* ಹೋಟೆಲ್ಗಳು ಬಹುತೇಕ ಸ್ಥಗಿತ
* ಗೃಹ ಬಳಕೆಯ ಗ್ಯಾಸ್ ದರ ಜಿಗಿತ
ಇರಾನ್ ವಿರುದ್ಧ ಅಮೆರಿಕ-ಇಸ್ರೇಲ್ ಜಂಟಿ ಸಮರ ಮುಂದುವರಿದಿದ್ದು, ಮಧ್ಯಪ್ರಾಚ್ಯ ರಾಷ್ಟ್ರಗಳು ಯುದ್ಧಪಿಡಿತ ಪ್ರದೇಶವಾಗಿ ಸಮಸ್ಯೆ ಅನುಭವಿಸುತ್ತಿದೆ. ಕೊಲ್ಲಿ ರಾಷ್ಟ್ರಗಳಲ್ಲಿನ ನಡೆಯುತ್ತಿರುವ ಯುದ್ಧದ ದುಷ್ಪರಿಣಾಮ ಇದೀಗ ನಿಧಾನಕ್ಕೆ ಭಾರತಕ್ಕೂ ತಟ್ಟಿದ್ದು, ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ಸಮಸ್ಯೆ ತಲೆದೋರಿದೆ.
ರಾಜ್ಯಾದ್ಯಂತ ವಾಣಿಜ್ಯ (ಕಮರ್ಷಿಯಲ್) ಸಿಲಿಂಡರ್ನ ಬಿಲ್ಲಿಂಗ್ ಸ್ಥಗಿತಗೊಂಡಿದ್ದು, ಗ್ಯಾಸ್ ಲಭ್ಯವಿಲ್ಲದೆ ಇಂದಿನಿಂದಲೇ ಬಹುತೇಕ ಎಲ್ಲ ಹೋಟೆಲ್, ರೆಸ್ಟೋರೆಂಟ್ಗಳು ಬಂದ್ ಆಗಲಿದೆ. ನಿತ್ಯವೂ ಹೋಟೆಲ್ ಅವಲಂಬನೆ ಮಾಡಿರುವ ಉದ್ಯೋಗಿಗಳಿಗೆ ಹಾಗೂ ಕೂಲಿ ಕಾರ್ಮಿಕರಿಗೆ ಆಹಾರದ ಸಮಸ್ಯೆ ಉಂಟಾಗುವ ಸಾಧ್ಯತೆ ಹೆಚ್ಚಿದೆ.
ಕಮರ್ಷಿಯಲ್ ಪೂರೈಕೆ ಸ್ಥಗಿತ
ಮಂಗಳೂರಿನ ಎಚ್ಪಿಸಿಎಲ್ನಲ್ಲಿ ವಾಣಿಜ್ಯ ಬಳಕೆಯ ಸಿಲಿಂಡರ್ ಬಿಲ್ಲಿಂಗ್ ವ್ಯವಸ್ಥೆಯನ್ನೇ ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ಮಂಗಳೂರು ಜಿಲ್ಲೆ ಹಾಗೂ ಉಡುಪಿ ಜಿಲ್ಲೆಗಳಲ್ಲಿರುವ ಗ್ಯಾಸ್ ವಿತರಕರಿಗೆ ವಾಣಿಜ್ಯ ಸಿಲಿಂಡರ್ ಲಭ್ಯವಾಗುತ್ತಿಲ್ಲ. ಸಿಲಿಂಡರ್ ಲಭಿಸುವುದಿಲ್ಲ ಎಂಬ ಊಹೆಯ ಮೇರೆಗೆ 2 ದಿನದ ಹಿಂದೆಯೇ ಅಗತ್ಯಕ್ಕಿಂತ ಹೆಚ್ಚು ಕಮರ್ಷಿಯಲ್ ಸಿಲಿಂಡರ್ ಪಡೆದಿರುವ ಹೋಟೆಲ್ನವರು ಬುಧವಾರ (ಮಾ.11) ಅರ್ಧ ದಿನ ಅಥವಾ ಸಾಯಂಕಾಲದವರೆಗೆ ಹೋಟೆಲ್ ಉದ್ಯಮ ನಡೆಸಲಿದ್ದಾರೆ.
ರೇಶನಿಂಗ್ ವ್ಯವಸ್ಥೆ
ಕಮರ್ಷಿಯಲ್ ಗ್ಯಾಸ್ನ ಬಿಲ್ಲಿಂಗ್ ಸ್ಥಗಿತಗೊಂಡಿದ್ದರೂ ಸಹ ಅಗತ್ಯ ಸೇವೆಗಳಾದ ಆಸ್ಪತ್ರೆ, ಶಾಲೆ ಹಾಗೂ ತುರ್ತು ಸೇವೆಗಳಿಗೆ ಗ್ಯಾಸ್ ವಿತರಿಸಲು ವ್ಯವಸ್ಥೆ ಮಾಡಲಾಗುತ್ತಿದೆ. ಎಲ್ಲ ಡೀಲರ್ಗಳ ಬಳಿ ಮಂಗಳೂರಿನ ಎಚ್ಪಿಸಿಎಲ್ನವರು ತುರ್ತು ಸೇವೆಗಳಿಗೆ ಬೇಕಿರುವ ಸಿಲಿಂಡರ್ನ ಮಾಹಿತಿಯ ವರದಿ ಪಡೆದಿದೆ. ಎಲ್ಲ ಡೀಲರ್ಗಳ ವರದಿ ಆಧಾರದ ಮೇಲೆ ರೇಶನಿಂಗ್ ಪದ್ಧತಿಯಲ್ಲಿ ತುರ್ತು ಗ್ರಾಹಕರಿಗೆ ವಾಣಿಜ್ಯ ಸಿಲಿಂಡರ್ ನೀಡುವ ವ್ಯವಸ್ಥೆ ಮಾಡಲಾಗುತ್ತಿದೆ.
ಗ್ರಾಹಕರಿಗೆ ದರ ಏರಿಕೆಯ ಬಿಸಿ
ಸಿಲಿಂಡರ್ ಅಲಭ್ಯತೆಯ ನಡುವೆಯೇ ಗೃಹಬಳಕೆಯ ಹಾಗೂ ವಾಣಿಜ್ಯ ಬಳಕೆಯ ಸಿಲಿಂಡರ್ ದರವನ್ನೂ ಕೇಂದ್ರ ಸರ್ಕಾರ ಏರಿಕೆ ಮಾಡಿದೆ. ಮನೆ ಬಳಕೆಯ ಸಿಲಿಂಡರ್ ದರ ಈ ಹಿಂದೆ 855.50 ರೂ. ಇದ್ದು ಮೂರು ದಿನದ ಹಿಂದೆ 60 ರೂ. ಏರಿಕೆಯಾಗಿದ್ದು ಪ್ರಸ್ತುತ 915.50 ರೂ. ಇದೆ. ಕಮರ್ಷಿಯಲ್ ದರ ಈ ಹಿಂದೆ 1,760 ರೂ. ಇದ್ದು ಇದೀಗ 115 ರೂ. ಏರಿಕೆಯಾಗಿದ್ದು, ಪ್ರಸ್ತುತ 1,875 ರೂ. ಆಗಿದೆ. ಒಂದೇ ಸಿಲಿಂಡರ್ ಇರುವ ಮನೆ ಬಳಕೆಯ ಗ್ರಾಹಕರಿಗೆ ಬಿಕ್ಕಿಂಗ್ ಅವಧಿಯನ್ನು 21 ದಿನದ ಬದಲಾಗಿ 25 ದಿನಕ್ಕೆ ಹಾಗೂ ಡಬಲ್ ಇದ್ದವರಿಗೆ 30 ದಿನದ ಬದಲಾಗಿ 35 ದಿನಕ್ಕೆ ಏರಿಸಲಾಗಿದೆ. ಅನೇಕ ಗ್ರಾಹಕರಿಗೆ ಗ್ಯಾಸ್ ಬುಕಿಂಗ್ ಆಗುತ್ತಿದ್ದರೂ ಒಟಿಪಿ ಬರುತ್ತಿಲ್ಲ. ಇದು ಸಿಲಿಂಡರ್ ಲಭಿಸಲು ತೊಡಕಾಗುತ್ತಿದೆ.
ಕೇಂದ್ರ ಇಂಧನ ಸಚಿವಾಲಯದ ಟ್ವೀಟ್
ಗ್ಯಾಸ್ ಇಲ್ಲದೆ ಹೋಟೆಲ್ ಉದ್ಯಮ ನಡೆಸಲು ಸಾಧ್ಯವಿಲ್ಲ. ಕೆಲಸಗಾರರಿಗೂ ಇದರಿಂದ ತೀವ್ರ ತೊಂದರೆ ಆಗಲಿದೆ. ಸಿಲೆಂಡರ್ನ ಈ ಸಮಸ್ಯೆ ಇನ್ನೆಷ್ಟು ದಿನ ಎಂದು ತಿಳಿಯದು. ಸರ್ಕಾರ ಆದಷ್ಟು ಬೇಗ ಇದಕ್ಕೊಂದು ಸೂಕ್ತ ಪರಿಹಾರ ಸೂಚಿಸಬೇಕು. ಇಲ್ಲದಿದ್ದಲ್ಲಿ ಜನಜೀವನಕ್ಕೆ ತುಂಬ ತೊಡಕಾಗಲಿದೆ.
ಗೃಹಬಳಕೆಯ ಸಿಲಿಂಡರ್ ಸರಬರಾಜಿಗೆ ಸದ್ಯಕ್ಕೆ ತೊಂದರೆ ಇಲ್ಲ. ಆದರೆ, ಕಮರ್ಷಿಯಲ್ ಗ್ಯಾಸ್ ಪೂರೈಕೆ ಸ್ಥಗಿತ ಆಗಿದೆ. ಕರೊನಾ ಸಂದರ್ಭದಲ್ಲಿನ ಲಾಕ್ಡೌನ್ಗಿಂತ ಕೆಟ್ಟದಾದ ಮತ್ತು ಕೀಳುಮಟ್ಟದ ಪರಿಸ್ಥಿತಿ ಉಂಟಾಗುತ್ತಿದೆ. ಡೀಲರ್ಗಳ ಮೇಲೂ ಗ್ರಾಹಕರು ಸಂಶಯ ವ್ಯಕ್ತಪಡಿಸುವಂತಾಗಿದೆ.