ಮುಗೇರಡ್ಕದಲ್ಲಿ ಹೆದ್ದಾರಿ ಇಲಾಖೆ ಇಂಜಿನಿಯರ್‌ಗಳು ಸ್ಥಳ ಪರಿಶೀಲಿಸಿದರು. ಪ್ರಸನ್ನ ದರ್ಬೆ, ಬಾಲಕೃಷ್ಣ ಗೌಡ ಮತ್ತಿತರರು ಇದ್ದರು. 
ಉಡುಪಿ

ಮುಗೇರಡ್ಕದಲ್ಲಿ ಅಣೆಕಟ್ಟು ಸಹಿತ ಸೇತುವೆ ನಿರ್ಮಾಣ

ಉಪ್ಪಿನಂಗಡಿ: ಬೆಳ್ತಂಗಡಿ ತಾಲೂಕು ಮೊಗ್ರು ಗ್ರಾಮ ಮುಗೇರಡ್ಕ ಎಂಬಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಅಣೆಕಟ್ಟು ಸಹಿತ ಸೇತುವೆಗೆ ರಾಷ್ಟ್ರೀಯ ಹೆದ್ದಾರಿ-75ಕ್ಕೆ ಸಂಪರ್ಕ ಕಲ್ಪಿಸುವ ಸಂಬಂಧ ಸಾರ್ವಜನಿಕರ ಸುರಕ್ಷತೆ ಹಾಗೂ ಸುಗಮ ಸಂಚಾರಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಹಾಗೂ ಸ್ಥಳೀಯರ ಗೊಂದಲ ಪರಿಹರಿಸುವ ನಿಟ್ಟಿನಲ್ಲಿ ಹೆದ್ದಾರಿ ಇಲಾಖೆಯ ಇಂಜಿನಿಯರ್‌ಗಳು ಸ್ಥಳ ಪರಿಶೀಲಿಸಿದರು.

ಸೇತುವೆ ನಿರ್ಮಾಣ ಕುರಿತಾಗಿ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಸಂಸದ ಕ್ಯಾ.ಬ್ರಿಜೇಶ್ ಚೌಟ ಹಾಗೂ ಶಾಸಕ ಹರೀಶ್ ಪೂಂಜ ಅವರ ಸೂಚನೆಯಂತೆ ಇಂಜನಿಯರ್ ಪ್ರಸನ್ನ ದರ್ಬೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮಂಗಳೂರು ಯೋಜನಾ ಘಟಕದ ಯೋಜನಾ ನಿರ್ದೇಶಕ ಅಬ್ದುಲ್ ಜಾವೇದ್ ಅಜ್ಮಿ ಅವರೊಂದಿಗೆ ಚರ್ಚಿಸಿದರು.
ಮುಗೇರಡ್ಕದ ಕಾರಣಿಕದ ದೈವಸ್ಥಾನಕ್ಕೆ ಭೇಟಿ ನೀಡುವ ಭಕ್ತರಿಗೆ ಅನುಕೂಲವಾಗುವ ಹಾಗೂ ಪ್ರವಾಸೋದ್ಯಮ ದೃಷ್ಟಿಯಿಂದ ರಾಷ್ಟ್ರೀಯ ಹೆದ್ದಾರಿ ಬದಿ ಜಾಗ ಕಾಯ್ದಿರಿಸುವುದು, ಹೊಸದಾಗಿ ನಿರ್ಮಾಣವಾಗುತ್ತಿರುವ ಸೇತುವೆಗೆ ಸಂಪರ್ಕ ರಸ್ತೆ ನಿರ್ಮಾಣದ ಬಗ್ಗೆ ಚರ್ಚಿಸಿದರು. ಪ್ರಸನ್ನ ದರ್ಬೆ ಎನ್‌ಎಚ್‌ಎಐ ಇಂಜಿನಿಯರ್‌ಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ವ್ಯವಸ್ಥೆ ಕಲ್ಪಿಸಲು ಸ್ಥಳ ಪರಿಶೀಲನೆ ನಡೆಸಿದರು.

ಕಣಿಯೂರು ಮಹಾ ಶಕ್ತಿಕೇಂದ್ರದ ಅಧ್ಯಕ್ಷ ಬಾಲಕೃಷ್ಣ ಗೌಡ ಮುಗೇರಡ್ಕ, ಬಂದಾರು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಗಂಗಾಧರ ಪೂಜಾರಿ, ಪುತ್ತೂರು ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಅದೇಶ್ ಶೆಟ್ಟಿ ಉಪ್ಪಿನಂಗಡಿ, ಬೆಳ್ತಂಗಡಿ ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ಗಿರೀಶ್ ಗೌಡ ಬಿ.ಕೆ.ಬಂದಾರು ಇತರರು ಇದ್ದರು.