ಬೈಂದೂರು ಪ್ರಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಅಡಿಗ ಸಂಸ್ಮರಣೆ ಕಾರ್ಯಕ್ರಮದಲ್ಲಿ ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಗುರುರಾಜ ಗಂಟಿಹೊಳೆ ಗೌರವಿಸಿದರು. ಡಾ.ಗಣನಾಥ್ ಶೆಟ್ಟಿ ಎಕ್ಕಾರು, ಗಣಪತಿ ಹೋಬಳಿದಾರ್, ಡಾ. ಭಾರತಿ ಮರವಂತೆ ಚೈತ್ರಾ ಸತೀಶ್, ವಿಜಯ್, ಭಾಸ್ಕರ್ ದೇವಾಡಿಗ ಇದ್ದರು.
* ಶಾಸಕ ಗುರುರಾಜ್ ಗಂಟಿಹೊಳೆ ಆಶಯ
* ಅಡಿಗ ಸಂಸ್ಮರಣೆ, ಕಾರಂತ ಉಪನ್ಯಾಸ ಕಾರ್ಯಕ್ರಮ
ಉಡುಪಿ: ಗ್ರಾಮೀಣ ಭಾಗದಲ್ಲಿ ವಿದ್ಯಾಭ್ಯಾಸ ಮಾಡಿ ರಾಷ್ಟ್ರಮಟ್ಟದಲ್ಲಿ ಖ್ಯಾತರಾದ ನಾಡಿನ ಸಾಧಕರ ಕುರಿತಾಗಿ ಶಾಲೆಗಳಲ್ಲಿ ಕಾರ್ಯಕ್ರಮ ಆಯೋಜಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಕಾರ್ಯ ಮಾಡಬೇಕಿದೆ. ತನ್ಮೂಲಕ ಸಾಧಕರ ಸಾಧನೆ ಕಿರಿಯರಿಗೆ ಪ್ರೇರಣೆಯಾಗಬೇಕಿದೆ ಎಂದು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಆಶಯ ವ್ಯಕ್ತಪಡಿಸಿದರು.
ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಡಾ.ಶಿವರಾಮ ಕಾರಂತ ಟ್ರಸ್ಟ್ ಉಡುಪಿ, ಗೋಪಾಲಕೃಷ್ಣ ಅಡಿಗ ಸ್ಮಾರಕ ಟ್ರಸ್ಟ್ (ರಿ.) ಬೆಂಗಳೂರು ಆಶ್ರಯದಲ್ಲಿ ಬೈಂದೂರು ಸರ್ಕಾರಿ ಮಾದರಿ ಹಿರಿಯ ಪ್ರಥಮಿಕ ಶಾಲೆಯಲ್ಲಿ ಕವಿ ಗೋಪಾಲಕೃಷ್ಣ ಅಡಿಗ 108ನೇ ಜನ್ಮದಿನೋತ್ಸವದ ನಿಮಿತ್ತ ಅಡಿಗ ಸಂಸ್ಮರಣೆ ಮತ್ತು ಕಾರಂತರ ಕುರಿತು ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಡಾ. ಶಿವರಾಮ ಕಾರಂತ ಟ್ರಸ್ಟ್ನ ಅಧ್ಯಕ್ಷ ಗಣನಾಥ್ ಶೆಟ್ಟಿ ಎಕ್ಕಾರು ಕಾರ್ಯಕ್ರಮ ಉದ್ಘಾಟಿಸಿದರು. ಶತಮಾನ ಪೂರೈಸಿದ ಹಾಗೂ ಅಡಿಗರು ಕಲಿತ ಮಾಧ್ಯಮಿಕ ಶಾಲೆಯ ಬಗ್ಗೆ ಮುಖ್ಯೋಪಾಧ್ಯಾಯ ಗಣಪತಿ ಹೋಬಳಿದಾರ್ ಮಾತನಾಡಿದರು.
ಈ ಸಂದರ್ಭದಲ್ಲಿ ಮೂಗೇರಿ ಸಮಷ್ಟಿ ಪುರಸ್ಕಾರದ ಶಾಶ್ವತ ಫಲಕವನ್ನು ಕೆ.ಪುಂಡಲೀಕ್ ನಾಯಕ್ ಅವರಿಗೆ ನೀಡಲಾಯಿತು. ಡಾ. ಭಾರತಿ ಮರವಂತೆ ಅವರು ಶಾಲಾ ಮಕ್ಕಳಿಗೆ ರಂಗೋಲಿ ಪ್ರಾತ್ಯಕ್ಷಿಯೊಂದಿಗೆ ರಂಗೋಲಿ ಸ್ಪರ್ಧೆ ನೆರವೇರಿಸಿದರು.
ಜೆಸಿಐ ಬೈಂದೂರು ಸಿಟಿ ಅಧ್ಯೆ ಚೈತ್ರಾ ಸತೀಶ್, ಅರಣ್ಯ ಇಲಾಖೆ ಬೈಂದೂರಿನ ಗಸ್ತು ಅರಣ್ಯಪಾಲಕ ವಿಜಯ್, ಶಾಲಾಭಿವೃದ್ಧಿ ಮತ್ತು ಶಾಲಾ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ಭಾಸ್ಕರ್ ದೇವಾಡಿಗ ಉಪಸ್ಥಿತರಿದ್ದರು. ಡಾ.ಭಾರತಿ ಮರವಂತೆ ಸ್ವಾಗತಿಸಿದರು. ವೀಣಾ ಹೆಗಡೆ ಮತ್ತು ಜಯಾ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಸಹಶಿಕ್ಷಕಿ ಶಶಿರೇಖಾ ವಂದಿಸಿದರು.
ಸಮಾರೋಪ ಸಮಾರಂಭ
ಸಮಾರೋಪ ಸಮಾರಂಭದಲ್ಲಿ ಚಿಂತಕಿ ಡಾ.ರೇಖಾ ಬನ್ನಾಡಿ ಮತ್ತು ವಿಮರ್ಶಕ ರಾಜೀವ್ ನಾಯಕ್ ಉಪನ್ಯಾಸ ನೀಡಿದರು. ಅಡಿಗರ ಕವಿತ್ವದ ಕುರಿತು ಸಾಹಿತಿ ಗಣೇಶ್ ಮಾತನಾಡಿದರು. ಹಿರಿಯ ಕೃಷಿಕ ಭದ್ರಪ್ಪ ಗೌಡ, ಕವಿ ಗೋಪಾಲಕೃಷ್ಣ ಅಡಿಗ ರಚಿತ ಹಾಡುಗಳನ್ನು ಹಾಡಿ ಮಹತ್ವ ವಿವರಿಸಿದರು. ಡಾ.ಶಿವರಾಮ ಕಾರಂತ ಟ್ರಸ್ಟ್ನ ಅಧ್ಯಕ್ಷ ಡಾ.ಗಣನಾಥ್ ಶೆಟ್ಟಿ ಎಕ್ಕಾರು ಆಶಯ ಭಾಷಣ ಮಾಡಿದರು. ಕಾಲೇಜಿನ ಪ್ರಾಂಶುಪಾಲ ವೆಂಕಟರಮಣ ಅಧ್ಯಕ್ಷತೆ ವಹಿಸಿದ್ದರು. ಉಪಪ್ರಾಂಶುಪಾಲ ಪಿ.ಪದ್ಮನಾಭ, ಡಾ.ಶಿವರಾಮ ಕಾರಂತ ಟ್ರಸ್ಟ್ನ ಸದಸ್ಯರಾದ ಡಾ.ಭಾರತಿ ಮರವಂತೆ, ಡಾ.ಚೇತನ್ ಶೆಟ್ಟಿ ಕೋವಾಡಿ, ಅಡಿಗ ಟ್ರಸ್ಟ್ನ ಪ್ರವರ್ತಕ ಜಯರಾಂ ಉಪಸ್ಥಿತರಿದ್ದರು. ಉಪನ್ಯಾಸಕ ಚಂದ್ರಶೇಖರ್ ಸ್ವಾಗತಿಸಿದರು. ಉಪನ್ಯಾಸಕರಾದ ಸತೀಶ್, ಭರತ್ ಕಾರ್ಯಕ್ರಮ ನಿರ್ವಹಿಸಿದರು.