ಉಡುಪಿಯ ಪಾಕಶಾಲಾ ಹೋಟೆಲ್​ನಲ್ಲಿ ಕಟ್ಟಿಗೆ ಒಲೆ ಮೂಲಕ ಅಡುಗೆ ಮಾಡುತ್ತಿರುವುದು. 
ಉಡುಪಿ

ಇನ್ನೂ ಮೂರ್ನಾಲ್ಕು ದಿನ 'ಗ್ಯಾಸ್​ ಟ್ರಬಲ್​'

* ಖಾಸಗಿ ಪಿಜಿಗಳಿಗೂ ಇಲ್ಲ ಸಿಲಿಂಡರ್​

* ಹೋಟೆಲ್​ ಉದ್ಯಮಕ್ಕೆ ತೀವ್ರ ತೊಡಕು

ಪ್ರಶಾಂತ ಭಾಗ್ವತ ಉಡುಪಿ
ಕೊಲ್ಲಿ ರಾಷ್ಟ್ರಗಳಲ್ಲಿ ಯುದ್ಧ ಮುಂದುವರಿದ ಕಾರಣದಿಂದಾಗಿ ಇನ್ನೂ ಮೂರ್ನಾಲ್ಕು ದಿನ ಕಮರ್ಷಿಯಲ್​ ಗ್ಯಾಸ್​ ಸಿಲಿಂಡರ್​ ಸಮಸ್ಯೆ ಮುಂದುವರಿಯಲಿದ್ದು, ಹೋಟೆಲ್​ ಉದ್ಯಮಿಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಗ್ಯಾಸ್​ ಪೂರೈಕೆ ಇಲ್ಲದಿದ್ದರೂ ಹೋಟೆಲ್​ ಮುಚ್ಚಬಾರದು ಎಂಬ ಕಾರಣದಿಂದ ಒಂದು ವಾರದಿಂದ ಕಟ್ಟಿಗೆ ಒಲೆಯ ಮೂಲಕ ಅಡುಗೆ ಕಾರ್ಯ ಮುಂದುವರಿಸಿದ್ದಾರೆ. ಇದೀಗ ಸಕಾಲಕ್ಕೆ ಕಟ್ಟಿಗೆಯೂ ಲಭಿಸದಾಗಿದ್ದು, ದರದಲ್ಲೂ ಏರಿಕೆ ಕಂಡಿದೆ. ನಷ್ಟವಾಗುತ್ತಿದ್ದರೂ ಸಹ ತಮ್ಮ ಗ್ರಾಹಕರನ್ನು ಉಳಿಸಿಕೊಳ್ಳಲು ಕಟ್ಟಿಗೆ ಒಲೆಯಲ್ಲೇ ಆಹಾರೋತ್ಪನ್ನ ಸಿದ್ಧಪಡಿಸುತ್ತಿದ್ದಾರೆ.

ಯಾರಿಂದಲೂ ಸಿಗದ ಭರವಸೆ

ಮಾ.9ರಿಂದ ಕಮರ್ಷಿಯಲ್​ ಗ್ಯಾಸ್​ ಸಿಲಿಂಡರ್​ ಪೂರೈಕೆ ಸ್ಥಗಿತಗೊಂಡಿದೆ. ಎರಡು ವಾರ ಸಮೀಪಿಸುತ್ತ ಬಂದರೂ ಜಿಲ್ಲಾಡಳಿತವಾಗಲಿ, ಸರ್ಕಾರವಾಗಲಿ ಸಿಲಿಂಡರ್​ ಪೂರೈಸುವ ಯಾವುದೇ ಖಚಿತ ಮಾಹಿತಿ ನೀಡುತ್ತಿಲ್ಲ. ಉಡುಪಿ ಜಿಲ್ಲೆಯ ಹೋಟೆಲ್​ ಮಾಲೀಕರ ಸಂಘ ಗ್ಯಾಸ್​ ಸಮಸ್ಯೆ ಹಿನ್ನೆಲೆಯಲ್ಲಿ ಇತ್ತೀಚೆಗೆ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಅವರನ್ನು ಭೇಟಿಯಾದಾಗ, 'ಅಡುಗೆಗೆ ಪರ್ಯಾಯ ಅನಿಲ ಅಥವಾ ಉರುವಲು ಬಳಸಿ' ಎಂದಿದ್ದಾರೆ. ಯಾವುದೇ ದಾರಿ ಇಲ್ಲದೆ ಅನೇಕರು ಹೋಟೆಲ್​ ಮುಚ್ಚಿದ್ದಾರೆ. ಹೋಟೆಲ್​ ಬಂದ್​ ಮಾಡುವುದು ಹೇಳಿದಷ್ಟು ಸುಲಭವಲ್ಲ. ಅದರಿಂದ ಸಿಬ್ಬಂದಿ ಹಿಡಿದಿಟ್ಟುಕೊಳ್ಳುವುದರ ಜತೆಗೆ ಗ್ರಾಹಕರನ್ನೂ ಕಳೆದುಕೊಳ್ಳಬೇಕಾಗುತ್ತದೆ ಎನ್ನುತ್ತಾರೆ ಉಡುಪಿ ಜಿಲ್ಲಾ ಹೋಟೆಲ್​ ಮಾಲೀಕರ ಸಮದ ಅಧ್ಯಕ್ಷ ಡಾ. ತಲ್ಲೂರು ಶಿವರಾಂ ಶೆಟ್ಟಿ.

ಮನೆಗಳಿಗೂ ಪೂರೈಕೆಯಲ್ಲಿ ವಿಳಂಬ

ಗೃಹ ಬಳಕೆಯ ಗ್ಯಾಸ್​ ಸಿಲಿಂಡರ್​ನ ಗ್ರಾಹಕರು ಅನಗತ್ಯ ಪ್ಯಾನಿಕ್​ ಬುಕಿಂಗ್​ ಮಾಡುತ್ತಿದ್ದಾರೆ. ಅದರಿಂದಾಗಿ ಬುಕಿಂಗ್​ ಆಗಿದ್ದರೂ ಸಹ ಅವರ ಮನೆಗಳಿಗೆ ಪೂರೈಸಲು 8-9 ದಿನ ವಿಳಂಬವಾಗುತ್ತಿದೆ. ಎಲ್ಲ ಗ್ರಾಹಕರಿಗೂ ವಾಟ್ಸಾಪ್​, ರೋಬೋ ಕಾಲರ್​ ಹಾಗೂ ದಿನಪತ್ರಿಕೆಗಳ ಮೂಲಕ 'ಒಟಿಪಿ ಕಡ್ಡಾಯ' ಎಂದು ಸಂದೇಶ ಕಳಿಸಿದ್ದರೂ ಸಹ ಮನೆಗೆ ಸಿಲಿಂಡರ್​ ಪೂರೈಸಲು ಬಂದಾಗ ಒಟಿಪಿಗಾಗಿ ಎಚ್ಚೆತ್ತು, ತಡಕಾಡಿ ಮತ್ತಷ್ಟು ಸಮಯ ವ್ಯರ್ಥ ಮಾಡುತ್ತಿದ್ದಾರೆ. ಒಟಿಪಿ ನೀಡದಿದ್ದರೆ ಗ್ಯಾಸ್​ ಪೂರೈಕೆ ಮಾಡಲು ಆಗದು. ಬುಕಿಂಗ್​ ಮಾಡಿಯೂ ಒಟಿಪಿ ಬರದಿದ್ದಲ್ಲಿ ಗ್ಯಾಸ್​ ಪಾಸ್​ಬುಕ್​ನೊಂದಿಗೆ ಶಾಖೆಗೆ ಬಂದು ರಿಜಿಸ್ಟರ್ಡ್​ ಫೋನ್​ ನಂಬರ್​ ಪರಿಶೀಲಸಿ, 'ರೀಸೆಂಡ್​ ಒಟಿಪಿ' ವ್ಯವಸ್ಥೆ ಸರಿಪಡಿಸಿಕೊಳ್ಳಬೇಕು ಎಂದು ಎಚ್​ಪಿ ಗ್ಯಾಸ್​ನ ಪಾಲುದಾರ ಬಾಲಾಜಿ ರಾಘವೇಂದ್ರ ಆಚಾರ್ಯ ಗ್ಯಾಸ್​ನ ಮಾಲೀಕ ವಿಷ್ಣು ಆಚಾರ್ಯ ತಿಳಿಸಿದ್ದಾರೆ.

ಮನೆಗೆ ತೆರಳಲು ವಿದ್ಯಾರ್ಥಿಗಳಿಗೆ ಸೂಚನೆ?

ಸರ್ಕಾರಿ ಆಸ್ಪತ್ರೆ, ಹಾಸ್ಟೆಲ್​ ಹಾಗೂ ವಸತಿಯುತ ಶಾಲೆಗಳಿಗೆ ತೊಂದರೆಯಾಗದಂತೆ ರೇಶನಿಂಗ್​ ಪದ್ಧತಿಯಲ್ಲಿ ಕಮರ್ಷಿಯಲ್​ ಗ್ಯಾಸ್​ ಸಿಲಿಂಡರ್​ ಪೂರೈಸಲಾಗುತ್ತಿದೆ. ಆದರೆ, ಖಾಸಗಿ ಪಿಜಿಗಳಲ್ಲೂ ಸಹ ಕಮರ್ಷಿಯಲ್​ ಗ್ಯಾಸ್​ನಿಂದಲೇ ಅಡುಗೆ ಮಾಡಬೇಕಿದ್ದರಿಂದ ಅವರಿಗೂ ಇದೀಗ ಬಿಸಿ ತಟ್ಟತೊಡಗಿದೆ. ವಿದ್ಯಾರ್ಥಿಗಳಿಗೆ ನಿತ್ಯದ ತಿಂಡಿ ಹಾಗೂ ಊಟೋಪಹಾರದ ವ್ಯವಸ್ಥೆ ಮಾಡಲು ತೊಂದರೆ ಆಗುತ್ತಿದ್ದು, ಗ್ಯಾಸ್​ ಸಮಸ್ಯೆ ಸರಿಯಾಗುವವರೆಗೆ ವಿದ್ಯಾರ್ಥಿಗಳಿಗೆ ಮನೆಗೆ ತೆರಳುವಂತೆ ಕೆಲ ಖಾಸಗಿ ಪಿಜಿಯವರು ಹೇಳಿದ್ದಾಗಿ ತಿಳಿದುಬಂದಿದೆ.
"

ನಾಲ್ಕೈದು ದಿನದಿಂದ ಟಿವಿ ಹಾಗೂ ಪತ್ರಿಕೆಗಳಲ್ಲಿ ಹರ್ಮೋಜ್​ ಜಲಸಂಧಿ ಮೂಲಕ ಭಾರತಕ್ಕೆ ತೈಲ ಟ್ಯಾಂಕರ್​ ಬಂದಿದೆ, ಶೀಘ್ರದಲ್ಲೇ ಗ್ಯಾಸ್​ ಟ್ರಬಲ್​ ಸರಿಯಾಗಲಿದೆ ಎಂಬ ಸುದ್ದಿ ಬರುತ್ತಿದೆ. ಮಂಗಳೂರಿಗೂ ಹಡಗು ಬಂದಿದೆಯಂತೆ ಎಂಬ ಅಂತೆ-ಕಂತೆ ಸುದ್ದಿ ಕೇಳುತ್ತಿದ್ದೇವೆ. ನಾವೂ ಸಹ ಇಂದು-ನಾಳೆ ಸಿಲಿಂಡರ್​ ಸಿಗಬಹುದು ಎಂದು ಕಾಯುತ್ತಿದ್ದೇವೆ. ಹೋಟೆಲ್​ ಬಂದ್​ ಮಾಡಿ ಮನೆಯಲ್ಲೇ ಕುಳಿತಿದ್ದೇವೆ.