಟ್ಟಡ ನಿರ್ಮಿಸುವುದಾಗಿ ೋಷಿಸಿತು. ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ನ (ನಬಾರ್ಡ್) ಆರ್ಥಿಕ ನೆರವಿನೊಂದಿಗೆ 2018ರಲ್ಲಿ ಆಸ್ಪತ್ರೆಯ ನಿರ್ವಾಣ ಪ್ರಾರಂಭಗೊಂಡಿತು. ಆದರೆ ಕೋವಿಡ್ ಹಾಗೂ ಇತರ ತಾಂತ್ರಿಕ ಅಡೆತಡೆಗಳು ನಿರ್ವಾಣ ಕಾರ್ಯಕ್ಕೆ ಅಡ್ಡಿಯಾದವು. ನಿಗದಿತ ಸಮಯದೊಳಗೆ ಯೋಜನೆ ಪೂರ್ಣಗೊಳಿಸಲು ಸಾಧ್ಯವಾಗದ ಕಾರಣ ನಬಾರ್ಡ್‌ನ ನೆರವು ಸ್ಥಗಿತಗೊಂಡಿತು.

ವರ್ಷಗಳ ಹಿಂದೆಯೇ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಆದರೆ ಕೋವಿಡ್ ಕಾರಣ ಕಾಮಗಾರಿ ಮುಂದುವರಿಯದೆ ನಬಾರ್ಡ್‌ನಿಂದ ಸಿಗುತ್ತಿದ್ದ ಆರ್ಥಿಕ ನೆರವು ಮೊಟಕುಗೊಂಡಿದ್ದರಿಂದ ಯಾವುದೇ ಪ್ರಯತ್ನಗಳು ನಡೆದಿಲ್ಲ. ಈ ನಿಟ್ಟಿನಲ್ಲಿ ಇನ್ನು ಹೊಸ ಪ್ರಯತ್ನಗಳು ಆಗಬೇಕಿದೆ. ನೂತನ ಶಾಸಕರಿಗೆ ಈ ಬಗ್ಗೆ ಮನವಿ ಸಲ್ಲಿಸಲಾಗುವುದು.

— ಡಾ.ಶ್ರೀಕುವಾರ್ ಮುಕುಂದನ್, ಆಸ್ಪತ್ರೆ ಸೂಪರಿಂಟೆಂಡೆಂಟ್