ಉಡುಪಿ ಮಣಿಪಾಲದಲ್ಲಿರುವ ಕಸ್ತೂರ್ಬಾ ಆಸ್ಪತ್ರೆಯ ಹೊರರೋಗಿ ವಿಭಾಗ. 
ಉಡುಪಿ

ಹಿರಿಯ ನಾಗರಿಕರ ಮಾನಸಿಕ ಆರೋಗ್ಯ ಆರೈಕೆಗೆ ವಿಶೇಷ ಚಿಕಿತ್ಸಾಲಯ

* ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಆರಂಭ

* ಪ್ರತಿ ಶುಕ್ರವಾರ ಮಧ್ಯಾಹ್ನ 2:30ರಿಂದ ಸೇವೆ

ಉಡುಪಿ: ಹಿರಿಯ ನಾಗರಿಕರಲ್ಲಿ ಕಂಡುಬರುವ ಮಾನಸಿಕ ಆರೋಗ್ಯ ಹಾಗೂ ಜ್ಞಾಪಕ ಶಕ್ತಿ ಸಂಬಂಧಿತ ಸಮಸ್ಯೆಗಳಿಗೆ ಚಿಕಿತ್ಸೆ ನೀಡುವ ಉದ್ದೇಶದಿಂದ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಹೊಸದಾಗಿ 'ಸಮಗ್ರ ವೃದ್ಧಾಪ್ಯ ಮನೋವೈದ್ಯಕೀಯ ಚಿಕಿತ್ಸಾಲಯ' (Comprehensive Geriatric Psychiatry Clinic) ಆರಂಭಿಸಿದೆ.
ಈ ಚಿಕಿತ್ಸಾಲಯವು ಪ್ರತಿ ಶುಕ್ರವಾರ ಮಧ್ಯಾಹ್ನ 2:30ರಿಂದ ಮನೋವೈದ್ಯಕೀಯ ಹೊರರೋಗಿ ವಿಭಾಗದಲ್ಲಿ (Psychiatry OPD) ಕಾರ್ಯನಿರ್ವಹಿಸಲಿದೆ. ವಯಸ್ಸಾದಂತೆ ಖಿನ್ನತೆ, ಆತಂಕ, ಜ್ಞಾಪಕ ಶಕ್ತಿ ಕುಂಠಿತ ಹಾಗೂ ಇತರ ಮಾನಸಿಕ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಹಿರಿಯ ನಾಗರಿಕರಿಗಾಗಿ ಈ ಚಿಕಿತ್ಸಾಲಯ ಮೀಸಲಾಗಿದೆ.
 ಇಲ್ಲಿನ ವೈದ್ಯರು ಹಿರಿಯ ನಾಗರಿಕರಲ್ಲಿ ಕಂಡುಬರುವ ಮನೋವೈದ್ಯಕೀಯ ಸಮಸ್ಯೆಗಳನ್ನು ಪರೀಕ್ಷಿಸಿ ಚಿಕಿತ್ಸೆ ನೀಡಲಿದ್ದಾರೆ. ಇದರೊಂದಿಗೆ ಸೌಮ್ಯ ಮನೋ ಗ್ರಹಿಕೆ ದೌರ್ಬಲ್ಯ  (mild cognitive impairment) ಹಾಗೂ ಬುದ್ಧಿಮಾಂದ್ಯ (dementia) ದಂತಹ ಸ್ಥಿತಿಗಳಿಗೂ ಚಿಕಿತ್ಸೆ ನೀಡಲಾಗುವುದು. ರೋಗಿಗಳು ಮತ್ತು ಅವರ ಕುಟುಂಬದವರಿಗೆ ಸಲಹೆ, ರೋಗ ರ್ನಿಣಯ ಹಾಗೂ ಚಿಕಿತ್ಸೆ ಎಲ್ಲವೂ ಸಹ ಒಂದೇ ಸ್ಥಳದಲ್ಲಿ ಲಭಿಸಲಿದೆ.
ಅಗತ್ಯವುಳ್ಳವರು ಚಿಕಿತ್ಸಾಲಯಕ್ಕೆ ಭೇಟಿ ನೀಡಬಹುದು. ಮಾಹಿತಿಗಾಗಿ ಸಹಾಯವಾಣಿ 0820-2922761 ಸಂಪರ್ಕಿಸಬಹುದು.

ಭಾರತದಲ್ಲಿ ಹೆಚ್ಚುತ್ತಿದೆ ವೃದ್ಧರ ಸಂಖ್ಯೆ

ಭಾರತದಲ್ಲಿ ಹಿರಿಯ ನಾಗರಿಕರ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. ಇಂದು ದೇಶದಲ್ಲಿ 60 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ಸುಮಾರು 13.8 ಕೋಟಿ ಜನರಿದ್ದಾರೆ. ಈ ಸಂಖ್ಯೆ 2031ರ ವೇಳೆಗೆ 19 ಕೋಟಿ ದಾಟಬಹುದು. 2050ರ ವೇಳೆಗೆ ಸುಮಾರು 32 ಕೋಟಿ ತಲುಪಬಹುದು. ಜನರು ದೀರ್ಘಾಯುಷ್ಯ ಬದುಕುತ್ತಿದ್ದಂತೆ ಭಾವನಾತ್ಮಕ ಹಾಗೂ ಜ್ಞಾಪಕ ಶಕ್ತಿ ಸಂಬಂಧಿತ ಸಮಸ್ಯೆಗಳೂ ಸಾಮಾನ್ಯವಾಗುತ್ತಿವೆ. ರಾಷ್ಟ್ರೀಯ ಅಧ್ಯಯನದ ಪ್ರಕಾರ 60 ವರ್ಷ ಮೇಲ್ಪಟ್ಟ ಸುಮಾರು 88 ಲಕ್ಷ ಭಾರತೀಯರು (ಪ್ರತಿ ಹದಿಮೂರರಲ್ಲಿ ಒಬ್ಬರು) ಬುದ್ಧಿಮಾಂದ್ಯತೆಯಿಂದ ಬಳಲುತ್ತಿದ್ದಾರೆ. ಪ್ರತಿ ಹತ್ತು ಹಿರಿಯ ನಾಗರಿಕರಲ್ಲಿ ಒಬ್ಬರು ಖಿನ್ನತೆಯಿಂದ ಬಳಲುತ್ತಿದ್ದಾರೆ. 
"

ಹಿರಿಯ ನಾಗರಿಕರ ಮಾನಸಿಕ ಆರೋಗ್ಯಕ್ಕೆ ಸಂಬಂಧಿತ ಹಲವು ಸಮಸ್ಯೆಗಳನ್ನು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚಿದರೆ ಪರಿಣಾಮಕಾರಿ ಚಿಕಿತ್ಸೆ ನೀಡಬಹುದು. ಸೂಕ್ತ ತಪಾಸಣೆ, ಆಪ್ತ ಸಮಾಲೋಚನೆ ಹಾಗೂ ಔಷಧೋಪಚಾರದ ಮೂಲಕ ಜ್ಞಾಪಕ ಶಕ್ತಿ ಕುಂಠಿತ ಪ್ರಕ್ರಿಯೆ ನಿಧಾನಗೊಳಿಸಬಹುದು, ಖಿನ್ನತೆ ಹಾಗೂ ಆತಂಕವನ್ನೂ ಕಡಿಮೆ ಮಾಡಬಹುದು. ಈ ಚಿಕಿತ್ಸಾಲಯವು ಹಿರಿಯ ನಾಗರಿಕರ ಪ್ರಮುಖ ಅಗತ್ಯವನ್ನು ಪೂರೈಸಲಿದೆ.

— ಡಾ. ಅವಿನಾಶ್​ ಶೆಟ್ಟಿ. ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ.