ಕೊಲ್ಲೂರು- ರಾಣೆಬೆನ್ನೂರು ಎನ್‌ಎಚ್ 766ರಲ್ಲಿ ಸಣ್ಣ ಸೇತುವೆ ನಿರ್ವಾಣ ಕಾಮಗಾರಿ ನಡೆಯುತ್ತಿರುವುದು.
ಕೊಲ್ಲೂರು- ರಾಣೆಬೆನ್ನೂರು ರಾಷ್ಟ್ರೀಯ ಹೆದ್ದಾರಿ 766ರ ದ್ವಿಪಥ ರಸ್ತೆಯು ಅರಣ್ಯ ಇಲಾಖೆ ಅನುಮತಿ ಸೇರಿದಂತೆ ಹಲವು ಕಾರಣಗಳಿಂದ ವಿಳಂಬವಾಗಿದ್ದು, ಬಹುತೇಕ ಕಡೆಗಳಲ್ಲಿ ಅರೆಬರೆ ಕಾಮಗಾರಿಯಿಂದಾಗಿ ಮಳೆಗಾಲದಲ್ಲಿ ಆತಂಕದ ಪರಿಸ್ಥಿತಿ ಎದುರಾಗಲಿದೆ.
ಕೊಲ್ಲೂರಿನಿಂದ ಬೈಂದೂರಿನವರೆಗೆ ಒಟ್ಟು 38 ಕಿ.ಮೀ. ವ್ಯಾಪ್ತಿ ಹೊಂದಿದ್ದು, ಮೊದಲ ಹಂತ ಬೈಂದೂರಿನಿಂದ ನಾಗೋಡಿಯವರೆಗೆ ಕಾಮಗಾರಿ ನಡೆಯಲಿದೆ. ಇದಕ್ಕಾಗಿ ಒಟ್ಟು 394 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಕೊಲ್ಲೂರು- ಬೈಂದೂರು ವಾರ್ಗದಲ್ಲಿ ಹತ್ತಾರು ತೊರೆಗಳಿಗೆ ಸಣ್ಣ ಸೇತುವೆ ನಿರ್ವಾಣ ಕಾಮಗಾರಿ ನಡೆಯುತ್ತಿದೆ. ಈಗಿರುವ ಮೂಲ ರಸ್ತೆ ಅಗೆದು ಬದಲಿ ವಾರ್ಗ ವಾಡಿಕೊಡಲಾಗಿದೆ. ಈ ಸಣ್ಣ ಸೇತುವೆ ಕಾಮಗಾರಿ ಮಳೆಗಾಲದ ಒಳಗೆ ಪೂರ್ಣಗೊಳ್ಳದಿದ್ದರೆ ಸಹ್ಯಾದ್ರಿ ಪರ್ವತದ ನೀರಿನ ಒತ್ತಡ ತಡೆಯುವುದು ಕಷ್ಟ. ನೀರಿನ ಹರಿವು ಹೆಚ್ಚಾಗಿ ಕೃಷಿಭೂಮಿ, ಮನೆಗಳಿಗೂ ಹಾನಿಯಾಗುವ ಸಾಧ್ಯತೆಯಿದೆ.
ಗುತ್ತಿಗೆದಾರರು ಕಾಮಗಾರಿಯನ್ನು ಮಂದಗತಿಯಲ್ಲಿ ನಡೆಸುತ್ತಿದ್ದು, ಸಂಸದರು, ಶಾಸಕರು ಬಹುತೇಕ ಸಭೆಗಳಲ್ಲಿ ಈ ಬಗ್ಗೆ ಉಲ್ಲೇಖಿಸಿದರೂ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಹೀಗಾಗಿ ಈ ಬಾರಿಯ ಮಳೆಗಾಲ ಕೊಲ್ಲೂರು ವಾರ್ಗದಲ್ಲಿ ಅವಾಂತರ ಸೃಷ್ಟಿಸುವ ಮುನ್ಸೂಚನೆ ಗೋಚರಿಸುತ್ತಿದೆ.
ಈವರೆಗೆ ಒಟ್ಟು 44 ಸಣ್ಣ ಸೇತುವೆಗಳಲ್ಲಿ 12 ದೊಡ್ಡ ಕಲ್ವರ್ಟ್ ಹಾಗೂ ಒಂದು ಸೇತುವೆ ನಿರ್ವಾಣ ಹಂತದಲ್ಲಿದ್ದು, ಅವುಗಳಲ್ಲಿ 24 ಸಣ್ಣ ಸೇತುವೆ ಕಾಮಗಾರಿ ಪೂರ್ಣಗೊಂಡಿವೆ. ಅರಣ್ಯ ಇಲಾಖೆ ಮೊದಲ ಹಂತದ ಅನುಮತಿ ನೀಡಿದ್ದು, ಎರಡನೇ ಹಂತದಲ್ಲಿ ಸರ್ಕಾರಕ್ಕೆ ಹಣ ಪಾವತಿಸಬೇಕು. ಆದರೆ ಅರಣ್ಯ ಇಲಾಖೆ ಮೊದಲ ಹಂತದ ಅನುಮತಿಯಲ್ಲಿ ಕೆಲವು ಸರ್ವೇ ನಂಬರ್‌ಗಳು ದಾಖಲಾಗಿಲ್ಲ ಎಂದು ಕಡತ ವಿಲೇವಾರಿ ವಾಡದ ಕಾರಣ ಕೊಲ್ಲೂರು ರಸ್ತೆ ಕಾಮಗಾರಿ ವಿಳಂಬವಾಗುತ್ತಿದೆ. ಈ ವ್ಯಾಪ್ತಿ ಕಂದಾಯ ಇಲಾಖೆ ಸಂಬಂಧಪಟ್ಟಿದ್ದು ಎನ್ನುವುದು ಹೆದ್ದಾರಿ ಇಲಾಖೆ ವಾದ.
ಇನ್ನೂ ಸಿಕ್ಕಿಲ್ಲ ಪರಿಹಾರ
ಕೊಲ್ಲೂರು ರಸ್ತೆ ಜಾಗ ಕಳೆದುಕೊಂಡವರಿಗೆ ಪೂರ್ಣ ಪ್ರವಾಣದ ಪರಿಹಾರ ದೊರೆತಿಲ್ಲ. ಈ ಬಗ್ಗೆ ಬೈಂದೂರಿನಲ್ಲಿ ಅಧಿಕಾರಿಗಳ ವಿಶೇಷ ಸಭೆ ನಡೆಸಿದ್ದು, ಇದುವರಗೆ ಪರಿಹಾರ ಸಿಕ್ಕಿಲ್ಲ. ಅತಿವೃಷ್ಟಿ ಸಮಸ್ಯೆ, ನೆರೆಹಾವಳಿ ನಡುವೆ ಪ್ರತಿ ನಿತ್ಯ ಸಾವಿರಾರು ಜನ ಪ್ರಯಾಣಿಸುವ ಬೈಂದೂರು- ಕೊಲ್ಲೂರು ರಸ್ತೆ ಕಾಮಗಾರಿ ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಮುಂಜಾಗ್ರತೆ ವಹಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಮೇ ಅಂತ್ಯದವರಗೆ ಕೊಲ್ಲೂರು ರಸ್ತೆಯಲ್ಲಿ ಎಷ್ಟು ಕಾಮಗಾರಿ ನಡೆಯುತ್ತದೆ ಅಷ್ಟಕ್ಕೆ ಕಾಮಗಾರಿ ಸ್ಥಗಿತಗೊಳಿಸಲಾಗುವುದು. ಕೊಲ್ಲೂರು ರಸ್ತೆ ಹೊರಭಾಗದ ಕಾಮಗಾರಿ ಮುಂದುವರಿಯುತ್ತದೆ. ಇದರಿಂದ ಸಂಚಾರಕ್ಕೆ ಸಮಸ್ಯೆಯಾಗುವುದಿಲ್ಲ. ಮಳೆಗಾಲದಲ್ಲಿ ರಸ್ತೆ ಕಾಮಗಾರಿಯಿಂದ ಯಾವುದೇ ಸಮಸ್ಯೆಯಾಗಲ್ಲ. ಯಂತ್ರಗಳು ಹಾಗೂ ಸಿಬ್ಬಂದಿ ಸ್ಥಳದಲ್ಲಿರುತ್ತದೆ. ಯಾವುದೇ ಆತಂಕಪಡುವ ಅವಶ್ಯಕತೆಯಿಲ್ಲ.
— ಶಶಿಧರ, ಇಂಜಿನಿಯರ್, ರಾಷ್ಟ್ರೀಯ ಹೆದ್ದಾರಿ ವಿಭಾಗ, ಶೃಂಗೇರಿ
ಕೊಲ್ಲೂರು- ರಾಣೆಬೆನ್ನೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅವ್ಯವಸ್ಥೆಯ ಗೂಡಾಗಿ ವಾರ್ಪಟ್ಟಿದೆ. ಸೇತುವೆ ಪಕ್ಕದಲ್ಲಿ ತಾತ್ಕಾಲಿಕವಾಗಿ ನಿರ್ವಾಣ ವಾಡಿರುವ ಮಣ್ಣಿನ ರಸ್ತೆಯಲ್ಲಿ ಸಂಚರಿಸುವುದೇ ಪ್ರಯಾಸಕರ. ಈ ತಾತ್ಕಾಲಿಕ ರಸ್ತೆಯಲ್ಲಿ ನೀರು ಹಾದು ಹೋಗಲು ಪೈಪ್‌ಗಳನ್ನು ಅಳವಡಿಸಿಲ್ಲ. ಮಳೆಗಾಲದಲ್ಲಿ ಈ ರಸ್ತೆಗಳು ಕೊಚ್ಚಿಕೊಂಡು ಹೋಗುವುದಂತೂ ಗ್ಯಾರಂಟಿ. ಸಂಬಂಧಪಟ್ಟವರು ಗಮನ ವಹಿಸುವುದು ಅಗತ್ಯ.
— ಯಳಜಿತ್ ಮಂಗೇಶ ಶ್ಯಾನುಭಾಗ್, ವಕೀಲ