ಉಡುಪಿಯಲ್ಲಿ ಆಯೋಜಿಸಿದ್ದ 'ಕೊಂಕಣಿ ರಂಗಾಂತರಂಗ ತರಬೇತಿ' ಸಮಾರೋಪದಲ್ಲಿ ಶಿಬಿರಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು. ತೋನ್ಸೆ ರಂಗ ಪೈ, ಕಾಸರಗೋಡು ಚಿನ್ನಾ, ಚೇಂಪಿ ರಾಮಚಂದ್ರ ಭಟ್, ಗಣೇಶ್ ಕಂಡ್ಲೂರು, ಮಾಧವ ಶೇಟ್, ಕಮಲಾಕ್ಷ ಶೇಟ್, ಆನಂದ್ ನಾಯಕ್ ಮಲ್ಪೆ, ಶ್ವೇತಾ ಸುಧಾ ಪೈ, ರಾಜಗೋಪಾಲ್ ಶೇಟ್, ಶಶಿಭೂಷಣ್ ಕಿಣಿ ಇತರರಿದ್ದರು.
* ಹಿರಿಯ ಕಲಾವಿದ ತೋನ್ಸೆ ರಂಗ ಪೈ ಅನಿಸಿಕೆ
* 'ಕೊಂಕಣಿ ರಂಗಾಂತರಂಗ ತರಬೇತಿ' ಸಮಾರೋಪ
ಉಡುಪಿ: ರಂಗ ತರಬೇತಿಯಿಂದ ಮಕ್ಕಳಲ್ಲಿರುವ ಪ್ರತಿಭೆ, ಕಲೆಯನ್ನು ಹೊರ ಜಗತ್ತಿಗೆ ತೋರ್ಪಡಿಸಲು ಸಹಕಾರಿ. ನೀಡುವ ಪ್ರದರ್ಶನದಿಂದ ಜನರ ಮನಸ್ಸು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಬಾಲ್ಯದಲ್ಲಿಯೇ ಹೆಚ್ಚುತ್ತದೆ. ಹೀಗಾಗಿ ಪ್ರತಿಭೆಗಳನ್ನು ಗುರುತಿಸಿ, ಬೆಳೆಸಿದರೆ ಅವರೂ ಸಹ ಉತ್ತಮ ಕಲಾವಿದರಾಗಬಹುದು. ರಂಗಭೂಮಿಯಿಂದ ಜನರಿಗೆ ಉತ್ತಮ ಸಂದೇಶ, ಮಾರ್ಗದರ್ಶನ ದೊರೆಯುತ್ತದೆ ಎಂದು ಖ್ಯಾತ ಹಿರಿಯ ಕಲಾವಿದ ಮಣಿಪಾಲದ ತೋನ್ಸೆ ರಂಗ ಪೈ ಅನಿಸಿಕೆ ವ್ಯಕ್ತಪಡಿಸಿದರು.
ಉಡುಪಿಯ ಒಳಕಾಡು ಪದ್ಮಾವತಿ ಸಭಾಸದನದಲ್ಲಿ ಅನಂತ ವೈದಿಕ ಕೇಂದ್ರ ಉಡುಪಿ, ಪ್ರಸಿದ್ಧ ರಂಗಕರ್ಮಿ, ಕೊಂಕಣಿ ಅಕಾಡೆಮಿ ಮಾಜಿ ಅಧ್ಯಕ್ಷ ಹಾಗೂ ಚಲನಚಿತ್ರ ನಿರ್ದೇಶಕ ಕಾಸರಗೋಡು ಚಿನ್ನಾ ನೇತೃತ್ವದಲ್ಲಿ ಆಯೋಜಿಸಿದ್ದ 2 ದಿನದ 'ಕೊಂಕಣಿ ರಂಗಾಂತರಂಗ ತರಬೇತಿ' ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ತರಬೇತಿ ನೀಡಿದ ಕಾಸರಗೋಡು ಚಿನ್ನಾ ಅವರನ್ನು ಸನ್ಮಾನಿಸಲಾಯಿತು. ಶಿಬಿರಾರ್ಥಿಗಳಿಗೆ ರಂಗಭೂಮಿಯ ವಿವಿಧ ತರಬೇತಿ, ಅನೇಕ ರೀತಿಯಲ್ಲಿ ಹಾವ-ಭಾವ, ಅಭಿನಯ, ಮುಖ ವರ್ಣಿಕೆ, ಲೈಟಿಂಗ್, ಸೌಂಡ್ಸ್ ಬಗ್ಗೆ ಹಾಗೂ ಕಲಾ ಪ್ರಕಾರಗಳನ್ನು ತಿಳಿಸಿಕೊಡಲಾಯಿತು. ಪಾಳ್ಗೊಂಡ ಎಲ್ಲರಿಗೆ ಸಂಸ್ಥೆಯ ವತಿಯಿಂದ ಸ್ಮರಣಿಕೆ, ಪ್ರಶಸ್ತಿ ಪತ್ರ ನೀಡಲಾಯಿತು.
ರಂಗ ನಿರ್ದೇಶಕ ಗಣೇಶ್ ಕಂಡ್ಲೂರು, ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಮಾಧವ ಶೇಟ್, ಕಮಲಾಕ್ಷ ಶೇಟ್, ರಂಗ ಪೋಷಕ ಆನಂದ್ ನಾಯಕ್ ಮಲ್ಪೆ, ರಂಗ ನಟಿ ಶ್ವೇತಾ ಸುಧಾ ಪೈ, ರಂಗ ನಟ ರಾಜಗೋಪಾಲ್ ಶೇಟ್, ಕೊಂಕಣಿ ರಂಗಾತರಂಗ ಸಂಚಾಲಕ ಶಶಿಭೂಷಣ್ ಕಿಣಿ ಉಪಸ್ಥಿತರಿದ್ದರು.
ಅನಂತ ವೈದಿಕ ಕೇಂದ್ರದ ಆಡಳಿತ ನಿರ್ದೇಶಕ ವೇದಮೂರ್ತಿ ಚೇಂಪಿ ರಾಮಚಂದ್ರ ಭಟ್ ಸ್ವಾಗತಿಸಿ, ಕಾರ್ಯ ಕ್ರಮ ನಿರೂಪಿಸಿದರು. ಕೊಂಕಣಿ ಸಮಾಜದ ವಿವಿಧ ಮುಖಂಡರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
"
ಕೊಂಕಣಿ ಭಾಷೆ, ಸಂಸ್ಕೃತಿ ಬೆಳೆಸುವ ಉದ್ದೇಶದಿಂದ ರಾಜ್ಯದ ವಿವಿಧೆಡೆ "ಕೊಂಕಣಿ ರಂಗಾಂತರಂಗ ತರಬೇತಿ' ಹಮ್ಮಿಕೊಳ್ಳಲಾಗಿದೆ. ರಂಗಭೂಮಿ ಕಲೆ ಉಳಿಸಿ&ಬೆಳೆಸುವುದು ಈ ಕಾರ್ಯಾಗಾರದ ಪ್ರಮುಖ ಉದ್ದೇಶ. ಕಲಾಸಕ್ತರನ್ನು ಒಂದೆಡೆ ಒಗ್ಗೂಡಿಸಿ ಅವರಲ್ಲಿರುವ ಕಲಾ ಪ್ರತಿಭೆ ಅನಾವರಣಗೊಳಿಸಿ ಸೂಕ್ತ ವೇದಿಕೆ ಕಲ್ಪಿಸುವುದೇ ನಮ್ಮೆಲ್ಲರ ಆದ್ಯತೆ.
— ಕಾಸರಗೋಡು ಚಿನ್ನಾ. ಕೊಂಕಣಿ ಅಕಾಡಮಿ ಮಾಜಿ ಅಧ್ಯಕ್ಷ.