ಕೈರಬೆಟ್ಟು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆಯುತ್ತಿರುವ ತ್ಯಾಜ್ಯ ಸಂಗ್ರಹ ಅಭಿಯಾನ.
ಹರಿಪ್ರಸಾದ್ ನಂದಳಿಕೆ ಕಾರ್ಕಳ
ಪುಸ್ತಕದ ಪಾಠಗಳಿಗೆ ಸೀಮಿತವಾಗದೆ, ಸಾವಾಜಿಕ ಕಳಕಳಿಯೊಂದಿಗೆ ಪರಿಸರ ಸಂರಕ್ಷಣೆಯ ಮಹತ್ವ ಸಾರುವ ಕೆಲಸಕ್ಕೆ ಕೈರಬೆಟ್ಟು ಸರ್ಕಾರಿ ಪ್ರಾಥಮಿಕ ಶಾಲೆ ನಾಂದಿ ಹಾಡಿದೆ. ಶಾಲೆಯು ಕೈಗೊಂಡಿರುವ ವಿಶಿಷ್ಟ ‘ತ್ಯಾಜ್ಯ ಸಂಗ್ರಹ ಅಭಿಯಾನ’ ಇದೀಗ ಸ್ಥಳೀಯಮಟ್ಟದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.
ಮಕ್ಕಳಲ್ಲಿ ಚಿಕ್ಕ ವಯಸ್ಸಿನಲ್ಲೇ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಕಲ್ಯಾ ಗ್ರಾಮದ ಕೈರಬೆಟ್ಟು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರು ಈ ವಿಶೇಷ ಕಾರ್ಯಕ್ರಮ ರೂಪಿಸಿದ್ದಾರೆ. ಇದರ ಭಾಗವಾಗಿ ಪ್ರತಿಯೊಬ್ಬ ವಿದ್ಯಾರ್ಥಿ ತಮ್ಮ ಮನೆಯಲ್ಲಿ ಉತ್ಪತ್ತಿಯಾಗುವ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸಂಗ್ರಹಿಸಿ ಶಾಲೆಗೆ ತರುವಂತೆ ಪ್ರೋತ್ಸಾಹಿಸಲಾಗುತ್ತಿದೆ. ಇದು ಕೇವಲ ಶಾಲಾ ಆವರಣದ ಸ್ವಚ್ಛತೆಗೆ ಸೀಮಿತವಾಗದೆ, ವಿದ್ಯಾರ್ಥಿಗಳ ಮನೆಗಳಲ್ಲೂ ಪ್ಲಾಸ್ಟಿಕ್ ನಿರ್ಮೂಲನೆ ಜಾಗೃತಿ ಮೂಡಿಸುತ್ತಿದೆ. ಮಕ್ಕಳಲ್ಲಿ ಉತ್ಸಾಹವನ್ನು ಹೆಚ್ಚಿಸಲು ಶಾಲೆ ವಿನೂತನ ಕ್ರಮವೊಂದನ್ನು ಜಾರಿಗೆ ತಂದಿದೆ.
ಪ್ರತಿ ವಾರ ಅತಿ ಹೆಚ್ಚು ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಿ ತರುವ ವಿದ್ಯಾರ್ಥಿಯನ್ನು ಗುರುತಿಸಿ ಅವರಿಗೆ ಬಹುವಾನ ನೀಡಿ ಪ್ರೋತ್ಸಾಹಿಸಲಾಗುತ್ತದೆ. ಈ ಸ್ಪರ್ಧಾತ್ಮಕ ಕಾರ್ಯಕ್ರಮ ವಿದ್ಯಾರ್ಥಿಗಳಲ್ಲಿ ಪರಿಸರದ ಬಗ್ಗೆ ಕಾಳಜಿ ಜತೆಗೆ ಜವಾಬ್ದಾರಿಯನ್ನೂ ಹೆಚ್ಚಿಸಿದೆ. ಶಾಲೆಯಲ್ಲಿ ಸಂಗ್ರಹವಾಗುವ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಬಿಸಾಡದೆ, ವೈಜ್ಞಾನಿಕವಾಗಿ ವಿಲೇವಾರಿ ವಾಡಲಾಗುತ್ತಿದೆ. ಪ್ರತಿ ವಾರ ಸಂಗ್ರಹವಾದ ತ್ಯಾಜ್ಯವನ್ನು ಸ್ಥಳೀಯ ಗ್ರಾಮ ಪಂಚಾಯಿತಿಯ ತ್ಯಾಜ್ಯ ಸಂಗ್ರಹ ವಾಹನಕ್ಕೆ ಹಸ್ತಾಂತರಿಸುವ ಮೂಲಕ, ಪಂಚಾಯಿತಿಯೊಂದಿಗೆ ಕೈಜೋಡಿಸಿ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಗೆ ಬಲ ತುಂಬುತ್ತಿದೆ.
ಎಳವೆಯಲ್ಲೇ ಸ್ವಚ್ಛತೆ ಅರಿವು
ಈ ವಿಶೇಷ ಪರಿಕಲ್ಪನೆಯ ರೂವಾರಿ ಶಿಕ್ಷಕ ನಂದಳಿಕೆ ಚಂದ್ರಶೇಖರ್ ಭಟ್. ಸ್ವಚ್ಛತೆ ಬಗ್ಗೆ ಮಕ್ಕಳಲ್ಲಿ ಎಳವೆಯಲ್ಲೇ ಅರಿವು ಮೂಡಿಸಬೇಕು ಎನ್ನುವ ನಿಟ್ಟಿನಲ್ಲಿ ಕಲಿಕೆ ಜತೆಗೆ ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ ಎಂಬ ಸಂದೇಶ ಸಾರುವ ಮೂಲಕ ಈ ವಿಶೇಷ ಅಭಿಯಾನಕ್ಕೆ ಕೈ ಹಾಕಿದ್ದಾರೆ. ವಿದ್ಯಾರ್ಥಿಗಳು ಅತ್ಯಂತ ಖುಷಿಯಿಂದ ಮನೆಯಲ್ಲಿ ತ್ಯಾಜ್ಯ ಸಂಗ್ರಹಿಸಿ ಶಾಲೆಗೆ ನೀಡುತ್ತಾರೆ. ಈ ವಿಶೇಷ ಪರಿಕಲ್ಪನೆಗೆ ಪಾಲಕರು ಹಾಗೂ ಗ್ರಾಮಸ್ಥರು ಸಾಥ್ ನೀಡಿದ್ದಾರೆ.
ಶಾಲೆಯ ಈ ಅಭಿಯಾನದಿಂದ ಮಕ್ಕಳು ಪರಿಸರದ ಮಹತ್ವ ಅರಿತುಕೊಳ್ಳುತ್ತಿದ್ದಾರೆ. ಪ್ಲಾಸ್ಟಿಕ್‌ನಿಂದಾಗುವ ಅಪಾಯಗಳ ಬಗ್ಗೆ ಮಕ್ಕಳು ಮನೆಯಲ್ಲಿ ಪಾಲಕರಿಗೂ ತಿಳಿ ಹೇಳುತ್ತಿರುವುದು ನಮ್ಮ ಯೋಜನೆಯ ಯಶಸ್ಸು.
— ಚಂದ್ರಶೇಖರ್ ಭಟ್, ಮುಖ್ಯಶಿಕ್ಷಕ, ಕೈರಬೆಟ್ಟು ಸರ್ಕಾರಿ ಪ್ರಾಥಮಿಕ ಶಾಲೆ