ಉಡುಪಿ: ನಾವೆಲ್ಲರೂ ತಂತ್ರಜ್ಞಾನ ಯುಗದಲ್ಲಿದ್ದು ಸಹಕಾರ ಸಂಘಗಳೂ ಸಹ ಅದನ್ನು ಅಳವಡಿಸಿಕೊಂಡು ಅಪ್ಡೇಟ್ ಆಗಬೇಕು. ಸಹಕಾರ ಸಂಸ್ಥೆಗಳು ಕೇವಲ ಲಾಭಕ್ಕಾಗಿ ಕೆಲಸ ನಿರ್ವಹಿಸದೆ ಸಮಾಜಮುಖಿ ಕೆಲಸಗಳಲ್ಲೂ ತೊಡಗಿಸಿಕೊಳ್ಳಬೇಕು. ಕೇಂದ್ರ, ರಾಜ್ಯ ಸರ್ಕಾರವೂ ಸಹಕಾರಿ ಕಾಯ್ದೆಗಳಿಗೆ ಅನೇಕ ತಿದ್ದುಪಡಿ ತಂದು ಈ ಕ್ಷೇತ್ರಕ್ಕೆ ಮತ್ತಷ್ಟು ಬಲ ತುಂಬುವ ಪ್ರಯತ್ನ ನಡೆಸಿದೆ ಎಂದು ಉಡುಪಿ ಜಿಲ್ಲಾ ಸಹಕಾರ ಯೂನಿಯನ್ನ ಹಾಗೂ ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಬಿ.ಜಯಕರ್ ಶೆಟ್ಟಿ ಇಂದ್ರಾಳಿ ತಿಳಿಸಿದರು.
ಉಡುಪಿಯ ಖಾಸಗಿ ಹೋಟೆಲ್ನಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ. ಬೆಂಗಳೂರು, ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ನಿ. ಉಡುಪಿ, ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನಿ. ಉಡುಪಿ ಹಾಗೂ ಸಹಕಾರ ಇಲಾಖೆ ಉಡುಪಿ ಜಿಲ್ಲೆ ವತಿಯಿಂದ ಆಯೋಜಿಸಿದ್ದ ಉಡುಪಿ ತಾಲೂಕು ಕ್ರೆಡಿಟ್ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಾಹಕರು ಹಾಗೂ ಸಿಬ್ಬಂದಿಗೆ ಆಯೋಜಿಸಿದ್ದ ವಿಶೇಷ ತರಬೇತಿ ಉದ್ಘಾಟಿಸಿ ಮಾತನಾಡಿದರು.
ಶಿವಮೊಗ್ಗದ ಸನ್ನದು ಲೆಕ್ಕಪರಿಶೋಧಕ ವರುಣ್ ಭಟ್ ಅವರು 'ಸಹಕಾರಿಗಳಲ್ಲಿ ವೃತ್ತಿಪರತೆ ಮತ್ತು ವ್ಯವಹಾರಗಳ ಅಭಿವೃದ್ಧಿಗಾಗಿ ಅದರ ಬಳಕೆ ಮತ್ತು ಮಾನವ ಸಂಪನ್ಮೂಲಗಳು, ಅವುಗಳ ಬಳಕೆ' ಕುರಿತು ಉಪನ್ಯಾಸ ನೀಡಿದರು.
ಬಡಗಬೆಟ್ಟು ಸೊಸೈಟಿಯ ನಿರ್ದೇಶಕರಾದ ಸಾಧು ಸಾಲ್ಯಾನ್, ಎಲ್. ಉಮಾನಾಥ್, ಜಯಾ ಶೆಟ್ಟಿ, ಸದಾಶಿವ ನಾಯಕ್ ಉಪಸ್ಥಿತರಿದ್ದರು.
ಬಡಗಬೆಟ್ಟು ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ರಾಜೇಶ್ ಶೇರಿಗಾರ್ ಸ್ವಾಗತಿಸಿದರು. ಉಡುಪಿ ಜಿಲ್ಲಾ ಸಹಕಾರ ಯೂನಿಯನ್ನ ಸಿಇಒ ಅನೂಷಾ ಕೋಟ್ಯಾನ್ ವಂದಿಸಿದರು.
ಮನುಷ್ಯನ ಅಗತ್ಯತೆಗೆ ಬೇಕಾದ ಎಲ್ಲ ವ್ಯವಸ್ಥೆ, ಸೌಲಭ್ಯಗಳು ಸಹಕಾರ ಚಳವಳಿಯ ಮೂಲಕ ನೀಡಲು ಸಿದ್ಧತೆ ನಡೆಯುತ್ತಿದೆ. ಹೀಗಾಗಿ ತರಬೇತಿ ನಿಂತ ನೀರಾಗಬಾರದು. ಅಗತ್ಯ ಮಾಹಿತಿ ಪಡೆದು ಸಹಕಾರ ಕ್ಷೇತ್ರ ಅಗಾಧವಾಗಿ ಬೆಳೆಯಲು ಪ್ರೇರಣಾ ಶಕ್ತಿಯಾಗಬೇಕು. ತರಬೇತಿ ಪಡೆದ ಸಿಬ್ಬಂದಿ ಅದನ್ನು ಅಳವಡಿಸಿಕೊಂಡು ಸಹಕಾರಿ ಕ್ಷೇತ್ರ ಬೆಳೆಸಲು ಮುಂದಾಗಬೇಕು.ಬಿ. ಜಯಕರ್ ಶೆಟ್ಟಿ ಇಂದ್ರಾಳಿ. ಉಡುಪಿಯ ಬಡಗಬೆಟ್ಟು ಸೊಸೈಟಿ ಅಧ್ಯಕ್ಷ.