ಉಡುಪಿಯ ಡಿಸಿ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿದರು. ಕ್ಷಮಾ ಪಾಟೀಲ, ನಿಧೀಶ್ ಹೊಳ್ಳ, ಧನಂಜಯ್ ಹಾಗೂ ಇತರ ಅಧಿಕಾರಿಗಳು ಇದ್ದರು.
* ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾಹಿತಿ
* ಉಡುಪಿ ಡಿಸಿ ಕಚೇರಿಯಲ್ಲಿ ಪೂರ್ವಭಾವಿ ಸಭೆ
ಉಡುಪಿ: ಕೋಟೇಶ್ವರದ ಸರಸ್ವತಿ ಕಲ್ಯಾಣ ಮಂಟಪದಲ್ಲಿ ಕೇಂದ್ರ ತೆಂಗು ಅಭಿವೃದ್ಧಿ ಮಂಡಳಿ ಮತ್ತು ತೋಟಗಾರಿಕೆ ಹಾಗೂ ಕಿಸಾನ್ ಸಂಘದ ಸಹಭಾಗಿತ್ವದಲ್ಲಿ ಜ.12ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾ ಮಟ್ಟದ ತೆಂಗು ಬೆಳೆಗಾರರ ಕಾರ್ಯಾಗಾರ ಆಯೋಜಿಸಲಾಗಿದೆ. ತೋಟಗಾರಿಕಾ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಉದ್ಘಾಟಿಸಲಿದ್ದು, ತೆಂಗಿನ ಮೌಲ್ಯವರ್ಧಿತ ಉತ್ಪನ್ನಗಳನ್ನು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಿಡುಗಡೆ ಮಾಡಲಿದ್ದಾರೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾಹಿತಿ ನೀಡಿದರು.
ಉಡುಪಿಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿರುವ ತಮ್ಮ ಸಂಸದರ ಕಚೇರಿಯಲ್ಲಿ ವಿವಿಧ ಅಧಿಕಾರಿಗಳೊಂದಿಗೆ ಗುರುವಾರ (ಜ.1) ಪೂರ್ವಭಾವಿ ಸಭೆ ನಡೆಸಿ, ಅಂದು ಬೆಳಗ್ಗೆ 9 ಗಂಟೆಯಿಂದ ಜಿಲ್ಲೆ ಮತ್ತು ಹೊರ ಜಿಲ್ಲೆಗಳಿಂದ ಬರುವ ಶಿಬಿರಾರ್ಥಿಗಳು ಹಾಗೂ ರೈತರ ಹೆಸರು ನೋಂದಾವಣಿ ಕಾರ್ಯ ನಡೆಯಲಿದೆ. ಕಾರ್ಯಕ್ರಮದಲ್ಲಿ ಉಪಸ್ಥಿತರಿರುವ ಗಣ್ಯರು ತೆಂಗು ಉತ್ಪನ್ನಗಳ ಪ್ರದರ್ಶನ ಹಾಗೂ ಮಳಿಗೆಗಳನ್ನು ಉದ್ಘಾಟಿಸಲಿದ್ದಾರೆ ಎಂದರು.
ವಿಜ್ಞಾನಿಗಳಿಂದ ಉಪನ್ಯಾಸ
ಮಧ್ಯಾಹ್ನ 12 ಗಂಟೆಗೆ ವಿಜ್ಞಾನಿ ಡಾ. ವಿನಾಯಕ್ ಹೆಗ್ಡೆ ಅವರು 'ತೆಂಗು ಬೆಳೆಯಲ್ಲಿ ಕೀಟ ಮತ್ತು ರೋಗಬಾಧೆಯ ಸಮಗ್ರ ನಿಯಂತ್ರಣ' ಕುರಿತು ಉಪನ್ಯಾಸ ನೀಡಲಿದ್ದಾರೆ. ಮಧ್ಯಾಹ್ನ 12:30ರಿಂದ ಬ್ರಹ್ಮಾವರದ ವಲಯ ಕೃಷಿ ಹಾಗೂ ತೋಟಗಾರಿಕಾ ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ. ಚೈತನ್ಯ ಎಚ್.ಎಸ್. 'ತೆಂಗು ಬೆಳೆಯ ಉತ್ಪಾದನೆ ಹಾಗೂ ಮಿಶ್ರ ಬೆಳೆಗಳು; ಕುರಿತು ಮಾಹಿತಿ ನೀಡಲಿದ್ದಾರೆ. ಮಧ್ಯಾಹ್ನ 2:30ಕ್ಕೆ ಕಾಸರಗೋಡಿನ ಸಿಪಿಸಿಆರ್ಐನ ನಿರ್ದೇಶಕ ಡಾ. ಕೆ.ಬಿ. ಹೆಬ್ಬಾರ್ 'ತೆಂಗು ಬೆಳೆಯಲ್ಲಿ ಸಂಸ್ಕರಣೆ, ಮೌಲ್ಯವರ್ಧನೆ ಮತ್ತು ಮಾರುಕಟ್ಟೆಯ ಬಲವರ್ಧನೆಗೆ ಇರುವ ಅವಕಾಶ' ಕುರಿತು ಮಾಹಿತಿ ನೀಡಲಿದ್ದಾರೆ ಎಂದು ಸಂಸದ ಕೋಟ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ತೋಟಗಾರಿಕಾ ಇಲಾಖೆಯ ಜಂಟಿ ನಿರ್ದೇಶಕಿ ಕ್ಷಮಾ ಪಾಟೀಲ, ಜಿಲ್ಲಾ ಸಹಾಯಕ ನಿದೇರ್ಶಕ ನಿಧೀಶ್ ಹೊಳ್ಳ, ಬ್ರಹ್ಮಾವರದ ಕೃಷಿ ವಿಜ್ಞಾನ ಕೇಂದ್ರದ ಧನಂಜಯ್, ತೋಟಗಾರಿಕಾ ಇಲಾಖೆಯ ತಾಲೂಕು ಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಯಾಗಾರದಲ್ಲಿ ಪಾಲ್ಗೊಳ್ಳುವ ಶಿಬಿರಾರ್ಥಿಗಳಿಗೆ ಮಧ್ಯಾಹ್ನ 3:30ರಿಂದ 4:30ರ ವರೆಗೆ ಪ್ರಶ್ನೋತ್ತರ ನಡೆಯಲಿದೆ. ನಂತರ 5 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಜಿಲ್ಲೆಯ ಹಾಗೂ ಹೊರ ಜಿಲ್ಲೆಗಳ ವಿವಿಧ ರೈತ ಸಂಘಗಳ ಸದಸ್ಯರು, ಕೃಷಿಕರು ವಿವಿಧ ತೆಂಗು ಬೆಳೆಗಾರರ ಸಂಘಗಳ ಪದಾಧಿಕಾರಿಗಳು, ಸದಸ್ಯರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಆಸಕ್ತ ತೆಂಗು ಬೆಳೆಗಾರರು ಕಾರ್ಯಾಗಾರಕ್ಕೆ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು.