ಉಡುಪಿ: ಕರ್ನಾಟಕದ ನೂತನ ರಾಜ್ಯಪಾಲೆಯಾಗಿ ನೇಮಕಗೊಂಡ ಡಾ. ಸುಧಾ ಯಾದವ್ ಅವರನ್ನು ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಬೆಂಗಳೂರಿನ ರಾಜಭವನದಲ್ಲಿ ಭೇಟಿಯಾಗಿ ಶುಭ ಹಾರೈಸಿದರು.
ಕೃಷ್ಣನೂರು ಕರಾವಳಿಯ ಉಡುಪಿಗೆ ಒಮ್ಮೆ ಭೇಟಿ ನೀಡಿ ಎಂದು ಆತ್ಮೀಯವಾಗಿ ಆಹ್ವಾನಿಸಿ, ಶಾಲು ಹೊದಿಸಿ ಅಭಿನಂದಿಸಿದರು. ಉಡುಪಿಗೆ ಒಮ್ಮೆ ಬರುವುದಾಗಿ ರಾಜ್ಯಪಾಲರು ಸಮ್ಮತಿಸಿದರು.
ಯೋಧನ ಪತ್ನಿ
ರಾಜ್ಯಪಾಲರ ಭೇಟಿಯ ಬಳಿಕ ಕೋಟ ಪೂಜಾರಿ ಮಾತನಾಡಿ, ಹರಿಯಾಣ ಮೂಲದ ಡಾ. ಸುಧಾ ಯಾದವ್ ಅವರು ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಬಿಎಸ್ಎಫ್ನ ಡೆಪ್ಯುಟಿ ಕಮಾಂಡರ್ ಸುಖ್ಬೀರ್ ಸಿಂಗ್ ಯಾದವ್ ಅವರ ಪತ್ನಿ. ಪತಿಯ ವೀರಮರಣದ ಬಳಿಕ ಸಾರ್ವಜನಿಕ ಸೇವಾ ಕ್ಷೇತ್ರ ಪ್ರವೇಶಿಸಿ, ಮಹೇಂದ್ರಗಢ ಕ್ಷೇತ್ರದಿಂದ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು ಎಂದು ತಿಳಿಸಿದರು.
ಹೆಮ್ಮೆಯ ಸಂಗತಿ
ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆಯಾಗಿ, ಬಿಜೆಪಿಯ ಅತ್ಯುನ್ನತ ಸಂಸದೀಯ ನಿರ್ಧಾರ ಕೈಗೊಳ್ಳುವ ಮಂಡಳಿಯ ಸದಸ್ಯೆಯಾಗಿ ಮಹತ್ವದ ಜವಾಬ್ದಾರಿ ನಿರ್ವಹಿಸಿದ್ದಾರೆ. ಹಿಂದುಳಿದ ವರ್ಗದ ಯಾದವ ಸಮುದಾಯದ ಡಾ. ಸುಧಾ, ಸೇವೆಯ ಮೂಲಕ ಗುರುತಿಸಿಕೊಂಡವರು. ಕರ್ನಾಟಕದ ಎರಡನೇ ಮಹಿಳಾ ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಂಡಿರುವುದು ಹೆಮ್ಮೆಯ ಸಂಗತಿ ಎಂದರು.
ಹಿರಿಯರಾದ ಸಾಮರಸ್ಯ ವಾದಿರಾಜ ಉಪಸ್ಥಿತರಿದ್ದರು.