ಮಣಿಬಚ್ಚಲು ಹಂದಿಕಲ್ಲು ಸಂಪರ್ಕ ರಸ್ತೆ ಹದಗೆಟ್ಟಿರುವುದು.
ವಿಜಯವಾಣಿ ಸುದ್ದಿಜಾಲ ಹೆಬ್ರಿ
ಹೆಬ್ರಿ ತಾಲೂಕಿನ ಚಾರ ಪಂಚಾಯಿತಿ ವ್ಯಾಪ್ತಿಯ ಮಣಿಬಚ್ಚಲು ಹಂದಿಕಲ್ಲು ಸಂಪರ್ಕ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಓಡಾಡಲು ಬಹಳ ಕಷ್ಟವಾಗುತ್ತಿದೆ. ಇದೇ ರಸ್ತೆಯಲ್ಲಿ ದಿನನಿತ್ಯ ವಿವಿಧ ಶಾಲೆಗಳ ಬಸ್‌ಗಳು, ಅಂಗವಿಕಲ ಮಕ್ಕಳ ಸ್ಕೂಲ್ ಬಸ್ ಹಾಗೂ ಕೂಲಿ ಕಾರ್ಮಿಕರ ಸಾಗಾಟ ವಾಹನಗಳು, ಆಟೋ ರಿಕ್ಷಾಗಳು, ಕೃಷಿ ಕೂಲಿ ಕಾರ್ಮಿಕರು ಸಂಚರಿಸುತ್ತಾರೆ.
ರಸ್ತೆಯಲ್ಲಿ ಅಲ್ಲಲ್ಲಿ ಹೊಂಡ ಗುಂಡಿಗಳು ಬಿದ್ದು ಮಳೆಗಾಲದಲ್ಲಿ ಸಂಚಾರ ಕಷ್ಟವಾಗಿದೆ. ಇದು ಚಾರದ ಮಂಡಾಡಿಜಡ್ಡು, ವಂಡಾರಬೆಟ್ಟು, ಚಾರ ಬಸದಿ ರಸ್ತೆ, ಮಣಿಬಚ್ಚಲು ಹಂದಿಕಲ್ಲು ಮಾರ್ಗವಾಗಿ ಸಂತೆಕಟ್ಟೆ, ನಾಲ್ಕೂರು ಮದ್ದೂರು ಗ್ರಾಮಗಳನ್ನು ಸಂಪರ್ಕಿಸುವ ಪ್ರಮುಖ ಸಂಪರ್ಕ ರಸ್ತೆಯಾಗಿದ್ದು, ಶೀಘ್ರ ದುರಸ್ತಿ ನಡೆಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಶಾಲಾ ಮಕ್ಕಳು ಈ ರಸ್ತೆಯನ್ನು ಬಳಸುತ್ತಾರೆ. ಹೆಬ್ರಿ ಹಾಗೂ ಸಂತೆಕಟ್ಟೆಯ ಕೆಲವು ಶಾಲೆಗಳಿಗೆ ಪ್ರಮುಖ ಸಂಪರ್ಕ ರಸ್ತೆ ಇದಾಗಿದೆ. ಕೂಲಿ ಕಾರ್ಮಿಕರು ಈ ರಸ್ತೆಯನ್ನೇ ಅವಲಂಬಿಸಿದ್ದಾರೆ.
ಆದಷ್ಟು ಬೇಗ ಈ ಪ್ರಮುಖ ಸಂಪರ್ಕ ರಸ್ತೆಗೆ ಡಾಂಬರು ಹಾಕಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡಬೇಕು. ಕಾರ್ಕಳ ಶಾಸಕ ಸುನೀಲ್ ಕುಮಾರ್ ಶೀಘ್ರ ವಿಶೇಷ ಅನುದಾನ ಮಂಜೂರು ಮಾಡಿ ಸಾರ್ವಜನಿಕರಿಗಾಗುತ್ತಿರುವ ಸಮಸ್ಯೆಗೆ ಮುಕ್ತಿ ನೀಡಬೇಕು.
— ಮಿಥುನ್ ಶೆಟ್ಟಿ ಬಾವಿಗದ್ದೆ ಚಾರ ಸಾಮಾಜಿಕ ಹೋರಾಟಗಾರ
ರಸ್ತೆಯ ಬಗ್ಗೆ ಪರಿಶೀಲನೆ ನಡೆಸಿ, ಸಂಬಂಧಪಟ್ಟವರಿಗೆ ಸೂಕ್ತ ಕ್ರಮ ಜರುಗಿಸುವಂತೆ ತಿಳಿಸಲಾಗುವುದು.
— ಪ್ರಶಾಂತ್ ಇಒ, ಹೆಬ್ರಿ ತಾಲೂಕು ಪಂಚಾಯಿತಿ