ಗ್ಯಾಸ್ ಸಿಲಿಂಡರ್ ಅಲಭ್ಯತೆಯಿಂದ ವಾರಗಳ ಕಾಲ ಹೋಟೆಲ್ ಬಂದ್ ಇರಲಿದೆ ಎಂದು ಶರ್ಟಸ್ನ ಮೇಲೆ ನೋಟಿಸ್ ಅಂಟಿಸಿರುವುದು.
* ಸಣ್ಣ-ಮಧ್ಯಮ ಅಂಗಡಿಗಳಿಗೆ ಬೀಗಮುದ್ರೆ
* ಗೃಹಬಳಕೆಯ ಸಿಲಿಂಡರ್ ಪೂರೈಕೆಯಲ್ಲೂ ವಿಳಂಬ
ಕೊಲ್ಲಿ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧ ಸದ್ಯಕ್ಕೆ ಅಂತ್ಯ ಕಾಣುವ ಲಕ್ಷಣ ಇಲ್ಲದಾಗಿದ್ದು, ಇತ್ತ ವಾಣಿಜ್ಯ ಬಳಕೆಯ ಸಿಲಿಂಡರ್ ಗ್ಯಾಸ್ನ ಸಮಸ್ಯೆಯೂ ಅಂತ್ಯವಾಗುವ ಸಾಧ್ಯತೆ ಕಾಣುತ್ತಿಲ್ಲ. ಕಮರ್ಷಿಯಲ್ ಗ್ಯಾಸ್ನ ಪೂರೈಕೆ ಸಂಪೂರ್ಣ ಸ್ಥಗಿತಗೊಂಡಿದ್ದರಿಂದ ಉಡುಪಿ ಜಿಲ್ಲೆಯ ಪ್ರಮುಖ ಹೋಟೆಲ್ಗಳಲ್ಲಿ ಕಟ್ಟಿಗೆ ಒಲೆಯ ಮೂಲಕ ಅಡುಗೆ ಕಾರ್ಯ ಮುಂದುವರಿದಿದೆ.
4-5 ದಿನದಿಂದ ಸಣ್ಣ ಹಾಗೂ ಮಧ್ಯಮ ಪ್ರಮಾಣದ ಹೋಟೆಲ್ಗಳು ಗ್ಯಾಸ್ ಅಲಭ್ಯತೆಯಿಂದ ತಮ್ಮ ಅಂಗಡಿಗಳನ್ನು ಮುಚ್ಚಿದ್ದಾರೆ. ಕಟ್ಟಿಗೆ ಒಲೆ ಬಳಸಿ ಅಡುಗೆ ಮಾಡಲು ಸ್ಥಳಾವಕಾಶ ಇಲ್ಲದ ಹೋಟೆಲ್ನವರು ಶರ್ಟಸ್ ಮುಚ್ಚಿದ್ದು, 'ಕಾರಣಾಂತರದಿಂದ ಒಂದು ವಾರ ಹೋಟೆಲ್ ಬಂದ್ ಇರಲಿದೆ' ಎಂಬ ನೋಟಿಸ್ ಅಂಟಿಸಿದ್ದಾರೆ.
ದೋಸೆ-ಉಪ್ಪಿಟ್ಟೇ ಗತಿ
ಇಂದು-ನಾಳೆ ಕಮರ್ಷಿಯಲ್ ಗ್ಯಾಸ್ ಪೂರೈಕೆ ಆಗಬಹುದೆಂದು ಕಾದು ಕುಳಿತಿದ್ದ ಕೆಲ ಹೋಟೆಲ್ನ ಮಾಲೀಕರಿಗೆ ನಿರಾಸೆಯಾಗಿದೆ. ವಿದ್ಯುತ್ ಒಲೆಯ ಮೂಲಕ ಒಮ್ಮೆಲೆ 50 ಪ್ಲೇಟ್ನಷ್ಟು ದೋಸೆ ಸಿದ್ಧಪಡಿಸಿ ಹಾಟ್ ಬಾಕ್ಸ್ನಲ್ಲಿ ಇಟ್ಟುಕೊಂಡಿದ್ದಾರೆ. ಇನ್ನೊಂದು ಬಗೆಯ ತಿಂಡಿಯಾಗಿ ಉಪ್ಪಿಟ್ಟು ಮಾತ್ರ ಬೆಳಗ್ಗೆ ಲಭಿಸುತ್ತಿದೆ. ಕೆಲ ಹೋಟೆಲ್ನವರು ಕೇವಲ ಇಡ್ಲಿ&ಸಾಂಬಾರ್ ಮಾತ್ರ ಸಿದ್ಧಪಡಿಸುತ್ತಿದ್ದಾರೆ. ಗ್ರಾಹಕರೂ ಸಹ ಬೇರೆ ಗತಿಯಿಲ್ಲದೆ ಹಸಿವು ನೀಗಿಸಿಕೊಳ್ಳಲು ಇದನ್ನೇ ನೆಚ್ಚಿಕೊಳ್ಳುವಂತಾಗಿದೆ. ಮಧ್ಯಾಹ್ನದ ಊಟಕ್ಕೆ ಅನ್ನ-ಸಾಂಬಾರ್, ಕರ್ಡ್ ರೈಸ್ ಮಾತ್ರ ಲಭಿಸುತ್ತಿದೆ. ಕೆಲವು ಹೋಟೆಲ್ಗಳಲ್ಲಿ ಊಟವೇ ಸ್ಥಗಿತವಾಗಿದೆ.
ಗ್ಯಾಸ್ ಪೂರೈಕೆಗೆ ಒಟಿಪಿ ನೀಡುವುದು ಕಡ್ಡಾಯ
ಗೃಹ ಬಳಕೆಯ ಸಿಲಿಂಡರ್ ಗ್ಯಾಸ್ ಪೂರೈಕೆಯಲ್ಲಿ ಕೊರತೆ ಇಲ್ಲ. ಆದರೆ, ತಮಗೆ ಸಿಲಿಂಡರ್ ಸಿಗದಿದ್ದರೆ ಎಂಬ ಕಾರಣಕ್ಕಾಗಿ ನಿಗದಿತ ದಿನಕ್ಕಿಂತ ಮೊದಲೇ ಹೆಚ್ಚಿನ ಗ್ರಾಹಕರು ಬುಕಿಂಗ್ ಮಾಡತೊಡಗಿದ್ದಾರೆ. ಇದರಿಂದ ಏಜೆನ್ಸಿಯವರಿಗೆ ನಿತ್ಯಕ್ಕಿಂತ ಹೆಚ್ಚು ಬಿಲ್ಲಿಂಗ್ ಕಾರ್ಯ ನಿರ್ವಹಿಸುವಂತಾಗಿದ್ದು, ಪೂರೈಕೆಯಲ್ಲೂ 4-5 ದಿನ ವಿಳಂಬ ಆಗುತ್ತಿದೆ. ಗ್ಯಾಸ್ ಬುಕಿಂಗ್ನ ಸರ್ವರ್ ಕೂಡ ಈಗ ಬ್ಯುಸಿಯಾಗಿದ್ದು, ಬೆಳಗ್ಗೆ ಬೇಗ ಅಥವಾ ರಾತ್ರಿ ಅವಧಿಯಲ್ಲಿ ಬುಕಿಂಗ್ ಆಗುತ್ತಿದೆ. ಒಂದೇ ಸಿಲಿಂಡರ್ ಇರುವವರು 25 ದಿನದ ಬಳಿಕ ಹಾಗೂ ಎರಡು ಸಿಲಿಂಡರ್ ಇರುವವರು 30 ದಿನದ ಬಳಿಕವೇ ಬುಕಿಂಗ್ ಮಾಡಬೇಕಿದೆ. ಇದಕ್ಕೂ ಮುನ್ನ ಬುಕ್ ಮಾಡಿದ ಕೆಲವರಿಗೆ ಒಟಿಪಿ ಲಭಿಸಿಲ್ಲ. ಮನೆಗೆ ಸಿಲಿಂಡರ್ ಪೂರೈಕೆ ಮಾಡುವಾಗ ಒಟಿಪಿ ನೀಡುವುದು ಕಡ್ಡಾಯ. ಇಲ್ಲದಿದ್ದಲ್ಲಿ ವಿತರಣೆ ಮಾಡಲಾಗುವುದಿಲ್ಲ ಎಂದು ಉಡುಪಿಯ ಎಚ್ಪಿ ಗ್ಯಾಸ್ನ ಪಾಲುದಾರ ರಾಘವೇಂದ್ರ ಗ್ಯಾಸ್ ಏಜೆನ್ಸಿಯ ಬಾಲಾಜಿ ವಿಷ್ಣು ಆಚಾರ್ಯ ತಿಳಿಸಿದ್ದಾರೆ.
ರಾಜಕಾರಣಿಗಳು ಏನು ಮಾಡುತ್ತಿದ್ದಾರೆ?
ವಾರದಿಂದ ವಾಣಿಜ್ಯ ಬಳಕೆಯ ಸಿಲಿಂಡರ್ ಲಭಿಸದೆ ಹೋಟೆಲ್ ಉದ್ಯಮ ತೀವ್ರ ನಷ್ಟ ಅನುಭಿಸುತ್ತಿದೆ. ಈ ವಿಷಯ ತಿಳಿದಿದ್ದರೂ ಯಾವುದೇ ಪಕ್ಷದ ರಾಜಕಾರಣಿಗಳು ಚಕಾರ ಎತ್ತುತ್ತಿಲ್ಲ. ಕೇಂದ್ರ ಸರ್ಕಾರ ವಾಣಿಜ್ಯ ಸಿಲಿಂಡರ್ನ ಬೆಲೆ ಏರಿಕೆ ಮಾಡಿದೆ ಎಂದು ಆರೋಪಿಸಿ ಕಾಂಗ್ರೆಸ್ನವರು ರಸ್ತೆಯಲ್ಲಿ ಚಹಾ ಮಾಡಿ ಪ್ರತಿಭಟಿಸುತ್ತಾರೆ. ರಾಜ್ಯ ಬಜೆಟ್ನಲ್ಲಿ ಕಾಂಗ್ರೆಸ್ ಸರ್ಕಾರ ಉಡುಪಿ ಜಿಲ್ಲೆಗೆ ಯಾವುದೇ ಯೋಜನೆ, ಅನುದಾನ ನೀಡಿಲ್ಲ ಎಂದು ಬಿಜೆಪಿಯವರು ಚೊಂಬು ಹಿಡಿದು ಪ್ರತಿಭಟಿಸುತ್ತಾರೆ. ಇದರಿಂದ ಜನರಿಗೇನು ಪ್ರಯೋಜನ? ಗ್ಯಾಸ್ ಇಲ್ಲದೆ ಹೋಟೆಲ್ ಉದ್ಯಮ ತತ್ತರಿಸುತ್ತಿದೆ. ಪ್ರಸ್ತುತ ಕಮರ್ಷಿಯಲ್ ಗ್ಯಾಸ್ನ ಸಮಸ್ಯೆ ನಿವಾರಿಸುವಲ್ಲಿ ಅವರ ಶ್ರಮವೇನಿದೆ ಎಂದು ಪ್ರಶ್ನಿಸುತ್ತಾರೆ ಹೋಟೆಲ್ ಉದ್ಯಮಿಗಳು.
ಸೋಮವಾರ (ಮಾ.16) ವಾಣಿಜ್ಯ ಬಳಕೆಯ ಗ್ಯಾಸ್ ಸಿಗುತ್ತದೆ ಎಂಬ ವದಂತಿ ಹಬ್ಬಿದೆ. ಅದು ನಿಜವೋ ಸುಳ್ಳೋ ತಿಳಿದಿಲ್ಲ. ಗ್ಯಾಸ್ ಪೂರೈಕೆ ಆಗದಿದ್ದರೆ ಹೋಟೆಲ್ ನಡೆಸುವುದು ತುಂಬ ಕಷ್ಟ. ಅಂಗಡಿ ಬಂದ್ ಮಾಡಿ ಮನೆಯಲ್ಲಿ ಕುಳಿತುಕೊಂಡರೆ ನಮಗೇ ನಷ್ಟ. ಹೀಗಾಗಿ ವಿದ್ಯುತ್ ಒಲೆ ಅಥವಾ ಸೀಮೆಎಣ್ಣೆ ಸ್ಟೌವ್ ಖರೀದಿಸಿ ನಮ್ಮ ಗ್ರಾಹಕರಿಗೆ ಆಹಾರ ಒದಗಿಸಲು ನಿರ್ಧರಿಸಿದ್ದೇನೆ.