ಸಳ್ಳೆಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬಾವಿ ನಿರ್ಮಿಸಿರುವುದು. 
ಉಡುಪಿ

ಸಳ್ಳೆಕಟ್ಟೆ ಶಾಲೆಗೆ ಬಾವಿ ನಿರ್ಮಾಣ

ನರೇಂದ್ರ ಎಸ್.ಮರಸಣಿಗೆ ಹೆಬ್ರಿ
ಶಾಲೆ ಆರಂಭವಾಗಲು ಇನ್ನೇನು ಕೆಲವೇ ದಿನಗಳ ಗಡುವು ಇರುವಾಗ ಪ್ರತಿ ವರ್ಷ ಶುದ್ಧ ಕುಡಿಯುವ ನೀರಿಗೆ ತೊಂದರೆ ಅನುಭವಿಸುತ್ತಿದ್ದ ಸಳ್ಳೆಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಬೆಳಕಾಗಿದೆ. ಯೋಜನೆಯಿಂದ ನಿರ್ವಾಣವಾದ ಬಾವಿ ನೀರಿನ ಬರವನ್ನು ನೀಗಿಸಲಿದೆ.
ಶುದ್ಧ ಕುಡಿಯುವ ನೀರಿಗಾಗಿ ಶಾಲೆಯವರು ಆಸುಪಾಸಿನ ಮನೆಗಳಿಗೆ ಹೋಗಬೇಕಾಗಿತ್ತು. ಕೆಲವೊಮ್ಮೆ ಅಲ್ಲಿಯೂ ನೀರಿಗೆ ತೊಂದರೆಯಾಗುತ್ತಿತ್ತು. ಆದರೆ ಈಗ ನರೇಗಾ ವತಿಯಿಂದ 5 ಲಕ್ಷ ರೂ. ವೆಚ್ಚದಲ್ಲಿ ನಿರ್ವಾಣವಾದ ಬಾವಿಯಿಂದ ಶಾಲೆ ಸ್ವಾವಲಂಬಿಯಾಗಿದೆ.


ಸ್ಥಳೀಯರು ನೆರವು

ಸ್ಥಳೀಯವಾಗಿ ಕೆಲವು ಮನೆಗಳು ಶಾಲೆಗೆ ಕುಡಿಯುವ ನೀರು ನೀಡಿ ಉದಾರತೆ ತೋರಿದ್ದಾರೆ. ಅಡುಗೆ ಸಹಾಯಕರು ನೀರು ತರಲು ಹೋದಾಗ ಎಂದಿಗೂ ನೀರಿಲ್ಲವೆಂದು ವಾಪಸ್ ಕಳುಹಿಸಿಲ್ಲ. ಶಾಲೆ ಹಾಗೂ ಅಂಗನವಾಡಿಗಳು ಒಟ್ಟಾಗಿರುವುದರಿಂದ ಅಂಗನವಾಡಿ ವಿದ್ಯಾರ್ಥಿಗಳೂ ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಎರಡು ಕಡೆಯವರು ಪಂಚಾಯಿತಿ ವತಿಯಿಂದ ಸಿಗುವ ನೀರನ್ನು ಶುಚಿತ್ವ ಹಾಗೂ ಇನ್ನಿತರ ಕೆಲಸಗಳಿಗೆ ಬಳಸಿಕೊಳ್ಳುತ್ತಿದ್ದಾರೆ.

5 ಲಕ್ಷ ರೂ. ವೆಚ್ಚದಲ್ಲಿ ಶೌಚಗೃಹ

ಪಂಚಾಯಿತಿ ವತಿಯಿಂದ ನರೇಗಾ ಹಾಗೂ ಇನ್ನಿತರ ಯೋಜನೆಗಳ ಸಹಯೋಗದೊಂದಿಗೆ ಶಾಲೆಗೆ ಈಗಾಗಲೇ 5 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ಶೌಚಗೃಹ ನಿರ್ಮಿಸಲಾಗಿದೆ.

ಶಾಲೆಗೆ ಗ್ರಾಪಂ ವತಿಯಿಂದ ನಿರಂತರವಾಗಿ ಸಹಕಾರ ನೀಡುತ್ತಾ ಬಂದಿದ್ದೇವೆ. ವಾಡು ರಿಪೇರಿ, ಉದ್ಯೋಗ ಖಾತ್ರಿ ಮತ್ತು ಎಸ್‌ಬಿಎಂ ಯೋಜನೆಯಡಿ ನೂತನ ಶೌಚಗೃಹ ನಿರ್ಮಿಸಿಕೊಡಲಾಗಿತ್ತು. ಗ್ರಾಪಂ ವ್ಯಾಪ್ತಿಯ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿ ಗ್ರಾಪಂನ ಪ್ರಥಮ ಆದ್ಯತೆಯಾಗಿದೆ. ಈ ಬಾವಿ ಶಾಲೆಗೆ ಶುದ್ಧ ನೀರು ಪಡೆಯಲು ಪೂರಕವಾಗಲಿದೆ.

— ರಿತೇಶ್ ಎನ್.ಪುತ್ರನ್ ಕುಚ್ಚೂರು ಪಿಡಿಒ