ಉಡುಪಿಯ ಕಾಂಗ್ರೆಸ್​ ಭವನದಲ್ಲಿ ನೂತನ ಜಿಲ್ಲಾಧ್ಯಕ್ಷ ಕಿಶನ್​ ಹೆಗ್ಡೆ ಕೊಳ್ಕೆಬೈಲು ಅವರನ್ನು ಜಿಲ್ಲಾ ಮಹಿಳಾ ಕಾಂಗ್ರೆಸ್​ ವತಿಯಿಂದ ಅಭಿನಂದಿಸಲಾಯಿತು. ಜ್ಯೋತಿ ಹೆಬ್ಬಾರ್​, ಸರಸು ಬಂಗೇರ, ಗೀತಾ ವಾಗ್ಳೆ, ಮೀನಾಕ್ಷಿ ಮಾಧವ ಬನ್ನಂಜೆ, ಅನಿತಾ ಡಿಸೋಜಾ ಇತರರಿದ್ದರು. 
ಉಡುಪಿ

ಉಡುಪಿ ಜಿಲ್ಲೆಯಲ್ಲಿ ತಳಮಟ್ಟದಿಂದ ಕಾಂಗ್ರೆಸ್​ ಸಂಘಟನೆ

* ನೂತನ ಅಧ್ಯಕ್ಷ ಕಿಶನ್​ ಹೆಗ್ಡೆ ಕೊಳ್ಕೆಬೈಲು ಭರವಸೆ

* ಜಿಲ್ಲಾ ಮಹಿಳಾ ಸಮಿತಿಯಿಂದ ಅಭಿನಂದನಾ ಕಾರ್ಯಕ್ರಮ

ಉಡುಪಿ: ಜಿಲ್ಲೆಯಲ್ಲಿ ತಳಮಟ್ಟದಿಂದ ಮತ್ತೆ ಪಕ್ಷ ಸಂಘಟಿಸುವಲ್ಲಿ ಎಲ್ಲರ ಸಹಕಾರ ಪಡೆದು ಮುಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್​ ಅಭ್ಯರ್ಥಿಗಳನ್ನು ಹೆಚ್ಚು ಗೆಲ್ಲಿಸಲು ಶಕ್ತಿ ಮೀರಿ ಶ್ರಮಿಸುತ್ತೇನೆ. ಪಕ್ಷದ ಎಲ್ಲ ನಾಯಕರು ಹಾಗೂ ಕಾರ್ಯಕರ್ತರು ಸಂಘಟಿತರಾದರೆ ಗೆಲುವು ನಮ್ಮದಾಗಲಿದೆ. ಪಕ್ಷದ ಕಾರ್ಯಕರ್ತರ ಧ್ವನಿಯಾಗಿ ಕಾರ್ಯ ನಿರ್ವಹಿಸಲಿದ್ದೇನೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್​ ಸಮಿತಿಯ ನೂತನ ಅಧ್ಯಕ್ಷ ಕಿಶನ್​ ಹೆಗ್ಡೆ ಕೊಳ್ಕೆಬೈಲು ಭರವಸೆ ನೀಡಿದರು.

ಉಡುಪಿ ಬ್ರಹ್ಮಗಿರಿಯಲ್ಲಿರುವ ಜಿಲ್ಲಾ ಕಾಂಗ್ರೆಸ್​ ಭವನದಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್​ ಸಮಿತಿಯ ಮಾಸಿಕ ಸಭೆಯಲ್ಲಿ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದರು.

ಮರುಕಳಿಸಲಿ ಗತವೈಭವ

ಜಿಲ್ಲಾ ಮಹಿಳಾ ಕಾಂಗ್ರೆಸ್​ ಸಮಿತಿ ಅಧ್ಯಕ್ಷೆ ಜ್ಯೋತಿ ಹೆಬ್ಬಾರ್​ ಮಾತನಾಡಿ, ನೂತನ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿರುವ ಕಿಶನ್​ ಹೆಗ್ಡೆ ಅವರ ಸಾರಥ್ಯದಲ್ಲಿ ಉಡುಪಿ ಜಿಲ್ಲೆಯಲ್ಲಿ ಮತ್ತೆ ಕಾಂಗ್ರೆಸ್​ನ ಗತವೈಭವ ಮರುಕಳಿಸಲಿ. ಕರಾವಳಿಯ ಕಡಲಿನಲ್ಲಿ ಕಾಂಗ್ರೆಸ್​ನ ಬಾವುಟ ಬಾನೆತ್ತರಕ್ಕೆ ಹಾರಲಿ. ಪಕ್ಷ ಸಂಘಟನೆ ಹಾಗೂ ಬಲವರ್ಧನೆಯ ವಿಚಾರದಲ್ಲಿ ನಿಮ್ಮೊಂದಿಗೆ ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್​ ಸಮಿತಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಲಿದೆ ಎಂದರು.

ಮಹಿಳಾ ಕಾಂಗ್ರೆಸ್​ನ ಹಿರಿಯ ನಾಯಕಿಯರಾದ ಸರಸು ಬಂಗೇರ, ಗೀತಾ ವಾಗ್ಳೆ, ಮೀನಾಕ್ಷಿ ಮಾಧವ ಬನ್ನಂಜೆ, ಅನಿತಾ ಡಿಸೋಜಾ, ಬ್ಲಾಕ್​ ಮಹಿಳಾ ಕಾಂಗ್ರೆಸ್​ನ ಅಧ್ಯೆಯರಾದ ಬಾನು ಭಾಸ್ಕರ್​, ರೇಖಾ ಸುವರ್ಣ, ಅನಿತಾ ಬಾಬು ಪೂಜಾರಿ, ಮಮತಾ ಶೆಟ್ಟಿ, ಶಾಂತಲತಾ ಶೆಟ್ಟಿ, ಶಾಂತಾ ರೈ, ಸುಮಾ ಅಡ್ಯಂತಾಯ, ಸೂರ್ಯಕಾಂತಿ, ಪ್ರಮುಖರಾದ ಚಂದ್ರಿಕಾ ಶೆಟ್ಟಿ, ಐರಿನ್​ ಅಂದ್ರಾದೆ, ಐಡಾ ಗಿಬ್ಬ ಡಿಸೋಜಾ, ಪ್ರಭಾ ಶೆಟ್ಟಿ, ರಮಾ ದೇವಿ, ನಾಗಮ್ಮ, ರೋಶಿನಿ ಶೆಟ್ಟಿ ಇತರರು ಉಪಸ್ಥಿತರಿದ್ದರು.

ಪುಷ್ಪಾ ಅಂಚನ್​ ಸ್ವಾಗತಿಸಿದರು. ಸಂಧ್ಯಾ ತಿಲಕ್​ರಾಜ್​ ಹಿಂದಿನ ಸಭೆಯ ವರದಿ ವಾಚಿಸಿದರು. ಗೋಪಿ ನಾಯ್ಕ್​ ವಂದಿಸಿದರು.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ಆಶಯದಂತೆ ಯುವ ಸಮೂಹದ ಸದೃಢತೆಗಾಗಿ 16ರಿಂದ 35 ವಯೋಮಾನದ ಯುವಕ-ಯುವತಿಯರನ್ನು ಒಗ್ಗೂಡಿಸಲು 'ಭಾರತ್​ ಜೋಡೋ' ಯುವ ಸಂಘವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕಿದೆ. ಉಡುಪಿ ಜಿಲ್ಲಾದ್ಯಂತ ಬ್ಲಾಕ್​ ಮಹಿಳಾ ಕಾಂಗ್ರೆಸ್​ನ ಅಧ್ಯಕ್ಷರು ಮತ್ತು ಮಹಿಳಾ ಪದಾಧಿಕಾರಿಗಳು ಶ್ರಮಿಸಬೇಕು.
> ಜ್ಯೋತಿ ಹೆಬ್ಬಾರ್​. ಜಿಲ್ಲಾ ಮಹಿಳಾ ಕಾಂಗ್ರೆಸ್​ ಸಮಿತಿ ಅಧ್ಯಕ್ಷೆ.