ಉಡುಪಿಯಲ್ಲಿ ಸುಮನಸಾ ನಾಟಕೋತ್ಸವದ ಸಮಾರೋಪದಲ್ಲಿ ಕೃಷ್ಣ ಜೋಶಿ ಅವರಿಗೆ 'ಯಕ್ಷಸುಮ' ಪ್ರಶಸ್ತಿ ಪ್ರದಾನ ಮಾಡಲಾಯಿತು. ಪೂರ್ಣಿಮಾ, ಪ್ರಸಾದ್​ರಾಜ್​ ಕಾಂಚನ್​, ಶೇಖರ್​ ಕೋಟ್ಯಾನ್​, ಹರಿಯಪ್ಪ ಕೋಟ್ಯಾನ್​, ನಿಲೇಶ್​, ಎಂ.ಎಸ್​. ಭಟ್​, ಭಾಸ್ಕರ್​ ಪಾಲನ್​, ಪ್ರಕಾಶ್​ ಕೊಡವೂರು ಇದ್ದರು. 
ಉಡುಪಿ

ಕಿರಿಯರಿಗೂ ನೀಡಿ ಮನೆಯ ಜವಾಬ್ದಾರಿ

* ಪಾಲಕರಿಗೆ ಪೂರ್ಣಿಮಾ ಸಲಹೆ

* ಸುಮನಸಾ ರಂಗಹಬ್ಬ ಸಮಾರೋಪ

ಉಡುಪಿ: ನಮ್ಮ ಮಕ್ಕಳು ಮೊಬೈಲ್​ನಲ್ಲೇ ಮುಳುಗಿರುತ್ತಾರೆ ಎಂದು ಹಿರಿಯರು ದೂರುವುದಿದೆ. ಮಕ್ಕಳು ಮೊಬೈಲ್​ನಿಂದ ದೂರವಾಗಬೇಕೆಂದರೆ ಕಿರಿಯರಾದರೂ ಸಹ ಅವರಿಗೆ ಮನೆಯ ಸಣ್ಣಪುಟ್ಟ ಜವಾಬ್ದಾರಿ ವಹಿಸಬೇಕು. ನಾವೆಲ್ಲ ಆರ್ಥಿಕವಾಗಿ ಸಬಲರಾದರೆ ಸಾಲದು. ಸಾಮಾಜಿಕ, ಆರೋಗ್ಯದಲ್ಲಿಯೂ ಸಬಲರಾಗಬೇಕು. ಕ್ರೀಡೆ, ಸಾಂಸತಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಾಗ ಒಳ್ಳೆಯ ಮನಸ್ಥಿತಿ ಇರುತ್ತದೆ ಎಂದು ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸಲಹೆ ನೀಡಿದರು.
ಉಡುಪಿಯ ಅಜ್ಜರಕಾಡು ಭುಜಂಗ ಪಾರ್ಕ್​ನಲ್ಲಿರುವ ತೆರೆದ ವೇದಿಕೆಯಲ್ಲಿ ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆ ವತಿಯಿಂದ ವಾರಗಳ ಕಾಲ ನಾಟಕೋತ್ಸವ ರಂಗಹಬ್ಬ-14 ನಡೆದಿದ್ದು, ಶನಿವಾರ (ಫೆ.28) ರಾತ್ರಿ ಆಯೋಜಿಸಿದ್ದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ನಾಟಕವೂ ಶಿಕ್ಷಣವಾಗಲಿ

ಉದ್ಯಮಿ ಪ್ರಸಾದ್​ರಾಜ್​ ಕಾಂಚನ್​ ಮಾತನಾಡಿ, ನಮ್ಮ ಸಂಸ್ಕೃತಿ, ಸಂಪ್ರದಾಯವನ್ನು ಮುಂದಿನ ಪೀಳಿಗೆಗೆ ದಾಟಿಸುವುದು ಹೇಗೆಂಬ ಪ್ರಶ್ನೆ ನಮ್ಮ ಮುಂದಿದೆ. ಹೇಗೆ ಸಮಾಜಮುಖಿಯಾಗಿ ಬೆಳೆಯಬೇಕೆನ್ನುವುದನ್ನು ನಾಟಕಗಳಿಂದ ತಿಳಿಯಬಹುದು. ಹೀಗಾಗಿ ಶಾಲಾ ಪಠ್ಯದಲ್ಲಿಯೇ ನಾಟಕವನ್ನೂ ಅಳವಡಿಸಬೇಕು. ಅದರಿಂದ ಶಾಲೆಯಲ್ಲಿಯೇ ರಂಗಚಟುವಟಿಕೆ ಆರಂಭವಾಗಿ, ಮಕ್ಕಳಲ್ಲೂ ಚಿಂತನಾ ಮನೋಭಾವ ಮೂಡುತ್ತದೆ ಎಂದರು.
ಉದ್ಯಮಿ ಶೇಖರ್​ ಜಿ. ಕೋಟ್ಯಾನ್​ ಮಾತನಾಡಿದರು. ಕಾರ್ತಿಕ್​ ಗ್ರೂಪ್​ನ ಪ್ರವರ್ತಕ ಹರಿಯಪ್ಪ ಕೋಟ್ಯಾನ್​ ಅಧ್ಯಕ್ಷತೆ ವಹಿಸಿದ್ದರು. ಕಲಾವಿದ ಕೃಷ್ಣ ಜೋಶಿ ಅವರಿಗೆ ಯಕ್ಷಗುರು ದಿ. ಯು.ದುಗ್ಗಪ್ಪ ಅವರ ಸ್ಮರಣಾರ್ಥ ನೀಡುವ 'ಯಕ್ಷಸುಮ' ಪ್ರಶಸ್ತಿ ಪ್ರದಾನ ಮಾಡಲಾಯಿತು.
ನ್ಯಾಚುರಲ್​ ಗ್ರಾನೈಟ್​ನ ಮಾಲೀಕ ನಿಲೇಶ್​, ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯ ಗೌರವಾಧ್ಯಕ್ಷ ಎಂ.ಎಸ್​. ಭಟ್​, ಸಂಚಾಲಕ ಭಾಸ್ಕರ್​ ಪಾಲನ್​ ಉಪಸ್ಥಿತರಿದ್ದರು.
ಸಂಘಟನೆಯ ಅಧ್ಯಕ್ಷ ಪ್ರಕಾಶ್​ ಜಿ. ಕೊಡವೂರು ಸ್ವಾಗತಿಸಿದರು. ಅಕ್ಷತ್​ ಅಮೀನ್​ ವಂದಿಸಿದರು. ನಾಗೇಶ್​ ಮತ್ತು ವಸುಪ್ರದಾ ಕಾರ್ಯಕ್ರಮ ನಿರ್ವಹಿಸಿದರು.