ಕೋಟ: ಕನ್ನಡ ಸಾಹಿತ್ಯ ಸಮ್ಮೇಳನದ ಮೂಲಕ ಕನ್ನಡಪರ ಕಾರ್ಯಗಳಿಗೆ ಕೈ ಜೋಡಿಸೋಣ. ಸಮ್ಮೇಳನಗಳಿಂದ ಹೊಸ ಪ್ರತಿಭೆಗಳಿಗೆ ಅವಕಾಶ ಸಿಗಬೇಕು, ಕನ್ನಡದ ಹೊಸ ಸಾಧ್ಯತೆಗಳ ಕುರಿತು ಚರ್ಚೆಗಳು ನಡೆಯಬೇಕು ಎಂದು ಕೋಟದ ಮಣೂರು ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ.ಕುಂದರ್ ಹೇಳಿದರು.
ಬ್ರಹ್ಮಾವರ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನ ಐದನೇ ಸಾಹಿತ್ಯ ಸಮ್ಮೇಳನ ಸಾಹಿತಿ ನರೇಂದ್ರ ಕುಮಾರ್ ಕೋಟ ಅಧ್ಯಕ್ಷತೆಯಲ್ಲಿ ಅ.4ರಂದು ಸಾಸ್ತಾನದ ಶಿವಕೃಪಾ ಸಭಾಭವನದಲ್ಲಿ ಜರುಗಲಿದ್ದು, ಕೋಟದ ಅಮೃತೇಶ್ವರಿ ದೇವಸ್ಥಾನದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಇತ್ತೀಚೆಗೆ ಮಾತನಾಡಿದರು.
ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸತೀಶ್ ವಡ್ಡರ್ಸೆ ಸಮ್ಮೇಳನದ ರೂಪುರೇಷೆಗಳ ಕುರಿತು ಮಾತನಾಡಿದರು. ಕಸಾಪ ತಾಲೂಕು ಘಟಕದ ಅಧ್ಯಕ್ಷ ರಾಮಚಂದ್ರ ಐತಾಳ್, ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಜಿಲ್ಲಾ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಅಚ್ಯುತ ಪೂಜಾರಿ, ಜ್ಯೋತಿ ಕೃಷ್ಣ ಪೂಜಾರಿ, ವಿಶ್ವನಾಥ ಖಾರ್ವಿ, ರತ್ನಾ ಜೆ.ರಾಜ್, ಜ್ಯೋತಿ ಉದಯ ಪೂಜಾರಿ, ಲೀಲಾವತಿ ಗಂಗಾಧರ, ರಾಜಶೇಖರ ಹೆಬ್ಬಾರ, ನರಸಿಂಹ ಮೂರ್ತಿ, ರಘು ಮಧ್ಯಸ್ಥ, ಮನೋಹರ ಭಟ್, ಉಪೇಂದ್ರ ಸೋಮಯಾಜ, ಮಹಾಲಕ್ಷ್ಮೀ ಸೋಮಯಾಜಿ, ಸುಮನಾ ಹೇರ್ಳೆ, ಪ್ರಸನ್ನ ತುಂಗ, ಪೂರ್ಣಿಮಾ ಅಧಿಕಾರಿ, ಅಮೃತೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರು, ಕಸಾಪ ಜಿಲ್ಲಾ ಮತ್ತು ತಾಲೂಕು ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.