ಉಡುಪಿಯ ಜಿಪಂ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರತೀಕ್​ ಬಾಯಲ್​ ಅವರನ್ನು ಸನ್ಮಾನಿಸಲಾಯಿತು. ಮಂಜುನಾಥ್​ ಶೆಟ್ಟಿ, ರೋಶನ್​ ಶೆಟ್ಟಿ,ಡಾ.ಉದಯ್​ ಶೆಟ್ಟಿ, ಅಂಪಾರು ದಿನಕರ್​ ಶೆಟ್ಟಿ, ಸುಂದರ್​ ನಾಯ್ಕ, ಗುರುಮೂರ್ತಿ ಇತರರಿದ್ದರು. 
ಉಡುಪಿ

ಕ್ರೀಡಾಕೂಟಗಳಿಂದ ಕಾರ್ಯಕ್ಷಮತೆ ಹೆಚ್ಚಳ

* ಜಿಪಂ ಸಿಇಒ ಪ್ರತೀಕ್​ ಬಾಯಲ್​ ಅನಿಸಿಕೆ

* ಸರ್ಕಾರಿ ನೌಕರರ ಸಾಂಸ್ಕೃತಿಕ ಉತ್ಸವ ಸಮಾರೋಪ

ಉಡುಪಿ: ಜನರು ಹಾಗೂ ಜನಪ್ರತಿನಿಧಿಗಳೊಂದಿಗೆ ನೇರ ಸಂಪರ್ಕ ಹೊಂದಿರುವ ಗ್ರಾಮೀಣಾಭಿವೃದ್ಧಿ ಇಲಾಖೆಯ ನೌಕರರು ನಿತ್ಯವೂ ಕೆಲಸದ ಒತ್ತಡದಲ್ಲಿರುತ್ತಾರೆ. ಉಡುಪಿ ಜಿಲ್ಲೆಯ ನೌಕರರು ಪ್ರತಿಭಾನ್ವಿತರಾಗಿದ್ದು, ಅವರಲ್ಲಿ ಸೂಕ್ಷ್ಮತೆ, ತಿಳಿವಳಿಕೆಯಿದೆ. ಶಿಸ್ತುಬದ್ಧವಾದ ಇಂತಹ ಕ್ರೀಡೆ ಹಾಗೂ ಸಾಂಸ್ಕೃತಿಕ ಉತ್ಸವಗಳಿಂದ ಒತ್ತಡದ ಬದುಕಿನಿಂದ ಹೊರಬರಲು ಸಾಧ್ಯವಿದೆ. ಅಲ್ಲದೆ, ನಿತ್ಯದ ಕಾರ್ಯಕ್ಷಮತೆಯಲ್ಲೂ ಹೆಚ್ಚಳ ಕಾಣಬಹುದಾಗಿದೆ ಎಂದು ಜಿಪಂ ಸಿಇಒ ಪ್ರತೀಕ್​ ಬಾಯಲ್​ ಅನಿಸಿಕೆ ವ್ಯಕ್ತಪಡಿಸಿದರು.
ಉಡುಪಿಯ ಜಿಪಂನ ಅಟಲ್​ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಜಿಪಂ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ರಾಜ್ಯ ಪಂಚಾಯತ್​ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ (ರಿ.) ಉಡುಪಿ, ಕಾರ್ಯದರ್ಶಿಗಳು ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರು ಮತ್ತು ಗ್ರಾಪಂ ನೌಕರರ ಕ್ಷೇಮಾಭಿವೃದ್ಧಿ ಸಂಘ ಉಡುಪಿ ಇವರ ಸಹಭಾಗಿತ್ವದಲ್ಲಿ ನಡೆದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ ರಾಜ್​ ಇಲಾಖೆಯ ಅಧಿಕಾರಿಗಳು ಮತ್ತು ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಉತ್ಸವದ ಸಮಾರೋಪದಲ್ಲಿ ಮಾತನಾಡಿದರು.

ವಿವಿಧ ಪಂದ್ಯಾಟ

ಪುರುಷ ಹಾಗೂ ಮಹಿಳೆಯರಿಗೆ ಪ್ರತ್ಯೇಕ ವಿಭಾಗದಲ್ಲಿ ಕ್ರಿಕೆಟ್​, ಥ್ರೋಬಾಲ್​, ಶೆಟಲ್​ ಬ್ಯಾಡ್ಮಿಂಟನ್​, ಹಗ್ಗ ಜಗ್ಗಾಟ, ವೇಗದ ನಡಿಗೆ, ಗೋಣಿಚೀಲ, ಗುಂಡುಎಸೆತ, ಮ್ಯೂಸಿಕಲ್​ ಚೇರ್​, 100 ಹಾಗೂ 200 ಮೀಟರ್​ ಓಟ ಸೇರಿದಂತೆ ವಿವಿಧ ಸ್ಪರ್ಧೆ ನಡೆಯಿತು. ಸಾಂಸತಿಕ ಸ್ಪರ್ಧಾ  ವಿಭಾಗದಲ್ಲಿ ಜಾನಪದ ನೃತ್ಯ, ಫಿಲ್ಮಿಡ್ಯಾನ್ಸ್​, ಕಿರುಪ್ರಹಸನ ಹಾಗೂ ವಿವಿಧ ಮನರಂಜನಾ ಕಾರ್ಯಕ್ರಮ ಜರುಗಿತು.
ಜಿಪಂ ಸಿಇಒ ಪ್ರತೀಕ್​ ಬಾಯಲ್​, ಜಿಲ್ಲಾ ಕ್ರೀಡಾ ಮತ್ತು ಯುವಜನಸೇವಾ ಇಲಾಖೆಯ ಸಹಾಯಕ ನಿರ್ದೇಶಕ ರೋಶನ್​ ಶೆಟ್ಟಿ, ಜಿಲ್ಲಾ ಯೋಜನಾಧಿಕಾರಿ ಡಾ.ಉದಯ್​ ಶೆಟ್ಟಿ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಅಂಪಾರು ದಿನಕರ್​ ಶೆಟ್ಟಿ, ತಾಲೂಕಿನ ಎಲ್ಲ ಇಒಗಳನ್ನು ಸನ್ಮಾನಿಸಲಾಯಿತು.
ಜಿಪಂ ಲೆಕ್ಕಾಧಿಕಾರಿ ಸುಂದರ್​ ನಾಯ್ಕ, ತಾಲೂಕು ಇಒಗಳಾದ ಎಚ್​.ವಿ. ಇಬ್ರಾಹಿಂಪುರ, ಪ್ರಶಾಂತ್​ ರಾವ್​, ವಿಜಯಾ, ಜೇಮ್ಸ್​ ಡಿಸಿಲ್ವಾ, ಮಹೇಶ್​ ಕೆ.ಜಿ., ರಾಮದಾಸ್​ ಉಪಸ್ಥಿತರಿದ್ದರು.
ಪಿಡಿಒ ಗುರುಮೂರ್ತಿ ಸ್ವಾಗತಿಸಿದರು. ಆರ್​ಡಿಪಿಆರ್​ ಕುಟುಂಬದ ಜಿಲ್ಲಾಧ್ಯಕ್ಷ, ಪಿಡಿಒ ಮಂಜುನಾಥ್​ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಿಡಿಒ ಮಹೇಶ್​ ಕೆ., ಸತೀಶ್​ ವಡ್ಡರ್ಸೆ ಹಾಗೂ ಫರ್ಜಾನ ನಿರೂಪಿಸಿದರು. ಅಂಕಿತಾ, ಸುನೀಲ್​, ಅನಿಲ್​ ಶೆಟ್ಟಿ, ದಯಾನಂದ ಬೆನ್ನೂರ್​, ಸಿದ್ದೇಶ್​ ಸಹಕರಿಸಿದರು.

ಕಾಪು ತಾಲೂಕಿಗೆ ಸಮಗ್ರ ಪ್ರಶಸ್ತಿ

ಕಾಪು ತಾಲೂಕು ತಂಡ ಸಮಗ್ರ ಪ್ರಶಸ್ತಿ ಗಳಿಸಿತು. ಕ್ರಿಕೆಟ್​ನಲ್ಲಿ ಉಡುಪಿ ಚಾಂಪಿಯನ್​ ಹಾಗೂ ನರೇಗಾ ತಂಡ ರನ್ನರ್​ ಅಪ್​ ಕಪ್​ ಗಳಿಸಿತು. ಹಗ್ಗಜಗ್ಗಾಟ ಪುರುಷರ ವಿಭಾಗದಲ್ಲಿ ನರೇಗಾ ಪ್ರಥಮ, ಕುಂದಾಪುರ ದ್ವಿತೀಯ, ಮಹಿಳಾ ವಿಭಾಗದಲ್ಲಿ ಕಾರ್ಕಳ ಹಾಗೂ ಜಿಪಂ ಪ್ರಥಮ, ದ್ವಿತೀಯ ಸ್ಥಾನ ಪಡೆದವು. ಮಹಿಳಾ ಥ್ರೋಬಾಲ್​ನಲ್ಲಿ ಬ್ರಹ್ಮಾವರ ಪ್ರಥಮ, ಕಾಪು ದ್ವಿತೀಯ ಸ್ಥಾನ ಗಳಿಸಿತು. ತೀರ್ಪುಗಾರರಾಗಿ ರಂಗಕರ್ಮಿ ಶ್ರೀನಿವಾಸ ಭಟ್​, ಗಣೇಶ್​ ರಾವ್​ ಮತ್ತು ವಿದುಷಿ ಕೀರ್ತನಾ ಪಾಲ್ಗೊಂಡಿದ್ದರು.