ಬಿ.ಸಿ.ರೋಡ್‌ನಲ್ಲಿ ಸ್ವಚ್ಛತೆ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಪೌರಕಾರ್ಮಿಕ ಸೇಸಪ್ಪ. 
ಉಡುಪಿ

ಪೌರ ಕಾರ್ಮಿಕನ ಕಾರು ಕ್ರೇಜ್

ಇಂದಿರಾ ಎನ್ ಕೆ

ವಿಜಯವಾಣಿ ಸುದ್ದಿಜಾಲ ಬಂಟ್ವಾಳ

ರಸ್ತೆ ಬದಿ ಕಸ ಗುಡಿಸಿ, ನಗರದ ತ್ಯಾಜ್ಯ ಸ್ವಚ್ಛಗೊಳಿಸುವ ಪೌರ ಕಾರ್ಮಿಕರೊಬ್ಬರು ಕರ್ತವ್ಯಕ್ಕೆ ಐಷಾರಾಮಿ ಫಾರ್ಚೂನರ್ ಕಾರಿನಲ್ಲಿ ಬರುವ ಮೂಲಕ ಸಾರ್ವಜನಿಕರ ಗಮನ ಸೆಳೆದಿದ್ದಾರೆ.
ಬಂಟ್ವಾಳ ಪುರಸಭೆಯಲ್ಲಿ ಕಳೆದ 30 ವರ್ಷಗಳಿಂದ ಪೌರಕಾರ್ಮಿಕರಾಗಿ ಕಾರ್ಯನಿರ್ವಹಿಸುತ್ತಿರುವ ಸೇಸಪ್ಪ ಐಷಾರಾಮಿ ಫಾರ್ಚೂನರ್ ಕಾರಿನ ಒಡೆಯ. ಸ್ವಚ್ಛತೆಯ ಕಾರ್ಯನಿರ್ವಹಿಸುವ ಪೌರಕಾರ್ಮಿಕರೂ ಸಮಾಜದಲ್ಲಿ ಗೌರವಯುತವಾದ ಬದುಕು ನಡೆಸಲು ಸಾಧ್ಯ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಎಷ್ಟು ದುಡಿದರೂ ಕುಟುಂಬ ನಿರ್ವಹಣೆಗೆ ಸಂಬಳ ಸಾಕಾಗುತ್ತಿಲ್ಲ ಎಂದು ಕೊರಗುತ್ತಿರುವವರಿಗೆ ಪುರಸಭೆಯ ಪೌರಕಾರ್ಮಿಕ ಸೇಸಪ್ಪರ ಜೀವನಗಾಥೆ ಮಾದರಿಯಾದುದು.
ಬಂಟ್ವಾಳ ಪುರಸಭೆಯ ಪೌರ ಕಾರ್ಮಿಕರಾಗಿರುವ ಸೇಸಪ್ಪ ಪ್ರತಿನಿತ್ಯ ಕೆಲಸದ ಸ್ಥಳಕ್ಕೆ ತಮ್ಮದೇ ಫಾರ್ಚೂನರ್ ಕಾರಿನಲ್ಲಿ ಬರುತ್ತಾರೆ. ಒಂದು ಕಡೆ ಅದನ್ನು ನಿಲ್ಲಿಸಿ ಬೆಳಗ್ಗೆ ಪೊರಕೆ ಹಿಡಿದು ತಮ್ಮ ಕೆಲಸ ಆರಂಭಿಸುತ್ತಾರೆ. ಕೆಲಸ ಮುಗಿದ ಬಳಿಕ ಅದೇ ಕಾರಿನಲ್ಲಿ ವಾಪಸಾಗುತ್ತಾರೆ.
ಕಾರು ಖರೀದಿಸುವ ಕ್ರೇಜ್
ಸೇಸಪ್ಪ ಅವರಿಗೆ ಕಾರುಗಳ ಮೇಲೆ ಭಾರಿ ಮೋಹ. ಕುಡಿತ ಬಿಟ್ಟು ಜೀವನದ ಹೊಸ ಅಧ್ಯಾಯ ಆರಂಭಿಸುವ ಸಮಯದಲ್ಲಿ ಕಾರುಗಳನ್ನು ಖರೀದಿಸುವ ಕ್ರೇಜ್ ಶುರುವಾಗಿ ಸೇಸಪ್ಪ ಒಂದೊಂದು ಕಾರಿನಿಂದ ಬಡ್ತಿ ಪಡೆದಿದ್ದಾರೆ. ಆರಂಭದಲ್ಲಿ ಆಲ್ಟೋ, ಸ್ಕಾರ್ಪಿಯೋ ಕಾರು ಅವರಲ್ಲಿತ್ತು. ಅದನ್ನು ಮಾರಿ, ಸ್ವಲ್ಪ ಸಾಲ ಪಡೆದು ಈಗ ಫಾರ್ಚೂನರ್ ಕಾರು ಖರೀದಿಸುವ ಮಟ್ಟಕ್ಕೆ ಬೆಳೆದಿದ್ದಾರೆ. ಸ್ವಂತ ಮನೆಯೂ ಅವರಿಗಿದೆ.

ದುಡಿಮೆಯೇ ದೇವರು

ಪ್ರತಿದಿನ ಬೆಳಗ್ಗೆ 5 ಗಂಟೆಗೆ ಸ್ವಚ್ಛತೆಯ ಕಾರ್ಯ ಆರಂಭಗೊಳ್ಳುತ್ತದೆ. ಮಧ್ಯಾಹ್ನ 12 ಗಂಟೆಯವರೆಗೆ ಪೌರ ಕಾರ್ಮಿಕರಾಗಿ ಸೇವೆ ಸಲ್ಲಿಸುತ್ತಾರೆ. ರಸ್ತೆ ಗುಡಿಸುವುದರಿಂದ ಹಿಡಿದು ತಮಗೆ ವಹಿಸಿದ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸುತ್ತಾರೆ. ಅಗತ್ಯವಿದ್ದಾಗ ತ್ಯಾಜ್ಯ ವಿಲೇವಾರಿ ವಾಹನದ ಚಾಲಕರ ಜವಾಬ್ದಾರಿಯನ್ನೂ ನಿರ್ವಹಿಸಿದ್ದಾರೆ.

ಕುಡಿತ ಬಿಡಿಸಿದ ಎಸ್‌ಐ ಬೆಳ್ಳಿಯಪ್ಪ

30 ವರ್ಷಗಳ ಹಿಂದೆ ದಿನಗೂಲಿ ಕಾರ್ಮಿಕನಾಗಿ ಕೆಲಸ ಆರಂಭಿಸಿದ ಸೇಸಪ್ಪ ಬಳಿಕ ಕಾಯಂ ನೌಕರರಾದರು. ವಿದ್ಯಾಭ್ಯಾಸ 3ನೇ ತರಗತಿಯಾದರೂ ಜೀವನದ ಅನುಭವ ಪಾಠ ಅವರನ್ನು ಎತ್ತರಕ್ಕೆ ಏರಿಸಿದೆ. 2005ರ ಬಳಿಕ ಬದುಕನ್ನು ಬದಲಿಸಿಕೊಳ್ಳುವ ದೃಢ ನಿರ್ಧಾರ ಕೈಗೊಂಡರು. ಕುಡಿತದ ದಾಸರಾಗಿದ್ದ ಅವರು ಆ ಕಾಲದಲ್ಲಿ ಬಂಟ್ವಾಳದಲ್ಲಿ ಎಸ್‌ಐ ಆಗಿದ್ದ ಬೆಳ್ಳಿಯಪ್ಪ ಅವರ ಮಾತಿನಿಂದ ಪ್ರೇರಣೆ ಪಡೆದು ಕುಡಿತವನ್ನು ಸಂಪೂರ್ಣವಾಗಿ ತ್ಯಜಿಸಿದರು. ಕಾಯವೇ ಕೈಲಾಸವೆಂದು ತಿಳಿದು ಕುಡಿತ ಬಿಟ್ಟು ದುಡಿಮೆಯ ಮೂಲಕ ಹೊಸ ಬದುಕು ಕಟ್ಟಿಕೊಂಡರು. ಅಲ್ಲಿಂದ ಸೇಸಪ್ಪ ಅವರ ಬದುಕಿನ ಚಿತ್ರಣವೇ ಬದಲಾಯಿತು.

ಕೈಹಿಡಿದ ಹೈನುಗಾರಿಕೆ

ಸೇಸಪ್ಪ ಅವರು ಪೌರ ಕಾರ್ಮಿಕ ಕೆಲಸ ಮಗಿಸಿ, ಮಧ್ಯಾಹ್ನದ ಬಳಿಕ ಹೈನುಗಾರಿಕೆ ಹಾಗೂ ಕೂಲಿ ಕೆಲಸಕ್ಕೂ ತೆರಳುತ್ತಾರೆ. ಹೈನುಗಾರಿಕೆಯಿಂದ ಮಾಸಿಕ 39 ಸಾವಿರ ರೂ.ನಷ್ಟು ಮೊತ್ತ ಅವರ ಕೈಗೆ ಸಿಗುತ್ತದೆ. ಪೌರಕಾರ್ಮಿಕ ವೃತ್ತಿಯಿಂದ ಸಿಗುವ ಸಂಬಳ ಹಾಗೂ ಹೈನುಗಾರಿಕೆಯ ವರಮಾನ ಮತ್ತು ಕೂಲಿ ಕೆಲಸದಿಂದ ಬಂದ ಆದಾಯದಿಂದಾಗಿ ಈ ಹಂತಕ್ಕೆ ಬೆಳೆದಿದ್ದಾರೆ. ಒಂದು ಕಾಲದಲ್ಲಿ ತಂದೆಯ ಅಂತ್ಯಸಂಸ್ಕಾರಕ್ಕೂ ಹಣವಿಲ್ಲದೆ ಪರದಾಡಿದ ನೋವು ಅವರಲ್ಲಿದೆ. ಪರವ ಸಮಾಜಕ್ಕೆ ಸೇರಿದ ಸೇಸಪ್ಪ ಅವರ ತಂದೆ ದೈವದ ನರ್ತಕರಾಗಿದ್ದರು. ಈಗ ಅವರ ಮಗನೂ ಅದೇ ಕಾರ್ಯದಲ್ಲಿ ಮುಂದುವರಿಯುತ್ತಿದ್ದಾರೆ.

ಬದುಕಿನಲ್ಲಿ ಅನೇಕ ಕಷ್ಟಗಳನ್ನು ಎದುರಿಸಿದ್ದೇನೆ. ದೈವದ ಸೇವೆಯಿಂದಾಗಿ ಬದುಕು ಉತ್ತಮವಾಗಿದೆ. ನನ್ನ ವೃತ್ತಿಯನ್ನು ಶ್ರದ್ಧೆಯಿಂದ ನಿರ್ವಹಿಸುತ್ತೇನೆ. ಜತೆಗೆ ನಾನು ಎಲ್ಲರ ಹಾಗೆ ಗೌರವಯುತವಾದ ಬದುಕು ಕಾಣುವ ಹಂಬಲದೊಂದಿಗೆ ಬೆಳೆಯುತ್ತಿದ್ದೇನೆ. ನನ್ನ ಮಕ್ಕಳನ್ನು ಬೆಳೆಸಿದ್ದೇನೆ.

— ಸೇಸಪ್ಪ, ಪೌರಕಾರ್ಮಿಕ