Crime 
ಉಡುಪಿ

ಸಾಂಬಾರ್‌ನಲ್ಲಿ ಜಿರಳೆ ಆರೋಪ, ಪರಿಶೀಲನೆ

ಸಾಂಬಾರ್‌ನಲ್ಲಿ ಜಿರಳೆ ಪತ್ತೆಯಾಗಿದೆ ಎಂದು ಗ್ರಾಹಕರೊಬ್ಬರು ದೂರು ನೀಡಿದ ಹಿನ್ನೆಲೆಯಲ್ಲಿ ಜಿಲ್ಲಾ ಆಹಾರ ಸುರಕ್ಷತಾ ನಿಯೋಜಿತ ಅಧಿಕಾರಿ ಡಾ.ಪ್ರವೀಣ್ ಕುಮಾರ್ ತೊಕ್ಕೊಟ್ಟು ಜಂಕ್ಷನ್‌ನಲ್ಲಿರುವ ಹೋಟೆಲ್‌ಗೆ ಮಂಗಳವಾರ ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

ಮಧ್ಯಾಹ್ನ ಹೋಟೆಲ್‌ನ ಶಟರ್ ತೆಗೆದು ಅಡುಗೆ ಮನೆ ಪರಿಶೀಲಿಸಿದ್ದಾರೆ. ತಪಾಸಣೆ ವೇಳೆ ಹೋಟೆಲ್‌ನಲ್ಲಿ ಆಹಾರ ಪದಾರ್ಥಗಳನ್ನು ಪ್ರತ್ಯೇಕ ಶೇಖರಿಸಿಡಲು ಕೊಠಡಿಗಳಿಲ್ಲ, ಆಹಾರ ಪದಾರ್ಥಗಳು ಅಡ್ಡಾದಿಡ್ಡಿ ರಾಶಿ ಬಿದ್ದಿರುವುದು ಕಂಡುಬಂದಿದೆ ಎಂದು ಡಾ.ಪ್ರವೀಣ್ ಕುಮಾರ್ ತಿಳಿಸಿದರು.

ಆಹಾರ ಪದಾರ್ಥಗಳನ್ನು ಪ್ರತ್ಯೇಕವಾಗಿ ವ್ಯವಸ್ಥಿತ ರೀತಿಯಲ್ಲಿ ಸಂಗ್ರಹಿಸಲು ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ. ಅಲ್ಲದೆ ಸ್ವಚ್ಛತೆ ಕಾಪಾಡಿಕೊಳ್ಳುವಲ್ಲಿ ವಿಫಲವಾಗಿರುವ ಹಿನ್ನೆಲೆಯಲ್ಲಿ ಹೋಟೆಲ್ ಮಾಲೀಕರಿಗೆ ನೋಟಿಸ್ ನೀಡಲಾಗಿದೆ. ಹೆಚ್ಚುವರಿ ಉಪಆಯುಕ್ತರ (ಎಡಿಸಿ) ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಡಾ.ಪ್ರವೀಣ್ ಕುಮಾರ್ ಹೇಳಿದ್ದಾರೆ.