ಕಬ್ಬಿಣದ ರಾಡ್‌ನೊಂದಿಗೆ ಬಸ್ಸಿಗೆ ನುಗ್ಗುವ ದುಷ್ಕರ್ಮಿಯ ಕೃತ್ಯದ ಸಿಸಿ ಕ್ಯಾಮಾರದ ದೃಶ್ಯಾವಳಿ.
ಉಪ್ಪಿನಂಗಡಿ: ಖಾಸಗಿ ಬಸ್ಸುಗಳ ಟೈಮಿಂಗ್ಸ್ ವಿಚಾರದಲ್ಲಿ ವಾಗ್ವಾದ ಉಂಟಾಗಿ ಹಾಡುಹಗಲೇ ಮಾರಕಾಯುಧದೊಂದಿಗೆ ಬಸ್ಸಿನೊಳಗೆ ನುಗ್ಗಿ ಪ್ರಯಾಣಿಕರ ಸಮ್ಮುಖದಲ್ಲೇ ಮಾರಾಮಾರಿಯಲ್ಲಿ ತೊಡಗಿದ್ದ ಇಬ್ಬರು ಖಾಸಗಿ ಬಸ್ ನಿರ್ವಾಹಕರ ಮೇಲೆ ಉಪ್ಪಿನಂಗಡಿ ಪೊಲೀಸರು ಸುಮೋಟೊ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಉಪ್ಪಿನಂಗಡಿಯಿಂದ ಮಂಗಳೂರಿಗೆ ಸಂಚರಿಸುವ ಅರಫಾ ಮತ್ತು ಲಕ್ಷ್ಮೀ ಬಸ್ಸುಗಳ ನಿರ್ವಾಹಕರ ನಡುವೆ ಸಮಯದ ವಿಚಾರದಲ್ಲಿ ಜಗಳ ನಡೆದು, ಅರಫಾ ಬಸ್‌ನ ನಿರ್ವಾಹಕ ನೌಶಾದ್ ಎಂಬಾತ ಕಬ್ಬಿಣದ ರಾಡ್ ನೊಂದಿಗೆ ಲಕ್ಷ್ಮೀ ಬಸ್‌ನೊಳಗೆ ನುಗ್ಗಿ ಪ್ರಯಾಣಿಕರ ಎದುರೇ ಅದರ ನಿರ್ವಾಹಕ ಖಲಂದರ್ ಯಾನೆ ಶಾಹೀದ್ ಮೇಲೆ ಹಲ್ಲೆ ನಡೆಸಿದ್ದಾನೆ.
ಈ ವೇಳೆ ಶಾಹೀದ್ ಕೂಡಾ ನೌಶಾದ್ ಮೇಲೆ ಹಲ್ಲೆ ಮಾಡಿದ ಪರಿಣಾಮ ಇಬ್ಬರಿಗೂ ಗಾಯಗಳಾಗಿವೆ. ಇಬ್ಬರೂ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡರೂ ಪೊಲೀಸರಿಗೆ ದೂರು ನೀಡಲಿಲ್ಲ. ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.