ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಕೃತಿ ಬಿಡುಗಡೆಗೊಳಿಸಿದರು. ನಬಾರ್ಡ್ ಸಿಜಿಎಂ ಸಂಗೀತಾ ಕರ್ತ, ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ಎಸ್‌ಸಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ವಿನಯಕುಮಾರ್ ಸೂರಿಂಜೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್, ಲೇಖಕ ಎಸ್.ಜಗದೀಶ್ಚಂದ್ರ ಅಂಚನ್ ಸೂಟರ್‌ಪೇಟೆ ಉಪಸ್ಥಿತರಿದ್ದರು. 
ಉಡುಪಿ

ಸಹಕಾರಿ ಕ್ಷೇತ್ರಕ್ಕೆ ನೀಡಿದ ಕೊಡುಗೆ ಸಮಗ್ರ ದಾಖಲೀಕರಣ

ವಿಜಯವಾಣಿ ಸುದ್ದಿಜಾಲ ಮಂಗಳೂರು

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಹಕಾರಿ ರಂಗಕ್ಕೆ ಭದ್ರಬುನಾದಿ ಹಾಕಿದ ಕೀರ್ತಿಶೇಷ ಮೊಳಹಳ್ಳಿ ಶಿವರಾವ್ ಅವರ ಜೀವನಾದರ್ಶ, ತ್ಯಾಗ, ಸಂಘಟನಾ ಶಕ್ತಿ ಸಮಾಜಕ್ಕೆ ಸದಾ ಪ್ರೇರಣೆ. ಕರಾವಳಿಯಲ್ಲಿ ಮೊಳಹಳ್ಳಿ ಬಿತ್ತಿದ ಸಹಕಾರ ಬೀಜ ಇಂದು ಬೃಹತ್ ವೃಕ್ಷವಾಗಿ ಬೆಳೆದು ಸಾವಿರಾರು ಕುಟುಂಬಗಳ ಬದುಕಿಗೆ ಆಶ್ರಯವಾಗಿದೆ. ಇಂತಹ ಮಹಾನ್ ವ್ಯಕ್ತಿತ್ವದ ಸಾಧನೆ ಮತ್ತು ಸಹಕಾರಿ ಕ್ಷೇತ್ರಕ್ಕೆ ಅವರು ನೀಡಿದ ಅಮೂಲ್ಯ ಕೊಡುಗೆಗಳನ್ನು ಸಮಗ್ರವಾಗಿ ದಾಖಲಿಸಿರುವ ‘ತ್ಯಾಗಮಯಿ ಮೊಳಹಳ್ಳಿ’ ಗ್ರಂಥ ಯುವಪೀಳಿಗೆಗೆ ಸ್ಫೂರ್ತಿ ನೀಡುವ ಮೌಲಿಕ ಕೃತಿಯಾಗಿದೆ ಎಂದು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಹೇಳಿದರು.
ಅಂಕಣಕಾರ, ಕ್ರೀಡಾ ಲೇಖಕ ಎಸ್.ಜಗದೀಶ್ಚಂದ್ರ ಅಂಚನ್ ಸೂಟರ್‌ಪೇಟೆ ಬರೆದ ‘ತ್ಯಾಗಮಯಿ ಮೊಳಹಳ್ಳಿ’ ಕೃತಿಯನ್ನು ಸೋಮವಾರ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಸಭಾಂಗಣದಲ್ಲಿ ಬಿಡುಗಡೆಗೊಳಿಸಿ ಮಾತನಾಡಿದರು.
ನಬಾರ್ಡ್ ಸಿಜಿಎಂ ಸಂಗೀತಾ ಕರ್ತ, ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ಎಸ್‌ಸಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ವಿನಯಕುಮಾರ್ ಸೂರಿಂಜೆ, ನಿರ್ದೇಶಕ ಅಶೋಕ್ ಕುಮಾರ್ ಶೆಟ್ಟಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್, ಮಹಾಪ್ರಬಂಧಕ ಸುನೀಲ್ ಕುಮಾರ್ ಹೊಳ್ಳ, ಸಹಕಾರ ಸಂಘಗಳ ದ.ಕ. ಜಿಲ್ಲಾ ಉಪನಿಬಂಧಕ ರಮೇಶ್ ಎಚ್.ಎನ್., ಸಹಾಯಕ ನಿಬಂಧಕ ಸುಧೀರ್ ಕುಮಾರ್, ಕೃತಿಕಾರ ಎಸ್.ಜಗದೀಶ್ಚಂದ್ರ ಅಂಚನ್ ಸೂಟರ್‌ಪೇಟೆ ಉಪಸ್ಥಿತರಿದ್ದರು. ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ಕಾರ್ಯಕ್ರಮ ನಿರೂಪಿಸಿದರು.

ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಉದ್ಯೋಗಿಯಾಗಿರುವ ಜಗದೀಶ್ಚಂದ್ರ ಅಂಚನ್, 4 ಸಾವಿರಕ್ಕೂ ಅಧಿಕ ಕ್ರೀಡಾ ಲೇಖನಗಳನ್ನು ಬರೆದು ಪತ್ರಿಕಾ ರಂಗದಲ್ಲಿಯೂ ಗುರುತಿಸಿಕೊಂಡಿದ್ದಾರೆ. ‘ತ್ಯಾಗಮಯಿ ಮೊಳಹಳ್ಳಿ’ ಕೃತಿಯ ಮೂಲಕ ಮೊಳಹಳ್ಳಿ ಶಿವರಾವ್ ಅವರ ಜೀವನ ಮತ್ತು ಸಾಧನೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉತ್ತಮ ಪ್ರಯತ್ನ ಮಾಡಿದ್ದಾರೆ. ಅಂಚನ್ ಅವರ ಅಧ್ಯಯನಶೀಲತೆ, ಸಂಶೋಧನಾ ಮನೋಭಾವ ಮತ್ತು ಪರಿಶ್ರಮ ಶ್ಲಾಘನೀಯ.

— ಡಾ.ಎಂ.ಎನ್.ರಾಜೇಂದ್ರ ಕುಮಾರ್, ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ