ಉಡುಪಿ: ರಾಜ್ಯ ಸರ್ಕಾರದ ಮಹತ್ವಾಕಾಂ ಗ್ಯಾರಂಟಿ ಯೋಜನೆಯಾದ ಗೃಹಜ್ಯೋತಿ, ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆಗಳ ಫಲಾನುಭವಿಗಳನ್ನು ಗುರುತಿಸಲು ಮರು ಸರ್ವೇ ಕಾರ್ಯ ಮಾಡುವಾಗ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಸೂಕ್ತವಾಗಿ ಪರಿಶೀಲಿಸಬೇಕು. ಗ್ಯಾರಂಟಿಯಿಂದ ಯಾವುದೇ ಒಬ್ಬ ನೈಜ ಫಲಾನುಭವಿಗಳು ತಪ್ಪಿಹೋಗದಂತೆ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಅಶೋಕ್ ಕೊಡವೂರು ಸೂಚನೆ ನೀಡಿದರು.
ಉಡುಪಿ ಜಿಪಂ ಕಚೇರಿಯಲ್ಲಿರುವ ಡಾ. ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಶುಕ್ರವಾರ (ಸೆ.25) ಆಯೋಜಿಸಿದ್ದ ಉಡುಪಿ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ವಿವಿಧೆಡೆ ಸರ್ವರ್ ಸಮಸ್ಯೆ
ಗೃಹಲಕ್ಷ್ಮಿ ಫಲಾನುಭವಿಗಳನ್ನು ಗುರುತಿಸುವ ಕಾರ್ಯಕ್ಕಾಗಿ ಈಗಾಗಲೇ 1,050 ಗಣತಿದಾರರನ್ನು ನೇಮಿಸಲಾಗಿದೆ. ಮುಂದಿನ ದಿನಗಳಲ್ಲಿ ಮೊಬೈಲ್ ಆ್ಯಪ್ ಮೂಲಕ ಸರ್ವೇ ನಡೆಸಲು ಗಣತಿದಾರರಿಗೆ ತರಬೇತಿ ನೀಡಲಾಗುವುದು. ಅನ್ನಭಾಗ್ಯ ಯೋಜನೆಯಡಿ ಪ್ರತಿಯೊಬ್ಬರ ಪಡಿತರ ಚೀಟಿಯ ಇ-ಕೆವೈಸಿ ತಪ್ಪದೇ ಮಾಡಿಸಬೇಕು. ಕೆಲವು ಕಡೆಗಳಲ್ಲಿ ಸರ್ವರ್ ಸಮಸ್ಯೆಯಿಂದ ಪ್ರಗತಿ ಸಾಧಿಸಲಾಗುತ್ತಿಲ್ಲ. ಇಲಾಖಾ ಅಧಿಕಾರಿಗಳು ಸೂಕ್ತ ಕ್ರಮವಹಿಸಿ, ಶೇ.100 ಪ್ರಗತಿ ಸಾಧಿಸಬೇಕು ಎಂದರು.
ಶೀಘ್ರ ಪೂರ್ಣಗೊಳಿಸಿ
ಜಿಲ್ಲೆಯಲ್ಲಿ ಗೃಹಜ್ಯೋತಿ ಯೋಜನೆಯಡಿ 3.64 ಲಕ್ಷ ಜನರು ನೋಂದಣಿಯಾಗಿದ್ದು, 3.17 ಲಕ್ಷ ಜನರ ಸರ್ವೇ ಕಾರ್ಯವಾಗಿದೆ. ಬಾಕಿ ಉಳಿದ ಮನೆಗಳ ಸರ್ವೇ ಕಾರ್ಯ ಶೀಘ್ರ ಪೂರ್ಣಗೊಳಿಸಿ. ಶಕ್ತಿ ಯೋಜನೆಯ ಲಾಭ ಪಡೆಯುವಂತಾಗಲು ಗ್ರಾಮೀಣ ಜನರಿಂದ ಬಸ್ಗಳ ಬೇಡಿಕೆ ಹಾಗೂ ಮನವಿ ಬರುತ್ತಿವೆ. ಗ್ರಾಮೀಣ ಭಾಗಕ್ಕೆ ಸೂಕ್ತವಾಗಿ ಬಸ್ ವ್ಯವಸ್ಥೆ ಮಾಡಬೇಕು ಎಂದು ಕೆಎಸ್ಆರ್ಟಿಸಿ ಮತ್ತು ಪ್ರಾದೇಶಿಕ ಸಾರಿಗೆ ಪದಾಧಿಕಾರಿಗಳಿಗೆ ತಿಳಿಸಿದರು.
ಜಿಲ್ಲೆಯಲ್ಲಿ ಭಾರತ್ ಜೋಡೋ ಯುವ ಸಂಘಕ್ಕೆ ಸದಸ್ಯರ ನೋಂದಣಿ ಪ್ರಕ್ರಿಯೆ ಚಾಲ್ತಿಯಲ್ಲಿದ್ದು ಅದನ್ನು ಚುರುಕುಗೊಳಿಸಲು ಅಧಿಕಾರಿಗಳೊಂದಿಗೆ ಗ್ಯಾರಂಟಿ ಯೋಜನೆಗಳ ತಾಲೂಕು, ಹೋಬಳಿ ಮಟ್ಟದ ಪದಾಧಿಕಾರಿಗಳು ಕೈಜೋಡಿಸಬೇಕು ಎಂದು ಅಶೋಕ್ ಕೊಡವೂರು ತಿಳಿಸಿದರು.
ಸಭೆಯಲ್ಲಿ ಜಿಪಂ ಮುಖ್ಯ ಯೋಜನಾಧಿಕಾರಿ ಉದಯಕುಮಾರ್ ಶೆಟ್ಟಿ, ಜಿಲ್ಲಾ ಮಟ್ಟದ ಗ್ಯಾರಂಟಿ ಅನುಷ್ಠಾನ ಸಮಿತಿಯ ಉಪಾಧ್ಯಕ್ಷರಾದ ಸತೀಶ್, ಗೀತಾ ವಾಗ್ಲೆ, ತಾಲೂಕು ಮಟ್ಟದ ಅಧ್ಯಕ್ಷರಾದ ರಮೇಶ್ ಕಾಂಚನ್, ಸುನೀತಾ ಶೆಟ್ಟಿ, ನವೀನ್ ಚಂದ್ರ, ಮೋಹನ್ ಪೂಜಾರಿ, ಶಂಕರ್ ಶೇರಿಗಾರ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಯುವ ನಿಧಿ ಯೋಜನೆಯಡಿ 5,276 ಅಭ್ಯರ್ಥಿಗಳು ನೋಂದಣಿಯಾಗಿದ್ದು, 5,016 ಫಲಾನುಭವಿಗಳಿಗೆ 13.67 ಕೋಟಿ ರೂ.ವನ್ನು ಡಿಬಿಟಿ ಮೂಲಕ ವರ್ಗಾಯಿಸಲಾಗಿದೆ. ಪ್ರತಿ ವರ್ಷವೂ ಹೊಸ ಫಲಾನುಭವಿಗಳು ಆಯ್ಕೆಯಾಗುವುದರಿಂದ ಈ ಯೋಜನೆಯ ಬಗ್ಗೆ ಹೆಚ್ಚಿನ ಪ್ರಚಾರ ನೀಡಬೇಕು.> ಅಶೋಕ್ ಕೊಡವೂರು. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷ.