ಬಂಡಸಾಲೆಯಲ್ಲಿ ‘ವಿ2 ಗೈಸ್’ ಬಸ್ ಮಾದರಿಯಲ್ಲಿ ನಿರ್ಮಿಸಿದ ವಿನೂತನ ಶೈಲಿಯ ಬಸ್ ತಂಗುದಾಣವನ್ನು ಭಾನುವಾರ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಶ್ರೀಪಾದರು ಲೋಕಾರ್ಪಣೆಗೊಳಿಸಿದರು. ಗುರುಪುರ ಕೆನರಾ ಬ್ಯಾಂಕ್ ಶಾಖೆ ಪ್ರಬಂಧಕ ಲೋಕನಾಥ, ಉದ್ಯಮಿ ನಿಟ್ಟೆಗುತ್ತು ರವಿರಾಜ ಶೆಟ್ಟಿ ಮೊದಲಾದವರಿದ್ದರು.
ವಿಜಯವಾಣಿ ಸುದ್ದಿಜಾಲ ಗುರುಪುರ
ಗುರುಪುರದ ಬಂಡಸಾಲೆಗೆ ಬ್ರಿಟಿಷ್, ಪೋರ್ಚುಗೀಸರ ಆಳ್ವಿಕೆ ಕಾಲದ ಇತಿಹಾಸವಿದೆ. ಬಂಡಸಾಲೆಗೆ ಹತ್ತಿರದ ಲ್ಗುಣಿ ನದಿ ತಟದಿಂದ ಮಳಲಿಗೆ ಅಬ್ಬಕ್ಕ ರಾಣಿ ಆಡಳಿತಕ್ಕೆ ಸಂಬಂಧಿಸಿದ ವ್ಯಾಪಾರ-ವಹಿವಾಟು ನಡೆಯುತ್ತಿತ್ತು. ಬಂಡಸಾಲೆಯಲ್ಲಿ ‘ಬಸ್ ತಂಗುದಾಣ’ ನಿರ್ಮಾಣವಾಗಿದೆ. ಇದರ ಹಿಂದೆ ‘ವಿ2 ಗೈಸ್’ ಶ್ರಮವಿದೆ ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಶ್ರೀಪಾದರು ಹೇಳಿದರು.
ರಾಷ್ಟ್ರೀಯ ಹೆದ್ದಾರಿ 169ರ ಗುರುಪುರ ಬಂಡಸಾಲೆಯಲ್ಲಿ ‘ವಿ2 ಗೈಸ್’ ಸಂಘಟನೆಯು ದಾನಿಗಳ ನೆರವಿನಿಂದ, 7 ಲಕ್ಷ ರೂ. ವೆಚ್ಚದಲ್ಲಿ ಬಸ್ ಮಾದರಿಯಲ್ಲಿ ನಿರ್ಮಿಸಿದ ವಿನೂತನ ಶೈಲಿಯ ಬಸ್ ತಂಗುದಾಣವನ್ನು ಭಾನುವಾರ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಶಾಸಕ ಡಾ.ಭರತ್ ಶೆಟ್ಟಿ ಮಾತನಾಡಿ, ಇದೊಂದು ವಿನೂತನ ವಿನ್ಯಾಸದ ಬಸ್ ತಂಗುದಾಣ. ಇದರೊಳಗೆ ಕುಡಿಯುವ ನೀರಿನ ವ್ಯವಸ್ಥೆ, ಸಿಸಿ ಕ್ಯಾಮರಾ, ಬಸ್‌ನಂತೆ ಆಸನ, ಪ್ರಥಮ ಚಿಕಿತ್ಸೆ ಪೆಟ್ಟಿಗೆ ಮತ್ತಿತರ ಅಗತ್ಯ ಸೇವೆಗಳು ಒಳಗೊಂಡಿವೆ. ಯುವಕರ ತಂಡವೊಂದರ ನೈಜ ಸಮಾಜಮುಖಿ ಕೆಲಸ ಇದಾಗಿದೆ. ಇಂತಹ ಯುವ ಶಕ್ತಿ ದೇಶಕ್ಕೆ ಆಸ್ತಿ ಎಂದರು.
ಗುರುಪುರ ಕೆನರಾ ಬ್ಯಾಂಕ್ ಶಾಖೆ ಪ್ರಬಂಧಕ ಲೋಕನಾಥ, ಉದ್ಯಮಿ ನಿಟ್ಟೆಗುತ್ತು ರವಿರಾಜ ಶೆಟ್ಟಿ, ಬಿಜೆಪಿ ಪ್ರಮುಖರಾದ ರಾಜೇಶ್ ಕೊಟ್ಟಾರಿ, ದೇವಪ್ಪ ಪೂಜಾರಿ, ಸಚಿನ್ ಅಡಪ, ಸುನೀಲ್ ಗುರುಪುರ, ಬಜ್ಪೆ ಠಾಣೆ ಎಎಸ್‌ಐ ಕಾಂತಿನಾಥ್, ಜಯರಾಮ ಭಂಡಾರಿ ಗುರುಪುರ, ಉದ್ಯಮಿ ರೊನಾಲ್ಡ್ ಫರ್ನಾಂಡಿಸ್ ಪೆರ್ಮುದೆ ಮತ್ತಿತರು ಇದ್ದರು. ವಿ2 ಗೈಸ್‌ನ ಭರತ್ ಪ್ರಾಸ್ತಾವಿಕ ಮಾತನಾಡಿದರು. ಬಸ್ ತಂಗುದಾಣ ನಿರ್ಮಿಸಲು ಸಹಕರಿಸಿದವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ವಿಜೆ ಮಧುರಾಜ್ ಗುರುಪುರ ನಿರೂಪಿಸಿದರು.