ಉಡುಪಿಯ ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳ ಆಧಾರ್ ಹಾಗೂ ಮೊಬೈಲ್ ನಂಬರ್ ಸ್ಕ್ಯಾನ್ ಮಾಡುತ್ತಿರುವುದು.
* ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಎಲ್ಲವೂ ಡಿಜಿಟಲೀಕರಣ
* 'ಡ್ರು ಕೇರ್' ಸಂಸ್ಥೆಯಿಂದ ಆನ್ಲೈನ್ ನಿರ್ವಹಣೆ
ಉಡುಪಿ ಜಿಲ್ಲೆಯ ಖಾಸಗಿ ವೈದ್ಯಕೀಯ ರಂಗವು ಸೇವಾ ಸೌಲಭ್ಯದಿಂದಲೇ ದೇಶದ ಗಮನ ಸೆಳೆಯುತ್ತದೆ. ಇದೀಗ ಜಿಲ್ಲಾ ಸರ್ಕಾರಿ ಆಸ್ಪತ್ರೆಯೂ ಸಹ ತಾನೇನೂ ಕಡಿಮೆಯಿಲ್ಲ ಎನ್ನುವಂತೆ ರೋಗಿಗಳ ಸಂಪೂರ್ಣ ಚಿಕಿತ್ಸಾ ಪ್ರಕ್ರಿಯೆಯನ್ನು ಡಿಜಿಟಲೀಕರಣಗೊಳಿಸಿ ರಾಜ್ಯದ ಗಮನ ಸೆಳೆದಿದೆ.
ಆಸ್ಪತ್ರೆಗೆ ಬರುವ ಬಡ ರೋಗಿಗಳ ಚಿಕಿತ್ಸೆಯ ಪ್ರತಿ ಹಂತವನ್ನೂ ಆನ್ಲೈನ್ ದಾಖಲೀಕರಣ ಮಾಡಲಾಗುತ್ತಿದೆ. ರಾಜ್ಯ ಸರ್ಕಾರ ಖಾಸಗಿ ಸಹಭಾಗಿತ್ವದಲ್ಲಿ ಡಿಜಿಟಲೀಕರಣ ಸೌಲಭ್ಯ ಅಳವಡಿಸಿದ್ದು ಉಡುಪಿಯಲ್ಲಿ 'ಡ್ರು ಕೇರ್' ಸಂಸ್ಥೆ ನಿರ್ವಹಿಸುತ್ತಿದೆ.
ನೋಂದಣಿಯಿಂದಲೇ ಆರಂಭ
ಜಿಲ್ಲಾಸ್ಪತ್ರೆಗೆ ಬರುವ ರೋಗಿಗಳ ನೋಂದಣಿಯಿಂದಲೇ ಡಿಜಿಟಲೀಕರಣ ಆರಂಭಗೊಳ್ಳುತ್ತದೆ. ಆಸ್ಪತ್ರೆಯ ದ್ವಾರದಲ್ಲೇ ಡ್ರು ಕೇರ್ನ ಸಿಬ್ಬಂದಿ ರೋಗಿಗಳ ಆಧಾರ್ ನಂಬರ್ ಅಥವಾ ಆಧಾರ್ ಲಿಂಕ್ ಇರುವ ಅಂಡ್ರಾಯ್ಡ್ ಮೊಬೈಲ್ ನಂಬರ್ಅನ್ನು 'ಆಭಾ ಆ್ಯಪ್'ನಲ್ಲಿ ನೋಂದಾಯಿಸಿ, ಒಟಿಪಿ ಬಂದ ಬಳಿಕ ಟೋಕನ್ ನಂಬರ್ ನೀಡುತ್ತಾರೆ. ಆ ಟೋಕನ್ ನಂಬರ್ನಲ್ಲಿರುವ ರೋಗಿಯ ಹೆಸರು, ವಯಸ್ಸು, ವಿಳಾಸ ಎಲ್ಲವೂ ಸಹ ಅದೇ ವೇಳೆಯಲ್ಲಿ ಸಂಬಂಧಿತ ವೈದ್ಯರ ಸಿಸ್ಟಮ್ಗೂ ತಲುಪಿರುತ್ತದೆ.
ವೈದ್ಯರಿಂದ ದಾಖಲೀಕರಣ
ತಮ್ಮ ಬಳಿ ಬಂದ ರೋಗಿಗಳ ತಪಾಸಣೆ ಮಾಡುವ ವೈದ್ಯರು, ಅವರಿಗೆ ನೀಡಿದ ಸಲಹೆ, ಔಷಧೋಪಚಾರ, ಚಿಕತ್ಸೆ, ರೋಗದ ವಿವರ, ಮುಂದೆ ಮಾಡಬೇಕಾದ ಚಿಕಿತ್ಸೆ, ಸೇವಿಸಬೇಕಾದ ಮಾತ್ರೆಗಳ ಮಾಹಿತಿ, ಅಗತ್ಯತೆ ಇದ್ದಲ್ಲಿ ಆಪರೇಷನ್ ಹೀಗೆ ಎಲ್ಲ ವಿಷಯವನ್ನೂ ಸಹ ವೈದ್ಯರು ಚೀಟಿಯಲ್ಲಿ (ಪ್ರಿಸ್ಕ್ರಿಪ್ಷನ್) ಬರೆದಿದ್ದರೂ ಸಹ ಅವೆಲ್ಲವನ್ನೂ ಸಹ ಅದೇ ಸಂದರ್ಭದಲ್ಲಿ ರೋಗಿಯ ನೋಂದಣಿಯಾದ ಖಾತೆಯಲ್ಲಿ ದಾಖಲೀಕರಣ ಮಾಡುತ್ತಾರೆ.
ವಿಭಾಗಗಳಿಗೆ ಮಾಹಿತಿ ರವಾನೆ
ತಪಾಸಣೆ ಮಾಡಿದ ವೈದ್ಯರು ರೋಗಿಗಳಿಗೆ ರಕ್ತ ತಪಾಸಣೆ, ಎಂಆರ್ಐ, ಸಿಟಿ, ಡಾಪ್ಲರ್ ಸ್ಕ್ಯಾನಿಂಗ್, ಎಕ್ಸರೇ ಮಾಡಬೇಕೆಂದು ಉಲ್ಲೇಖಿಸಿದ್ದರೆ ಆ ಮಾಹಿತಿ ಆಯಾ ವಿಭಾಗಕ್ಕೂ ಆನ್ಲೈನ್ ಮೂಲಕ ರವಾನೆ ಆಗುತ್ತದೆ. ರೋಗಿ ಆ ವಿಭಾಗಕ್ಕೆ ಹೋದರೆ ಕೂಡಲೇ ಸಂಬಂಧಿತ ಚಿಕಿತ್ಸೆ ನಡೆಯಲಿದೆ. ಬಳಿಕ ಕೈಗೊಂಡ ಚಿಕಿತ್ಸೆ, ಬಂದಿರುವ ಕಾಯಿಲೆ, ಸೇವಿಸಬೇಕಾದ ಮಾತ್ರೆ, ಮತ್ತೆ ಆಸ್ಪತ್ರೆಗೆ ಬರಬೇಕಾದ ದಿನ ಹೀಗೆ ಸಿದ್ಧಗೊಂಡ ಸಂಪೂರ್ಣ ವರದಿ ರೋಗಿಯ ಮೊಬೈಲ್ಗೆ ವರದಿ (ರಿಪೋರ್ಟ್) ಬರಲಿದೆ.
ರಿಪೋರ್ಟ್ ಬಿಟ್ಟು ಬಂದರೂ ಚಿಂತೆಯಿಲ್ಲ
ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ನೋಂದಣಿಯಾದ ಎಲ್ಲ ರೋಗಿಗಳ ಸಂಪೂರ್ಣ ಮಾಹಿತಿ ತಂತ್ರಾಂಶದಲ್ಲಿಯೇ ದಾಖಲಾಗಿರುತ್ತದೆ. ಹೀಗಾಗಿ ಮುಂದಿನ ತಪಾಸಣೆಯ ವೇಳೆ ಆಸ್ಪತ್ರೆಗೆ ಬರುವಾಗ ಹಿಂದಿನ ರಿಪೋರ್ಟ್ ಫೈಲ್ ತರಲು ಒಂದೊಮ್ಮೆ ರೋಗಿ ಮರೆತರೂ ಈಗ ಚಿಂತೆಯಿಲ್ಲ. ರೋಗಿಯ ಮೊಬೈಲ್ ನಂಬರ್ ಅಥವಾ ಆಧಾರ್ ನಂಬರ್ ಹೇಳಿದರೆ ಹಳೆಯ ಮಾಹಿತಿ 'ಆಭಾ ಆ್ಯಪ್' ತಂತ್ರಾಂಶದ ಮೂಲಕ ವೈದ್ಯರಿಗೆ ಲಭ್ಯವಾಗುತ್ತದೆ ಎನ್ನುತ್ತಾರೆ ಉಡುಪಿ ಜಿಲ್ಲಾಸ್ಪತ್ರೆಯ ಮಾಹಿತಿ ತಂತ್ರಜ್ಞಾನ ವಿಭಾಗದ ಕಾರ್ಯನಿರ್ವಾಹಕ ಶ್ರೇಯಸ್.
ಅನುಷ್ಠಾನದಲ್ಲಿ ಉಡುಪಿ ಪ್ರಥಮ
ರಾಜ್ಯ ಸರ್ಕಾರ ಪ್ರಾಯೋಗಿಕವಾಗಿ ರಾಜ್ಯದ ನಾಲ್ಕು ಜಿಲ್ಲೆಯ ಜಿಲ್ಲಾಸ್ಪತ್ರೆಯಲ್ಲಿ ಡಿಜಿಟಲೀಕರಣ ವ್ಯವಸ್ಥೆ ಜಾರಿಗೊಳಿಸಿದೆ. ಈ ಸೌಲಭ್ಯವನ್ನು ಉತ್ತಮವಾಗಿ ಹಾಗೂ ಸಂಪೂರ್ಣವಾಗಿ ಅನುಷ್ಠಾನ ಮಾಡುವಲ್ಲಿ ಉಡುಪಿ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ. ಉಡುಪಿ ಶೇ.75, ಬಳ್ಳಾರಿ ಶೇ.50, ಧಾರವಾಡ ಶೇ.40 ಹಾಗೂ ತುಮಕೂರು ಜಿಲ್ಲಾಸ್ಪತ್ರೆ ಶೇ.30 ಸಾಧನೆ ಮಾಡಿದೆ.
ಜಿಲ್ಲಾಸ್ಪತ್ರೆಯಲ್ಲಿ ಈ ಮೊದಲು ಮ್ಯಾನ್ಯುವಲ್ ವ್ಯವಸ್ಥೆ ಇತ್ತು. ಇದೀಗ ಡ್ರು ಕೇರ್ ಸಾಫ್ಟ್ ವೇರ್ ಮೂಲಕ ಆನ್ಲೈನ್ನಲ್ಲಿಯೇ ರೋಗಿಗಳ ಸಂಪೂರ್ಣ ಚಿಕಿತ್ಸಾ ಮಾಹಿತಿ ನಿರ್ವಹಿಸಲಾಗುತ್ತಿದೆ. ಇದಕ್ಕಾಗಿ ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗೂ ವಿಶೇಷ ತರಬೇತಿ ನೀಡಲಾಗಿದೆ.
ಡ್ರು ಕೇರ್ ಸಂಸ್ಥೆಯಲ್ಲಿ ಮಾತ್ರ ಎಲ್ಐಎಂಎಸ್ (ಲ್ಯಾಬರೇಟರಿ ಇನ್ಫಾರ್ಮೇಷನ್ ಮೆನೇಜ್ಮೆಂಟ್ ಸಿಸ್ಟಮ್) ವ್ಯವಸ್ಥೆ ಇರುವುದರಿಂದ ಚಿಕಿತ್ಸೆಯ ಹಾಗೂ ಲ್ಯಾಬ್ನ ಎಲ್ಲ ಹಂತದ ಮಾಹಿತಿಯೂ ಅಪ್ಲೋಡ್ ಆಗುತ್ತದೆ. ಇದರಿಂದ ರೋಗಿ ಹಾಗೂ ವೈದ್ಯರಿಗೂ ಸಹ ಸಮಯ ಉಳಿತಾಯ ಆಗಲಿದೆ. ರಿಪೋರ್ಟ್ಗಾಗಿ ದಿನಗಟ್ಟಲೆ ಕಾಯಬೇಕಿಲ್ಲ.