ಕಲ್ಲಾಜೆ ರಸ್ತೆ ಕಾಮಗಾರಿ ಆರಂಭಗೊಂಡಿರುವುದು. 
ಉಡುಪಿ

ಹದಗೆಟ್ಟಿದ್ದ ರಸ್ತೆಯಿಂದ ಮಣ್ಣು ತೆರವು

ಇಂದಿರಾ ಎನ್ ಕೆ
ಉಳ್ಳಾಲ: ತೀರಾ ಹದಗೆಟ್ಟ ರಸ್ತೆಯಲ್ಲಿ ಆಂಬುಲೆನ್ಸ್ ಚಲಿಸಲಾಗದೆ ಅರ್ಧದಲ್ಲೇ ನಿಂತ ಪರಿಣಾಮ ವೃದ್ಧ ರೋಗಿಯನ್ನು ಆಟೋ ಮೂಲಕ ಸಾಗಿಸಿದ ಪ್ರಕರಣ ವರದಿಯಾದ ಬಳಿಕ ಎಚ್ಚೆತ್ತುಕೊಂಡ ಅಧಿಕಾರಿಗಳು ಕಾಮಗಾರಿ ಆರಂಭಿಸಿದ್ದಾರೆ.
ಪಾವೂರು ಗ್ರಾಮದ ಇನೋಳಿ ಕಲ್ಲಾಜೆ ನಿವಾಸಿ ವೃದ್ಧೆ ಯಮುನಾ ಎಂಬುವರಿಗೆ ಮೂರು ದಿನಗಳ ಹಿಂದೆ ತೀವ್ರ ಅನಾರೋಗ್ಯ ಕಾಡಿತ್ತು. ಚಿಂತಾಜನಕ ಸ್ಥಿತಿಯಲ್ಲಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸುವ ನಿಟ್ಟಿನಲ್ಲಿ ಆಂಬುಲೆನ್ಸ್ ಕರೆಸಲಾಗಿದ್ದರೂ ಇಲ್ಲಿನ ರಸ್ತೆ ತೀರಾ ಹದಗೆಟ್ಟಿದ್ದರಿಂದ ಆಂಬುಲೆನ್ಸ್ ಚಲಿಸಲು ಸಾಧ್ಯವಾಗದೆ ಅರ್ಧದಲ್ಲೇ ನಿಂತಿತ್ತು. ಬಳಿಕ ಅವರ ಮನೆಗೆ ಬಂದಿದ್ದ ಸಂಬಂಧಿಯ ಆಟೋದಲ್ಲೇ ಹರಸಾಹಸಪಟ್ಟು ರೋಗಿಯನ್ನು ಆಂಬುಲೆನ್ಸ್ ಇರುವಲ್ಲಿಗೆ ಸಾಗಿಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಇಲ್ಲಿನ ರಸ್ತೆ ತೀರಾ ಹದಗೆಟ್ಟಿರುವ ಬಗ್ಗೆ ಸ್ಥಳೀಯರು ಕಳೆದ ತಿಂಗಳು ಪಾವೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ದೂರು ನೀಡಿದ್ದರು. ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಗಿದ್ದ ಮಣ್ಣು ತೆರವುಗೊಳಿಸಲಾಗಿತ್ತು. ಆದರೆ ವಾಹನ ಸಂಚಾರಕ್ಕೆ ಯೋಗ್ಯವಾಗಿ ಮಾಡಿರಲಿಲ್ಲ. ಮಳೆಯಿಂದಾಗಿ ರಸ್ತೆ ತೀರಾ ಹದಗೆಟ್ಟು ನಡೆದಾಡಲೂ ಸಾಧ್ಯವಾಗದ ಪರಿಸ್ಥಿತಿ ಎದುರಾಗಿತ್ತು. ಮೂರು ದಿನಗಳ ಹಿಂದೆ ರೋಗಿಯನ್ನು ಸಾಗಿಸಿದ ಪರಿಸ್ಥಿತಿ ಮಾಧ್ಯಮಗಳಲ್ಲಿ ವರದಿಯಾದ ಬಳಿಕ ಅಧಿಕಾರಿಗಳು ಎಚ್ಚೆತ್ತು ಕಾಮಗಾರಿ ಆರಂಭಿಸಿದ್ದಾರೆ.