ಉಡುಪಿಯಲ್ಲಿ ನಡೆದ ಹಸ್ತಪ್ರತಿಗಳ ಲಿಪ್ಯಂತರ ಕಲಿಕಾ ಸಾಮರ್ಥ್ಯ ನಿರ್ಮಾಣ ಕಾರ್ಯಾಗಾರದ ಸಮಾರೋಪದಲ್ಲಿ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಡಾ. ನಾರಾಯಣಂ ಶ್ರೀಕಾಂತ್​, ಡಾ. ಪಾದೇಕಲ್ಲು ವಿಷ್ಣು ಭಟ್​, ಡಾ. ಟಿ.ಮಹೇಶ್ವರ್​, ಡಾ.ದಿಲೀಪಕುಮಾರ್​ ಕಾರ್​, ಡಾ.ಕೃಷ್ಣಯ್ಯ, ಡಾ. ಬಿ.ಗೋಪಾಲ್​ ಆಚಾರ್ಯ, ಶ್ರೀಧರ್​ ಆಚಾರ್ಯ ಇತರರಿದ್ದರು. 
ಉಡುಪಿ

ಎಲ್ಲರಿಗೂ ಅಗತ್ಯ ಪ್ರಾಚೀನ ವೈದ್ಯಶಾಸ್ತ್ರದ ಪ್ರಯೋಜನ

* ಡಾ. ನಾರಾಯಣಂ ಶ್ರೀಕಾಂತ್​ ಅನಿಸಿಕೆ

* ಹಸ್ತಪ್ರತಿಗಳ ಲಿಪ್ಯಂತರ ಕಲಿಕಾ ಕಾರ್ಯಾಗಾರ ಸಮಾರೋಪ

ಉಡುಪಿ: ಭಾರತೀಯ ಹಸ್ತಪ್ರತಿಗಳಲ್ಲಿ ದಾಖಲೆಗೊಂಡ ಪ್ರಾಚೀನ ವೈದ್ಯಶಾಸ್ತ್ರ ಪದ್ಧತಿಯ ಅನಾವರಣ ಇಂದಿನ ತುರ್ತು ಅಗತ್ಯತೆಯಾಗಿದೆ. ದೇಶದ ಮನೆ-ಮನೆಗಳಲ್ಲಿ ವೈದ್ಯಶಾಸ್ತ್ರ, ರಸಶಾಸ್ತ್ರ, ಮನೆಮದ್ದು ಮೊದಲಾದವುಗಳ ಆಕರವೇ ಇದ್ದು ಅದರ ಲಿಪ್ಯಂತರ ಕಾರ್ಯ ಹಾಗೂ ಹಸ್ತಪ್ರತಿ ಲಿಪಿಗಳ ಸಂರಕ್ಷಣೆಗೆ ವ್ಯಾಪಕವಾಗಿ ಲಿಪಿ ಕಾರ್ಯಾಗಾರ ನಡೆಸಲಾಗುವುದು. ತನ್ಮೂಲಕ ಭಾರತೀಯ ವೈದ್ಯಶಾಸ್ತ್ರದ ಪ್ರಯೋಜನ ಸಾಮಾಜಿಕವಾಗಿ ಲಭ್ಯವಾಗಿಸಲು ನಮ್ಮ ಸಂಸ್ಥೆ ಬದ್ಧವಾಗಿದೆ ಎಂದು ಕೇಂದ್ರೀಯ ಆಯುರ್ವೇದೀಯ ವಿಜ್ಞಾನ ಅನುಸಂಧಾನ ಪರಿಷತ್​ (ಸಿಸಿಆರ್​ಎಎಸ್​)ನ ಉಪ ಮಹಾನಿರ್ದೇಶಕ ಡಾ. ನಾರಾಯಣಂ ಶ್ರೀಕಾಂತ್​ ತಿಳಿಸಿದರು.
ಉಡುಪಿಯ ಗೀತಾ ಮಂದಿರದ ಶ್ರೀ ಪುತ್ತಿಗೆ ನೃಸಿಂಹ ಸಭಾಭವನದಲ್ಲಿ ಪುತ್ತಿಗೆ ಸುಗುಣೇಂದ್ರ ಶ್ರೀ, ಕಿರಿಯ ಪಟ್ಟದ ಸುಶ್ರೀಂದ್ರ ಶ್ರೀ ಅನುಗ್ರಹದೊಂದಿಗೆ ಶ್ರೀ ವಾದಿರಾಜ ಸಂಶೋಧನಾ ಪ್ರತಿಷ್ಠಾನ (ರಿ.) ಉಡುಪಿ, ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯ ನವದೆಹಲಿ ಹಾಗೂ ಕೇಂದ್ರೀಯ ಆಯುರ್ವೇದೀಯ ವಿಜ್ಞಾನ ಅನುಸಂಧಾನ ಪರಿಷತ್​ ಸಹಭಾಗಿತ್ವದಲ್ಲಿ ಎರಡು ವಾರಗಳ ಕಾಲ ನಡೆದಿದ್ದ ಆಯುರ್ವೇದ ಹಸ್ತಪ್ರತಿಗಳ ಲಿಪ್ಯಂತರ ಕಲಿಕಾ ಸಾಮರ್ಥ್ಯ ನಿರ್ಮಾಣ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಹಿರಿಯ ವಿದ್ವಾಂಸ ಡಾ. ಪಾದೇಕಲ್ಲು ವಿಷ್ಣು ಭಟ್​ ಮಾತನಾಡಿ, ಹಸ್ತಪ್ರತಿ ಲಿಪಿಗಳ ಸೊಬಗು ಮತ್ತು ಸ್ವಾರಸ್ಯಕರ ಸಂಗತಿ ವಿವರಿಸಿದರು. ಕೇಂದ್ರೀಯ ಆಯುರ್ವೇದ ಸಂಸ್ಥೆಯ ನಿರ್ದೇಶಕ ಡಾ. ಟಿ.ಮಹೇಶ್ವರ್​, ನವದೆಹಲಿಯ ಸಂಸ್ಕೃತ ವಿದ್ವಾಂಸ ಡಾ.ದಿಲೀಪಕುಮಾರ್​ ಕಾರ್​ ಉಪಸ್ಥಿತರಿದ್ದರು. 
ಉಡುಪಿಯ ಪ್ರಾಚ್ಯ ಸಂಚಯ ಪ್ರತಿಷ್ಠಾನದ ಡಾ.ಕೃಷ್ಣಯ್ಯ, ತುಳು ಲಿಪಿ ವಿದ್ವಾಂಸ ಹಾಗೂ ಸುಗುಣಮಾಲಾ ಪತ್ರಿಕೆಯ ಸಂಪಾದಕ ಮಹಿತೋಷ್​ ಆಚಾರ್ಯ, ಕುಕ್ಕೆ ಸುಬ್ರಹ್ಮಣ್ಯ ಮಠದ ಶ್ರೀನಿಕೇತನ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ. ಜಿ.ವಿ.ಕಲ್ಲಾಪುರ, ಬೆಂಗಳೂರಿನ ಐಜಿಎನ್ಸಿ ಸಂಸ್ಥೆಯ ಡಾ.ಸದ್ಯೋಜಾತ ಭಟ್​ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದರು.
ಉದ್ಯಾವರ ಹಾಗೂ ಹಾಸನದ ಎಸ್​ಡಿಎಂ ಆಯುರ್ವೇದ ಕಾಲೇಜು ವಿದ್ಯಾರ್ಥಿಗಳು, ಶ್ರೀ ಪುತ್ತಿಗೆ ವಿದ್ಯಾಪಿಠದ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಎಲ್ಲರಿಗೂ ಪ್ರಮಾಣಪತ್ರ ವಿತರಿಸಲಾಯಿತು. ತುಳು ಮತ್ತು ಪ್ರಾಚೀನ ಕನ್ನಡ ಲಿಪಿ ಕಲಿತ ಫಲಾನುಭವಿಗಳೊಂದಿಗೆ ಸಂವಾದ ನಡೆಯಿತು.
ಕಾರ್ಯಾಗಾರದ ಮುಖ್ಯ ಸಂಘಟಕ ಹಾಗೂ ವಾದಿರಾಜ ಸಂಶೋಧನಾ ಪ್ರತಿಷ್ಠಾನದ ನಿರ್ದೇಶಕ ಡಾ. ಬಿ.ಗೋಪಾಲ್​ ಆಚಾರ್ಯ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಪ್ರತಿಷ್ಠಾನದ ವಿದ್ವಾನ್​ ಶ್ರೀಧರ್​ ಆಚಾರ್ಯ ಸ್ಥಳೀಯ ಸಂಯೋಜಕರಾಗಿ ಕಾರ್ಯ ನಿರ್ವಹಿಸಿದರು.
"

ಉತ್ತರ ಹಾಗೂ ಪೂರ್ವ ಭಾರತಗಳಲ್ಲಿ ಲಿಪಿ ಕಾರ್ಯಾಗಾರ ಭರದಿಂದ ಸಾಗಿದ್ದು, ಇದೀಗ ದಕ್ಷಿಣದ ಭಾಗದಲ್ಲಿ ವಿಶೇಷವಾಗಿ ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಚಾಲನೆ ದೊರೆತಿದೆ. ಮುಂದಿನ ದಿನಗಳಲ್ಲಿ ಭಾರತ ಸರ್ಕಾರದ ವಿಶೇಷ ಮಾನ್ಯತೆಯಲ್ಲಿ ಉಡುಪಿಯ ಶ್ರೀ ವಾದಿರಾಜ ಸಂಶೋಧನಾ ಪ್ರತಿಷ್ಠಾನದಿಂದ ಇನ್ನೂ ಹೆಚ್ಚಿನ ಸಂಶೋಧನಾತ್ಮಕ ಕಾರ್ಯಕ್ರಮ ಆಯೋಜಿಸಲಾಗುವುದು.

— ಡಾ. ನಾರಾಯಣಂ ಶ್ರೀಕಾಂತ್​. ಸಿಸಿಆರ್​ಎಎಸ್​ನ ಉಪ ಮಹಾನಿರ್ದೇಶಕ.