ಉಡುಪಿಯಲ್ಲಿ ರೆಡ್ಕ್ರಾಸ್ ವತಿಯಿಂದ ನಡೆದ ಮಹಿಳಾ ದಿನಾಚರಣೆ ಸಪ್ತಾಹದ ಸಮಾರೋಪದಲ್ಲಿ ಸಾಧಕ ಮಹಿಳೆಯರನ್ನು ಸನ್ಮಾನಿಸಲಾಯಿತು. ಗೀತಾ ಸುರತ್ಕಲ್, ಬಸ್ರೂರು ರಾಜೀವ್ ಶೆಟ್ಟಿ, ಡಾ. ಗಣನಾಥ ಶೆಟ್ಟಿ, ಪೂರ್ಣಿಮಾ, ಡಾ.ನಿಕೇತನಾ, ವಿ.ಜಿ. ಶೆಟ್ಟಿ, ಟಿ.ಚಂದ್ರಶೇಖರ್, ರಮಾದೇವಿ, ರಾವೇಂದ್ರ ಪ್ರಭು ಕರ್ವಾಲು, ಭಾರತಿ ಮರವಂತೆ ಇತರರಿದ್ದರು.
* ಚಲನಚಿತ್ರ ನಟಿ ಗೀತಾ ಸುರತ್ಕಲ್ ಅನಿಸಿಕೆ
* ಮಹಿಳಾ ದಿನಾಚರಣೆಯ ಸಪ್ತಾಹ ಸಮಾರೋಪ
ಉಡುಪಿ: ವಿವಿಧ ಕ್ಷೇತ್ರಗಳಲ್ಲಿ ಮಹಿಳೆಗೆ ಗೌರವಾನ್ವಿತ ಸ್ಥಾನ-ಮಾನ ದೊರೆತರೂ ಸಹ ಇನ್ನೂ ಸಮಾನತೆ ಮರೀಚಿಕೆಯಾಗಿದೆ. ಮಹಿಳೆ ಆರ್ಥಿಕವಾಗಿ ಸಬಲೀಕರಣಗೊಂಡರೆ ಸಮಾನತೆ ಪಡೆಯಲು ಸಾಧ್ಯ. ಈ ದೃಷ್ಟಿಯಿಂದ ಅರಿವು ಮೂಡಿಸುವ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣಾ ಸಪ್ತಾಹವು ಸಾರ್ಥಕ ಕಾರ್ಯಕ್ರಮವಾಗಿದೆ ಎಂದು ಚಲನಚಿತ್ರ ನಟಿ ಗೀತಾ ಸುರತ್ಕಲ್ ಅನಿಸಿಕೆ ವ್ಯಕ್ತಪಡಿಸಿದರು.
ಉಡುಪಿಯಲ್ಲಿರುವ ಭಾರತೀಯ ರೆಡ್ ಕ್ರಾಸ್ ಭವನದ ಜಿಲ್ಲಾ ಶಾಖೆಯಲ್ಲಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ ಜಿಲ್ಲೆ, ಉಡುಪಿ ಜಿಲ್ಲಾ ಲೇಖಕಿಯರ ವಾಚಕಿಯರ ಸಂಘದ ಆಶ್ರಯದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ಸಪ್ತಾಹದ ಸಮಾರೋಪ ಕಾರ್ಯಕ್ರಮದಲ್ಲಿ ಸಾಧಕ ಮಹಿಳೆಯರನ್ನು ಸನ್ಮಾನಿಸಿ, 'ಮಹಿಳೆ-ರಂಗಭೂಮಿ ಮತ್ತು ಕಾರಂತರ ಬರಹಗಳು' ವಿಷಯ ಕುರಿತು ಉಪನ್ಯಾಸ ನೀಡಿ ಮಾತನಾಡಿದರು.
ಸಮಾರೋಪ ಭಾಷಣ ಮಾಡಿದ ಡಾ. ಶಿವರಾಮ ಕಾರಂತ ಟ್ರಸ್ಟ್ನ ಅಧ್ಯಕ್ಷ ಡಾ. ಗಣನಾಥ ಶೆಟ್ಟಿ ಎಕ್ಕಾರು, ಮಹಿಳಾ ದಿನಾಚರಣೆಯ ಸಪ್ತಾಹ ಸಾವಿರಾರು ವಿದ್ಯಾರ್ಥಿಗಳಲ್ಲಿ ಮಹಿಳಾ ಸಮಾನತೆಯ ಅರಿವು ಮೂಡಿಸಲು ಸಹಕಾರಿಯಾಗಿದೆ ಎಂದರು.
ಸಾಧಕಿಯರಿಗೆ ಸನ್ಮಾನ
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ರೆಡ್ಕ್ರಾಸ್ ವತಿಯಿಂದ ಡಾ. ಪಾರ್ವತಿ ಜಿ. ಐತಾಳ್, ಕ್ಯಾಪ್ಟನ್ ಡಾ. ಸುಕನ್ಯಾ ಮಾರ್ಟಿಸ್, ಸುಜಯಾ ಕೆ.ಎಸ್., ಶ್ಯಾಮಲಾ ಸಿ.ಕೆ., ಕುಸುಮಾ ಕಾಮತ್ ಅವರನ್ನು ಸನ್ಮಾನಿಸಲಾಯಿತು. ರಂಗವಲ್ಲಿ ಮೂಲಕ 'ಮಾನವ ಹಕ್ಕುಗಳ ಪರಿಚಯ ಸ್ಪರ್ಧೆ'ಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಕರ್ನಾಟಕ ರಾಜ್ಯ ರೆಡ್ ಕ್ರಾಸ್ನ ಸಭಾಪತಿ ಬಸ್ರೂರು ರಾಜೀವ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ರೆಡ್ ಕ್ರಾಸ್ ಆಡಳಿತ ಮಂಡಳಿಯ ಸದಸ್ಯರಾದ ವಿ.ಜಿ. ಶೆಟ್ಟಿ, ಟಿ.ಚಂದ್ರಶೇಖರ್, ಖಚಾಂಚಿ ರಮಾದೇವಿ, ರಾಘವೇಂದ್ರ ಪ್ರಭು ಕರ್ವಾಲು, ಡಾ. ಶಿವರಾಮ ಕಾರಂತ ಟ್ರಸ್ಟ್ನ ಸದಸ್ಯರಾದ ಡಾ. ಭಾರತಿ ಮರವಂತೆ. ಮಹಮ್ಮದ್ ಶರೀಫ್, ಸತೀಶ್ ಕೊಡವೂರು ಉಪಸ್ಥಿತರಿದ್ದರು.
ಪ್ರಾಧ್ಯಾಪಕಿ ದಿವ್ಯಾ ಎಂ.ಎಸ್. ಪ್ರಾರ್ಥಿಸಿದರು. ಡಾ. ಶಿವರಾಮ ಕಾರಂತ ಟ್ರಸ್ಟ್ನ ಸದಸ್ಯ ಕಾರ್ಯದರ್ಶಿ ಪೂರ್ಣಿಮಾ ಸ್ವಾಗತಿಸಿದರು. ಜಿಲ್ಲಾ ಲೇಖಕಿಯರ ವಾಚಕಿಯರ ಸಂಘದ ಅಧ್ಯಕ್ಷೆ ಡಾ.ನಿಕೇತನಾ ವಂದಿಸಿದರು. ಉಪನ್ಯಾಸಕಿ ಶಾಲಿನಿ ಕಾರ್ಯಕ್ರಮ ನಿರ್ವಹಿಸಿದರು. ಸಪ್ತಾಹದ ನಿಮಿತ್ತ ಉಡುಪಿ ಜಿಲ್ಲೆಯ ವಿವಿಧ ಶಾಲಾ, ಕಾಲೇಜುಗಳಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.