ಶಂಖಹಳು 
ಉಡುಪಿ

ಕೃಷಿಗೆ ‘ಶಂಖಹುಳು’ಗಳ ಕಾಟ

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ತಾಲೂಕಿನ ಉಜಿರೆ ಗ್ರಾಮ ವ್ಯಾಪ್ತಿಯ ಅತ್ತಾಜೆ ಭಾಗದ ಕೃಷಿ ಭೂಮಿಯಲ್ಲಿ ಶಂಖ ಹುಳುಗಳ ಕಾಟ ಹೆಚ್ಚಾಗಿದ್ದು, ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಬಾರದೆ ಕಂಗಾಲಾಗಿರುವ ರೈತರಿಗೆ ಈಗ ಹೊಸ ಸಂಕಷ್ಟ ಎದುರಾಗಿದೆ.
ಕಳೆದ ಮೂರು ವರ್ಷಗಳಿಂದ ಮಳೆಗಾಲದಲ್ಲಿ ಕೃಷಿ ಭೂಮಿಯಲ್ಲಿ ಶಂಖಹುಳುಗಳ ಕಾಟ ಹೆಚ್ಚಾಗಿದೆ. ಕೃಷಿಕರ ತೋಟದಲ್ಲಿರುವ ಅಡಿಕೆ, ತೆಂಗು ಹಾಗೂ ಬಾಳೆಗಿಡ, ತರಕಾರಿ, ಭತ್ತದ ಪೈರುಗಳನ್ನು ಸಂಪೂರ್ಣ ನಾಶ ಮಾಡುವ ಈ ಹುಳುಗಳಿಂದ ಫಸಲು ನಷ್ಟವಾಗುತ್ತಿದೆ. ಸರಿಯಾದ ಮಳೆ, ಬೆಳೆ ಇಲ್ಲದೆ ಕಂಗೆಟ್ಟಿರುವ ಕೃಷಿಕರು ಹುಳುಗಳ ಕಾಟದಿಂದ ತೀವ್ರ ಚಿಂತಿತರಾಗಿದ್ದಾರೆ.
ಬೇಸಿಗೆ ವೇಳೆ ಶಂಖ ಹುಳುಗಳು ನೀರನ್ನು ಹುಡುಕುತ್ತಾ ತೆರಳುತ್ತವೆ. ಮಣ್ಣಿನೊಳಗೆ ಜೀವಿಸುವ ಈ ಜೀವಿ ಏಕಕಾಲಕ್ಕೆ ನೂರಾರು ಮೊಟ್ಟೆಗಳನ್ನು ಇಡುವ ಸಾಮರ್ಥ್ಯ ಹೊಂದಿದ್ದು, ಅಲ್ಪಾಅವಧಿಯಲ್ಲೇ ಬೃಹತ್ ಸಂಖ್ಯೆಯಲ್ಲಿ ತನ್ನ ಸಂತಾನ ವೃದ್ಧಿಸಿಕೊಳ್ಳುತ್ತದೆ. ಸೂರ್ಯಾಸ್ತದ ಬಳಿಕ ಈ ಹುಳುಗಳು ಮಣ್ಣಿನೊಳಗಿನಿಂದ ಹೊರಬಂದು ಕೃಷಿ ಹಾನಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತವೆ. ಸೂರ್ಯೋದಯದ ಬಳಿಕ ಅಡಿಕೆ ಮರದ ಸೋಗೆ, ಎಲೆ ಹಾಗೂ ಪೊಟರೆಗಳ ಒಳಗೆ ಸೇರಿಕೊಳ್ಳುತ್ತದೆ.

ಸಾಧ್ಯವಾಗದ ನಿಯಂತ್ರಣ

ಅತ್ತಾಜೆ ಭಾಗದ ಕೃಷಿಕರು ತಮ್ಮ ತೋಟಗಳಲ್ಲಿರುವ ಶಂಖಹುಳುಗಳನ್ನು ಸಂಗ್ರಹಿಸಿ ಉಪ್ಪು ತುಂಬಿದ ಡ್ರಮ್‌ಗಳಲ್ಲಿ ಹಾಕಿ ನಾಶಗೊಳಿಸಲು ಪ್ರಯತ್ನಿಸಿದ್ದರೂ ಹುಳುಗಳ ನಿಯಂತ್ರಣ ಸಾಧ್ಯವಾಗಿಲ್ಲ. ಹುಳುಗಳ ನಾಶಕ್ಕೆ ತೋಟಗಳಿಗೆ ಔಷಧ ಸಿಂಪಡಿಸಿದರೆ ಫಸಲಿನ ಮೇಲೆ ಪರಿಣಾಮ ಬೀರುವುದರಿಂದ ಅದನ್ನೂ ಮಾಡಲಾಗದಂತಹ ಸ್ಥಿತಿಯಲ್ಲಿದ್ದಾರೆ. ಹುಳುಗಳಿಂದ ಸಲನ್ನು ರಕ್ಷಿಸಿಕೊಳ್ಳಲು ಕೃಷಿಕರು ಶತಾಯಗತಾಯ ಪ್ರಯತ್ನಿಸುತ್ತಿದ್ದಾರೆ.

ಲಕ್ಷಣಗಳು ಹೀಗಿರುತ್ತದೆ?

ಶಂಖಹುಳುಗಳು ಆಫ್ರಿಕನ್ ಬಸವನ ಹುಳುಗಳಂತೆ ಕಂಡರೂ ಅವುಗಳಿಗಿಂತ ಬಣ್ಣ, ಗಾತ್ರಗಳಲ್ಲಿ ವಿಭಿನ್ನವಾಗಿವೆ. ಅವುಗಳು ಬೆಳೆದಂತೆ ಅದರ ಬಣ್ಣ, ಚಿಪ್ಪುಗಳ ಗಾತ್ರ ದೊಡ್ಡದಾಗುವುದರ ಜತೆಗೆ ಗಟ್ಟಿಮುಟ್ಟಾಗಿಯೂ ಬೆಳೆಯುತ್ತವೆ. ಮನುಷ್ಯರು ತಮ್ಮ ಕೈಗಳಿಂದ ಚಿಪ್ಪನ್ನು ಪುಡಿ ವಾಡಲು ಯತ್ನಿಸಿದರೆ ವಿಫಲವಾಗುವುದೇ ಹೆಚ್ಚು. ಜತೆಗೆ ಇದರಲ್ಲಿ ಅಂಟಿನ ಅಂಶಗಳು ಹೆಚ್ಚಾಗಿದ್ದು, ಅವುಗಳು ಸಂಚರಿಸಿದ ಜಾಗಗಳಲ್ಲಿ ಲಾವಾ ಕಂಡುಬರುತ್ತದೆ.

ಕೇರಳ, ತಮಿಳುನಾಡು ಮೂಲ

ಶಂಖಹುಳಗಳು ತಮಿಳುನಾಡು ಹಾಗೂ ಕೇರಳದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಕಾಣಿಸಿಕೊಂಡಿದ್ದು, ಹಲವು ವರ್ಷಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಹಲವೆಡೆ ಕಾಣಿಸಿಕೊಂಡು ಕೃಷಿಗೆ ತೊಂದರೆ ನೀಡಿತ್ತು. ಕೇರಳ ಹಾಗೂ ತಮಿಳುನಾಡಿನಲ್ಲಿ ತಯಾರಾಗುವ ಗಿಡಗಳ ಗೊಬ್ಬರಗಳ ಮೂಲಕ ಹುಳಗಳು ಕರ್ನಾಟಕ ಪ್ರವೇಶಿವೆ ಎಂದು ಅಂದಾಜಿಸಲಾಗಿದೆ.

ನಾವು ಅಲ್ಪ ಪ್ರವಾಣದ ಕೃಷಿಯನ್ನು ಹೊಂದಿದ್ದು, ಈ ಹುಳುವಿನಿಂದಾಗಿ ವಿಪರೀತ ತೊಂದರೆ ಅನುಭವಿಸುತ್ತಿದ್ದೇನೆ. ತೋಟದ ಜತೆಗೆ ಅಂಗಳ ಹಾಗೂ ಮನೆಯೊಳಗೂ ಇದು ಲಗ್ಗೆ ಇಟ್ಟಿದೆ. ಕೃಷಿಗೆ ಹಾನಿಯಾಗಬಹುದೆಂಬ ಆತಂಕದಿಂದ ಯಾವುದೇ ರಾಸಾಯನಿಕ ಬಳಕೆ ಮಾಡಿಲ್ಲ.

— ಚಂದ್ರಾಧರ, ಕೃಷಿಕ, ಉಜಿರೆ

ರಾಸಾಯನಿಕ ಬಳಸಿ ಶಂಖಹುಳಗಳನ್ನು ನಿಯಂತ್ರಿಸಬಹುದು. ಆದರೆ ತೋಟಗಳಿಗೆ ಬರುವ ಇತರ ಪ್ರಾಣಿಗಳಿಗೂ ಇದರಿಂದ ತೊಂದರೆ ಉಂಟಾಗುತ್ತದೆ. ಸೆಣಬಿನ ಗೋಣಿಗಳನ್ನು ಸೆಗಣಿಯಲ್ಲಿ ಅದ್ದಿ ಕಲ್ಲುಗಳನ್ನು ಇಟ್ಟು, ಅದರ ಮೇಲೆ ಇರಿಸಿದಾಗ ಶಂಖಹುಳುಗಳು ಆಕರ್ಷಣೆಗೊಂಡು ಅದರ ಮೇಲ್ಭಾಗಕ್ಕೆ ಬರುತ್ತವೆ. ಆಗ ಉಪ್ಪಿನ ದ್ರಾವಣವನ್ನು ಸಿಂಪಡಿಸಿದರೆ ಅವುಗಳು ನಾಶವಾಗುತ್ತವೆ.

— ಕೆ.ಎಸ್.ಚಂದ್ರಶೇಖರ್, ಬೆಳ್ತಂಗಡಿ ತೋಟಗಾರಿಕೆ ಇಲಾಖೆ ನಿರ್ದೇಶಕ