ಕ್ಯಾನ್ಸರ್ ಜಾಗೃತಿ ಬೈಕ್ ರ‌್ಯಾಲಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಚಾಲನೆ ನೀಡಿದರು. ಡಾ.ಅವಿನಾಶ್ ಶೆಟ್ಟಿ, ಡಾ.ಸುಧಾಕರ್ ಕಂಟಿಪುಡಿ ಇತರರು ಇದ್ದರು.  
ಉಡುಪಿ

ಸಮುದಾಯದ ಸಹಕಾರ ಅತ್ಯವಶ್ಯ

ಇಂದಿರಾ ಎನ್ ಕೆ
ವಿಜಯವಾಣಿ ಸುದ್ದಿಜಾಲ ಉಡುಪಿ
ಸಾರ್ವಜನಿಕ ಜಾಗೃತಿ ಕಾರ್ಯಕ್ರಮಗಳಲ್ಲಿ ಶಿಸ್ತು, ಸುರಕ್ಷಿತ ವಾಹನ ಚಾಲನೆ ಹಾಗೂ ಸಮುದಾಯದ ಸಹಕಾರ ಅತ್ಯಂತ ಮಹತ್ವದ್ದಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಹೇಳಿದರು.
ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲ ಆಟೋ ಕ್ಲಬ್, ರಾಯಲ್ ಎನ್‌ಫೀಲ್ಡ್ ರೈಡರ್ಸ್ ಹಾಗೂ ಆಭರಣ ಮೋಟಾರ್ಸ್ ಸಹಯೋಗದೊಂದಿಗೆ ಕ್ಯಾನ್ಸರ್ ತಡೆ, ಆರಂಭಿಕ ಪತ್ತೆ ಹಾಗೂ ಕ್ಯಾನ್ಸರ್ ವಿರುದ್ಧ ಹೋರಾಟದಲ್ಲಿ ಸಾರ್ವಜನಿಕರ ಒಗ್ಗಟ್ಟಿನ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಆಯೋಜಿಸಿದ್ದ ಬೈಕ್ ರ‌್ಯಾಲಿಗೆ ಚಾಲನೆ ನೀಡಿ ಮಾತನಾಡಿದರು.
ಕೆಎಂಸಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಸುಧಾಕರ್ ಕಂಟಿಪುಡಿ ಮಾತನಾಡಿ, ಕ್ಯಾನ್ಸರ್ ಪ್ರಕರಣ ಹೆಚ್ಚುತ್ತಿರುವುದು ಆತಂಕಕಾರಿಯಾಗಿದ್ದು, ಜಾಗೃತಿ, ನಿಯಮಿತ ತಪಾಸಣೆ ಹಾಗೂ ಜೀವನಶೈಲಿ ಬದಲಾವಣೆ ಅಗತ್ಯವಾಗಿದೆ. ಇಂತಹ ಜಾಥಾಗಳ ಮೂಲಕ ಆಸ್ಪತ್ರೆಯ ಮಿತಿಯನ್ನು ಮೀರಿ ಸವಾಜದೊಳಗೆ ಆರೋಗ್ಯ ಸಂದೇಶವನ್ನು ತಲುಪಿಸಲು ಸಾಧ್ಯವಾಗುತ್ತದೆ ಎಂದರು.
ಮಣಿಪಾಲ ಹೆಲ್ತ್ ಎಂಟರ್‌ಪ್ರೈಸಸ್ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದಿಲೀಪ್ ಜೋಸ್ ಗೌರವ ಅತಿಥಿಯಾಗಿದ್ದರು. ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವೈದ್ಯಕೀಯ ಆಂಕಾಲಜಿ ವಿಭಾಗ ಮುಖ್ಯಸ್ಥ ಡಾ.ಅನಂತ್ ಪೈ ವಿಶ್ವ ಕ್ಯಾನ್ಸರ್ ದಿನದ ಮಹತ್ವದ ಕುರಿತು ವಾಹಿತಿ ನೀಡಿದರು.

100ಕ್ಕೂ ಹೆಚ್ಚು ಮಂದಿ ಭಾಗಿ

ಬೈಕ್ ರ‌್ಯಾಲಿಯಲ್ಲಿ 100ಕ್ಕೂ ಹೆಚ್ಚು ಬೈಕ್ ಸವಾರರು ಉತ್ಸಾಹದಿಂದ ಭಾಗವಹಿಸಿದ್ದರು. ಜಾಥಾ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಿಂದ ಹೊರಟು ಉಡುಪಿ ಮುಖ್ಯ ರಸ್ತೆಯ ಮೂಲಕ ಕಿನ್ನಿಮುಲ್ಕಿ ಸ್ವಾಗತ ಗೋಪುರದವರೆಗೆ ಸಾಗಿ ಅಲ್ಲಿಂದ ಮರಳಿ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಸಮಾಪನಗೊಂಡಿತು.