ಉಡುಪಿಯ ಐವೈಸಿ ಸಭಾಂಗಣದಲ್ಲಿ ನಡೆದ 'ಜೀವನ ವಿದ್ಯಾ' ಶೈಕ್ಷಣಿಕ ಶಿಬಿರದ ಸಮಾರೋಪ ಸಮಾರಂಭದಲ್ಲಿ ಹರಿಕೃಷ್ಣ ಭಟ್​ ಜಪಾನ್​ ಮಾತನಾಡಿದರು. ಡಾ. ನಿ.ಬೀ. ವಿಜಯ ಬಲ್ಲಾಳ್​, ಶ್ರೀಕಾಂತ ಅರಿಮಣಿತ್ತಾಯ, ಪ್ರೊ. ಸಖಾರಾಮ ಸೋಮಯಾಜಿ, ಬಿ. ನರಹರಿ, ಪಿ. ಸತೀಶ್​ ರಾವ್​, ಶ್ರೀಧರ್​ ಶೇಟ್​, ಮಾರಾಳಿ ಪ್ರತಾಪ್​ ಹೆಗ್ಡೆ, ಎಂ. ಗಂಗಾಧರ್​ ರಾವ್​ ಇದ್ದರು. 
ಉಡುಪಿ

ಮಕ್ಕಳಲ್ಲಿರಲಿ ನಾಗರಿಕ ಪ್ರಜ್ಞೆ, ಪರಿಸರ ಪ್ರೀತಿ

* ಹರಿಕೃಷ್ಣ ಭಟ್​ ಜಪಾನ್​ ಆಶಯ

* ಜೀವನ ವಿದ್ಯಾ ಶೈಕ್ಷಣಿಕ ಶಿಬಿರ ಸಮಾರೋಪ

ಉಡುಪಿ: ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಹೊಸ ಕೌಶಲ ಕಲಿತು ಜ್ಞಾನ ವರ್ಧನೆ ಮಾಡಿಕೊಳ್ಳಬೇಕು. ಅಂಥವರನ್ನೇ ಉದ್ಯೋಗವಕಾಶ ಹುಡುಕಿಕೊಂಡು ಬರುತ್ತವೆ. ನಾಗರಿಕ ಪ್ರಜ್ಞೆ, ಪರಿಸರ ಪ್ರೀತಿ, ಸಾಮಾಜಿಕ ಕಳಕಳಿ ಎಲ್ಲರಲ್ಲೂ ಇರಬೇಕಾದ ಮೂಲ ಸಂಗತಿ. ಈ ಕಾರಣಕ್ಕಾಗಿ ಯಕ್ಷಗಾನ ಕಲಾರಂಗದ ಕಾರ್ಯಕರ್ತರು ಅಭಿನಂದನಾರ್ಹರು ಎಂದು ಹರಿಕೃಷ್ಣ ಭಟ್​ ಜಪಾನ್​ ಅನಿಸಿಕೆ ವ್ಯಕ್ತಪಡಿಸಿದರು.
ಉಡುಪಿಯ ಯಕ್ಷಗಾನ ಕಲಾರಂಗ ಐವೈಸಿ ಸಭಾಂಗಣದಲ್ಲಿ ವಿದ್ಯಾಪೋಷಕ್​ ವತಿಯಿಂದ ಶನಿವಾರ (ಫೆ.28) ಆಯೋಜಿಸಿದ್ದ ಪ್ರಥಮ ಪಿಯುಸಿ ಮುಗಿಸಿದ ವಿದ್ಯಾರ್ಥಿಗಳ ಐದು ದಿನಗಳ ಶೈಕ್ಷಣಿಕ ಶಿಬಿರ 'ಜೀವನ ವಿದ್ಯಾ' ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಅಂಬಲಪಾಡಿಯ ಶ್ರೀಜನಾರ್ದನ ಮಹಾಕಾಳಿ ದೇವಳದ ಧರ್ಮದರ್ಶಿ ಡಾ. ನಿ.ಬೀ. ವಿಜಯ ಬಲ್ಲಾಳ್​ ಪ್ರಮಾಣಪತ್ರ ವಿತರಿಸಿದರು. ಉದ್ಯಮಿ ಶ್ರೀಕಾಂತ ಅರಿಮಣಿತ್ತಾಯ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು. ಪ್ರೊ. ಸಖಾರಾಮ ಸೋಮಯಾಜಿ, ಬಿ. ನರಹರಿ, ಪಿ. ಸತೀಶ್​ ರಾವ್​, ಶ್ರೀಧರ್​ ಶೇಟ್​, ಮಾರಾಳಿ ಪ್ರತಾಪ್​ ಹೆಗ್ಡೆ, ಸಂಸ್ಥೆಯ ಉಪಾಧ್ಯಕ್ಷರಾದ ಎಸ್​.ವಿ. ಭಟ್​, ವಿ.ಜಿ. ಶೆಟ್ಟಿ, ವಿಶ್ವನಾಥ ಶೆಣೈ, ಯು.ಎಸ್​. ರಾಜಗೋಪಾಲ ಆಚಾರ್ಯ, ಭುವನ ಪ್ರಸಾದ್​ ಹೆಗ್ಡೆ, ಡಾ. ಸುದರ್ಶನ ಮೂರ್ತಿ ದಂಪತಿ ಉಪಸ್ಥಿತರಿದ್ದರು. 
ಶಿಬಿರದ ನಿರ್ದೇಶಕರಾದ ಮಂಗಳೂರಿನ ಪ್ರೊಟೊ ಅಪ್​ ಸ್ಕಿಲ್​ನ ಗುರುದತ್ತ ಬಂಟ್ವಾಳಕರ್​, ಸಹನಾ ಕಿಣಿ ಹಾಗೂ ಬಳಗದವರನ್ನು ಗೌರವಿಸಲಾಯಿತು. ವಿದ್ಯಾರ್ಥಿಗಳು ಶಿಬಿರದ ಅನುಭವ ಹಂಚಿಕೊಂಡರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಐದು ದಿನಗಳ ಶಿಬಿರದಲ್ಲಿ ನೇಮಿಚಂದ್ರ, ಪ್ರವಿಣ ವಿ. ಗುಡಿ, ಡಾ. ವಿರೂಪಾಕ್ಷ ದೇವರಮನೆ, ಡಾ. ಜೆ.ಎನ್​. ಭಟ್​, ಪಿ. ವಾಸುದೇವ ಐತಾಳ್​, ಎಸ್​. ವೆಂಕಟೇಶ್​, ನಂದಾ ವೆಂಕಟೇಶ್​, ಡಾ. ಶಾರದಾ ಎಂ., ಬಿ. ಭಾಸ್ಕರ್​ ರಾವ್​, ಸ್ವಸ್ತಿಕ್​ ಕೆ.ಜೆ., ಡಾ. ಅಪರ್ಣಾ ಶಾನುಭಾಗ್​, ಡಾ. ಗೀತಾ ಸಾಮಕ್​, ಡಾ. ಪಿ.ಅನಂತಕೃಷ್ಣ ಭಟ್​, ವಿಜಯ ಕುಮಾರ್​ ಮುದ್ರಾಡಿ, ಸಂಸತಿ ಶೆಟ್ಟಿಗಾರ್​ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದರು.
ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ್​ ರಾವ್​ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್​ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾ ಪ್ರಸಾದ್​, ಅಶೋಕ್​ ಎಂ. ಸಹಕರಿಸಿದರು. ಶಿಬಿರದಲ್ಲಿ ಉಡುಪಿ ಜಿಲ್ಲೆಯ 244 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಶಿಬಿರದ ನಾಲ್ಕನೇ ದಿನ ಗುರು ಬನ್ನಂಜೆ ಸಂಜೀವ ಸುವರ್ಣ, ಆದ್ಯತಾ ಭಟ್​ ಮತ್ತು ಬಳಗದವರು ಯಕ್ಷಗಾನದ ತುಣುಕು ಪ್ರದರ್ಶಿಸಿದರು. ಮರುದಿನ ಬೆಳಗ್ಗೆ ವಿದ್ಯಾರ್ಥಿಗಳಿಂದ ಸ್ವಚ್ಛತಾ ಅಭಿಯಾನ ನಡೆಯಿತು.