Theft 
ಉಡುಪಿ

ಕೈಮಗ್ಗ ಓಣಂ ಮೇಳದಲ್ಲಿ ಬಟ್ಟೆ ಕಳವು

ಕಾಸರಗೋಡು: ನೀಲೇಶ್ವರ ಬಸ್ ನಿಲ್ದಾಣದ ಸನಿಹ ಆಯೋಜಿಸಲಾಗಿರುವ ಜಿಲ್ಲಾ ಕೈಮಗ್ಗ ಓಣಂ ಮೇಳದಲ್ಲಿ 40 ಸಾವಿರ ರೂ.ಗೂ ಹೆಚ್ಚು ಮೌಲ್ಯದ ಕೈಮಗ್ಗ ವಸ್ತ್ರಗಳನ್ನು ಕಳವುಗೈದಿರುವ ಬಗ್ಗೆ ನೀಲೇಶ್ವರಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸೋಮವಾರ ಬೆಳಗ್ಗೆ ಕಳವು ನಡೆದಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಕಾಸರಗೋಡು ನೇಕಾರರ ಸಹಕಾರ ಸಂಘದ ಸೀರೆಗಳ ಕೌಂಟರ್‌ನಿಂದ 31,000 ರೂ. ಮೌಲ್ಯದ ಸೀರೆ ಒಳಗೊಂಡಂತೆ ಒಟ್ಟು 44 ಸಾವಿರ ರೂ. ಮೌಲ್ಯದ ಬಟ್ಟೆ ಕಳವಾಗಿದೆ.

ತ್ರಿಕ್ಕರಿಪುರ ನೇಕಾರರ ಸಂಘಕ್ಕೆ ಸೇರಿದ ಮಳಿಗೆ ಸೇರಿದಂತೆ ವಿವಿಧ ಮಳಿಗೆಗಳಲ್ಲಿ ಕಳವು ನಡೆದಿದೆ. ಕಳವು ಕೃತ್ಯದಲ್ಲಿ ಮೂವರು ವ್ಯಕ್ತಿಗಳು ಶಾಮೀಲಾಗಿದ್ದು, ಒಬ್ಬಾತ ಹೊರಗೆ ಕಾವಲು ಕಾಯುತ್ತಿದ್ದರೆ, ಉಳಿದಿಬ್ಬರು ಕಳವು ನಡೆಸಿದ್ದಾರೆ. ಓಣಂ ಮೇಳ ಸಂಯೋಜಕರು ನೀಡಿದ ದೂರಿನ ಮೇರೆಗೆ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.