ರೋಬೋಟಿಕ್​ ಮೂಲಕ ಕ್ಯಾನ್ಸರ್​ ಶಸ್ತ್ರಚಿಕಿತ್ಸೆ ನಡೆಸಿದ ವಿಧಾನದ ಚಿತ್ರ. 
ಉಡುಪಿ

ಶ್ವಾಸನಾಳದ ರೋಬೋಟಿಕ್​ ಕ್ಯಾನ್ಸರ್​ ಶಸ್ತ್ರಚಿಕಿತ್ಸೆ ಯಶಸ್ವಿ

* ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ ವೈದ್ಯರ ಸಾಧನೆ

* ನಾಲ್ಕು ದಿನದಲ್ಲಿ ಚೇತರಿಸಿಕೊಂಡ 36 ವರ್ಷದ ವ್ಯಕ್ತಿ

ಉಡುಪಿ: ಅತ್ಯಂತ ಕ್ಲಿಷ್ಟಕರವಾದ ಶ್ವಾಸನಾಳದ (ಎದೆಯೊಳಗಿನ) ರೋಬೋಟಿಕ್​ ಕ್ಯಾನ್ಸರ್​ ಶಸ್ತ್ರಚಿಕಿತ್ಸೆಯನ್ನು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯು ಯಶಸ್ವಿಯಾಗಿ ನಡೆಸಿದೆ. ಇದು ಕರ್ನಾಟಕ ರಾಜ್ಯದ ಸುಧಾರಿತ ರೋಬೋಟಿಕ್​ ಕ್ಯಾನ್ಸರ್​ ಶಸ್ತ್ರಚಿಕಿತ್ಸೆಯ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲಾಗಿದೆ ಎಂದು ಆಸ್ಪತ್ರೆ ಪ್ರಕಟಣೆಯಲ್ಲಿ ತಿಳಿಸಿದೆ.
ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ 36 ವರ್ಷದ ರೋಗಿ (ಪುರುಷ)ಗೆ ಈ ಸಂಕೀರ್ಣ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಎಂಡೋಸ್ಕೋಪಿ ಮಾಡಿದಾಗ ಶ್ವಾಸನಾಳದ ಕೆಳಗಿನ ಭಾಗದಲ್ಲಿ ಗೆಡ್ಡೆ ಇರುವುದು ಪತ್ತೆಯಾಗಿತ್ತು. ಈ ಮೊದಲೇ ಬೇರೊಂದು ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮೂಲಕ ಭಾಗಶ; ಗಡ್ಡೆ ತೆಗೆದುಹಾಕಲಾಗಿತ್ತು. ಆದರೆ, ಶ್ವಾಸನಾಳದ ಕೆಳಗಿನ ಭಾಗದಲ್ಲಿ ಗಡ್ಡೆ ಉಳಿದಿದ್ದು, ಅದನ್ನು ಸಂಪೂರ್ಣವಾಗಿ ತೆಗೆಯಲಾಗಿದೆ.
ಮಣಿಪಾಲದಲ್ಲಿರುವ ಕಸ್ತೂರ್ಬಾ ಆಸ್ಪತ್ರೆ.
ಸವಾಲಿನ ಆಪರೇಷನ್​
ಶ್ವಾಸಕೋಶದ ಆಮ್ಲಜನಕವನ್ನು ನಿರಂತರ ಕಾಯ್ದುಕೊಳ್ಳಲು ಆಪರೇಷನ್​ ಮುಗಿಯುವವರೆಗೂ ವೆಂಟಿಲೇಟರ್​ ಕೊಳವೆ ಬಳಸಿ ರೋಬೋಟಿಕ್​ ಶಸ್ತ್ರಚಿಕಿತ್ಸೆ ಮಾಡುವುದು ಸವಾಲಿನ ಕಾರ್ಯವಾಗಿತ್ತು. ಸಾಂಪ್ರದಾಯಿಕ ತೆರೆದ ಶಸ್ತ್ರಚಿಕಿತ್ಸೆ ವಿಧಾನದಲ್ಲಿ ರೋಗಿಗೆ ಎದೆಯ ಮೇಲೆ ದೊಡ್ಡ ರಂಧ್ರ ಮಾಡಬೇಕಿತ್ತು. ಅದರಿಂದಾಗಿ ಹೆಚ್ಚಿನ ನೋವು, ಚೇತರಿಕೆಗೆ ದೀರ್ಘ ಸಮಯ ಬೇಕಾಗುತ್ತಿತ್ತು. ಅಲ್ಲದೆ, ಎದೆಯಮೇಲೆ ಎದ್ದು ಕಾಣುವಂತೆ ಗಾಯದ ದೊಡ್ಡ ಗುರುತು ಇರುತ್ತಿತ್ತು. ಆದರೆ, ರೋಬೋಟಿಕ್​ ಶಸ್ತ್ರಚಿಕಿತ್ಸೆಯಿಂದಾಗಿ ರೋಗಿಯು ಬೇಗನೆ ಚೇತರಿಸಿಕೊಂಡಿದ್ದು, ಚಿಕಿತ್ಸೆಯಾದ ನಾಲ್ಕನೇ ದಿನದಲ್ಲಿ ಬಿಡುಗಡೆ ಮಾಡಲಾಗಿದೆ.

ಶ್ವಾಸನಾಳದ ಪುನ: ನಿರ್ಮಾಣ

ಕೆಎಂಸಿಯ ಕ್ಯಾನ್ಸರ್​ ಶಸ್ತ್ರಚಿಕಿತ್ಸಾ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ. ನವೀನಕುಮಾರ್​ ಎ.ಎನ್​. ನೇತೃತ್ವದಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ವ್ಯಕ್ತಿಯ ಶ್ವಾಸನಾಳದ ಕವಲೊಡೆಯುವಿಕೆಯ ಮೇಲ್ಭಾಗದಲ್ಲಿದ್ದ ಗೆಡ್ಡೆಯಿಂದ ಶ್ವಾಸನಾಳದ ಕೆಳಗಿನ ಭಾಗ ಹಾನಿಗೊಳಡಿತ್ತು. ಅದನ್ನು ರೋಬೋಟಿಕ್​ ಶಸ್ತ್ರಚಿಕಿತ್ಸೆಯಿಂದ ಸಂಪೂರ್ಣ ತೆಗೆದುಹಾಕಿ, ನಂತರ ಶ್ವಾಸನಾಳದ ತುದಿಗಳನ್ನು ಸೇರಿಸುವ ಮೂಲಕ ಪುನ; ಶ್ವಾಸನಾಳ ನಿರ್ಮಿಸಲಾಯಿತು. ಆಪರೇಷನ್​ ಕಾರ್ಯದಲ್ಲಿ ಡಾ. ನವಾಜ್​ ಉಸ್ಮಾನ್​, ಡಾ. ಅಖಿಲ್​ ಪಲೋದ್​, ಡಾ. ಅನಂತ್​ ಬಾಲಕೃಷ್ಣನ್​ ಮತ್ತು ಡಾ. ಪ್ರೀತಿ ಸಹಕರಿಸಿದ್ದರು. ಅರಿವಳಿಕೆ ವಿಭಾಗದ ಪ್ರಾಧ್ಯಾಪಕಿ ಡಾ.ಅನಿತಾ ಎನ್​. ಮತ್ತು ಡಾ. ಶ್ರೇಯಾ ಪಾಲ್ಗೊಂಡಿದ್ದರು.
"

ವೈದ್ಯರ ಈ ಸಾಧನೆಯು ಕಸ್ತೂರ್ಬಾ ಆಸ್ಪತ್ರೆಗೆ ಹೆಮ್ಮೆಯ ಕ್ಷಣವಾಗಿದೆ. ಇದು ನರ್ಸಿಂಗ್​ ಸಿಬ್ಬಂದಿ, ತಂತ್ರಜ್ಞರ ಕೌಶಲ ಮತ್ತು ಸಮರ್ಪಣೆಯ ಪ್ರತಿಬಿಂಬವಾಗಿದೆ. ಭವಿಷ್ಯದಲ್ಲಿ ಕೆಎಂಸಿಯನ್ನು ಇಂತಹ ಸಂಕೀರ್ಣ ರೋಬೋಟಿಕ್​ ಕ್ಯಾನ್ಸರ್​ ಶಸ್ತ್ರಚಿಕಿತ್ಸೆ ನಿರ್ವಹಿಸುವ ಪ್ರಮುಖ ಕೇಂದ್ರವಾಗಿಸಿ ಹಾಗೂ ಸುಧಾರಿತ ತಂತ್ರಜ್ಞಾನದ ಮೂಲಕ ಉತ್ತಮ ಆರೋಗ್ಯ ಸೇವೆ ನೀಡುವ ನಮ್ಮ ಬದ್ಧತೆಯನ್ನು ಮುಂದುವರಿಸುತ್ತೇವೆ.

— ಡಾ. ಸುಧಾಕರ್​ ಕಂಟಿಪುಡಿ. ಮಾಹೆ ಬೋಧನಾ ಆಸ್ಪತ್ರೆಗಳ ಸಿಒಒ.