ಉಡುಪಿಯ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ 'ಸಂವಿಧಾನ ಹತ್ಯಾ ದಿವಸ್' ಕರಾಳ ದಿನಾಚರಣೆಯಲ್ಲಿ ಮಟ್ಟಾರು ರತ್ನಾಕರ್ ಹೆಗ್ಡೆ ಮಾತನಾಡಿದರು. ಕುತ್ಯಾರು ನವೀನ್ ಶೆಟ್ಟಿ, ಶ್ರೀಕಾಂತ್ ನಾಯಕ್ ಇದ್ದರು.
* ಮಾಜಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ್ ಹೆಗ್ಡೆ ಅನಿಸಿಕೆ
* ಸಂವಿಧಾನ ಹತ್ಯಾ ದಿವಸ್' ಕರಾಳ ದಿನಾಚರಣೆ
ಉಡುಪಿ: ಅಲಹಾಬಾದ್ ಹೈಕೋರ್ಟ್ 1975ರ ಜೂ.12ರಂದು ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಅವರ ಆಯ್ಕೆಯನ್ನು (1971ರ ಲೋಕಸಭಾ ಚುನಾವಣಾ ಅಕ್ರಮದ ಕಾರಣದಿಂದ) ಅಸಿಂಧುಗೊಳಿಸಿ ಅವರು 6 ವರ್ಷ ಸ್ಪರ್ಧಿಸುವಂತಿಲ್ಲ ಎಂದು ತೀರ್ಪು ನೀಡಿತ್ತು. ಆ ಹಿನ್ನೆಲೆಯಲ್ಲಿ 1975ರ ಜೂ.25ರ ಮಧ್ಯರಾತ್ರಿ ರಾಷ್ಟ್ರಪತಿ ಫಖ್ರುದ್ದೀನ್ ಅಲಿ ಅಹ್ಮದ್ ಅವರ ಮೂಲಕ ಭಾರತದ ಸಂವಿಧಾನದ 352ನೇ ವಿಧಿಯಡಿ ಇಂದಿರಾ ಅವರು ದೇಶದಲ್ಲಿ ಕರಾಳ 'ತುರ್ತು ಪರಿಸ್ಥಿತಿ' ಘೋಷಿಸಿದ್ದರು. ಅದು ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳ ಮೇಲಿನ ನೇರ ದಾಳಿಯಾಗಿದೆ ಎಂದು ಉಡುಪಿ ಜಿಲ್ಲಾ ಬಿಜೆಪಿ ಮಾಜಿ ಅ್ಲಾಧ್ಯಕ್ಷ, ವಕೀಲ ಮಟ್ಟಾರು ರತ್ನಾಕರ್ ಹೆಗ್ಡೆ ಹೇಳಿದರು.
ಉಡುಪಿಯ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ 'ಸಂವಿಧಾನ ಹತ್ಯಾ ದಿವಸ್' ಕರಾಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಆ ಘಟನೆ ದೇಶದ ಇತಿಹಾಸದಲ್ಲಿ ಶಾಶ್ವತ ಕಪ್ಪು ಚುಕ್ಕೆಯಾಗಿ ಉಳಿದಿದೆ ಎಂದರು.
ಹಲವರ ಬಂಧನ
ಜಯಪ್ರಕಾಶ್ ನಾರಾಯಣ್ ನೇತೃತ್ವದಲ್ಲಿ 'ಸಂಪೂರ್ಣ ಕ್ರಾಂತಿ' ಚಳವಳಿ ದೇಶಾದ್ಯಂತ ಹಬ್ಬಿತ್ತು. ಇಂದಿರಾ ಗಾಂಧಿ ರಾಜೀನಾಮೆ ನೀಡಬೇಕೆಂಬ ಒತ್ತಡ ಹೆಚ್ಚಾಗಿತ್ತು. ಸಂವಿಧಾನದ 19ನೇ ವಿಧಿಯಡಿಯ ವಾಕ್, ಅಭಿವ್ಯಕ್ತಿ, ಸಭೆ ಸೇರುವ ಹಕ್ಕು ಸ್ಥಗಿತವಾಯಿತು. ವಿರೋಧ ಪಕ್ಷದ ನಾಯಕರಾಗಿದ್ದ ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ. ಅಡ್ವಾಣಿ, ಜಾರ್ಜ್ ಫರ್ನಾಂಡಿಸ್, ಜಯಪ್ರಕಾಶ್ ನಾರಾಯಣ್ ಸೇರಿದಂತೆ ಸಾವಿರಾರು ಮಂದಿಯನ್ನು "ಮೀಸ' ಕಾಯಿದೆಯಡಿ ಬಂಧಿಸಲಾಯಿತು. 1977ರಲ್ಲಿ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಹಿಂಪಡೆದು ಚುನಾವಣೆ ಘೋಷಿಸಿದರು. ಚುನಾವಣೆಯಲ್ಲಿ ಕಾಂಗ್ರೆಸ್ ಸೋತು ಜನತಾ ಪಕ್ಷ ಅಧಿಕಾರಕ್ಕೆ ಬಂದ ಪರಿಣಾಮವಾಗಿ 44ನೇ ಸಂವಿಧಾನ ತಿದ್ದುಪಡಿ ತರಲಾಯಿತು ಎಂದು ವಿವರಿಸಿದರು.
ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಸತ್ಯಾನಂದ ನಾಯಕ್, ಜಿಲ್ಲಾ ಕಾರ್ಯದರ್ಶಿ ಶಿವಕುಮಾರ್ ಅಂಬಲಪಾಡಿ, ಪಕ್ಷದ ಪ್ರಮುಖರು, ವಿವಿಧ ಸ್ಥರದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ನಾಯಕ್ ಕಾರ್ಯಕ್ರಮ ನಿರ್ವಹಿಸಿದರು.