ಮಣಿಪಾಲದ ಟೈಗರ್​ ಸರ್ಕಲ್​ನಿಂದ ನೂರಾರು ಕಾರ್ಮಿಕರು ಮೆರವಣಿಗೆ ಮೂಲಕ ತೆರಳಿ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.  
ಉಡುಪಿ

ಕನಿಷ್ಠ ವೇತನ 36 ಸಾವಿರ ರೂ. ಏರಿಕೆಗೆ ಆಗ್ರಹ

ಉಡುಪಿ: ರಾಜ್ಯ ಸರ್ಕಾರ ಪ್ರಕಟಿಸಿರುವ ಕನಿಷ್ಠ ವೇತನದಿಂದ ಒಂದು ಕೋಟಿಗಿಂತ ಹೆಚ್ಚಿನ ಕಾರ್ಮಿಕರಿಗೆ ಪ್ರಯೋಜನವಾಗಲಿದೆ. ಆದರೆ ಕನಿಷ್ಠ ವೇತನವು ಸುಪ್ರೀಂ ಕೋರ್ಟ್​ ನಿಗದಿಪಡಿಸಿದ ಮಾನದಂಡಗಳಿಗೆ ಪೂರಕವಾಗಿಲ್ಲ. ಇವತ್ತಿನ ಬೆಲೆಗಳು ಮತ್ತು ಜೀವನ ವೆಚ್ಚಕ್ಕೆ ಅನುಗುಣವಾಗಿ ಕನಿಷ್ಠ ವೇತನ 36 ಸಾವಿರ ರೂ. ನಿಗದಿ ಮಾಡಬೇಕೆಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಸುರೇಶ್​ ಕಲ್ಲಾಗಾರ ಹೇಳಿದರು.
ಸೆಂಟರ್​ ಆಫ್​ ಇಂಡಿಯನ್​ ಟ್ರೇಡ್​ ಯೂನಿಯನ್​ (ಸಿಐಟಿಯು) ಉಡುಪಿ ಜಿಲ್ಲಾ ಸಮಿತಿ ನೇತ್ರತ್ವದಲ್ಲಿ ಕಾರ್ಮಿಕರ ಮೂಲಭೂತ ಹಕ್ಕುಗಳ ರಕ್ಷಣೆ ಹಾಗೂ ಹಲವು ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಅಧಿಸೂಚನೆಯಲ್ಲಿ ಗಾಮೆಂರ್ಟ್ಸ್​, ಪ್ಲಾಂಟೇಷನ್​, ಬೀಡಿ, ಅಗರಬತ್ತಿ, ಕೈಮಗ್ಗ ಸೇರಿ 19 ವಿಭಾಗದ ಉದ್ದಿಮೆಗಳನ್ನು ಹೊರಗಿಟ್ಟಿರುವ ರಾಜ್ಯ ಸರ್ಕಾರದ ಕ್ರಮದಿಂದ ಬಹುಸಂಖ್ಯಾತ ಮಹಿಳಾ ಕಾರ್ಮಿಕರು ಕನಿಷ್ಠ ವೇತನ ಹೆಚ್ಚಳದಿಂದ ವಂಚಿತರಾಗಲಿದ್ದಾರೆ. ಪ್ರಸ್ತುತ ಮೇ 22 ರಂದು ಜಾರಿಗೆ ತಂದಿರುವ ಕನಿಷ್ಠ ವೇತನವನ್ನೇ ಎಲ್ಲಾ ಉದ್ದಿಮೆಗಳಿಗೂ ವಿಸ್ತರಿಸಬೇಕು ಎಂದರು.
ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ಹಂಗಾಮಿ, ಗುತ್ತಿಗೆ, ನಿಯಮಿತ ಅವಧಿ, ಟೆನಿ, ಇನ್ನಿತರ ಸ್ವರೂಪದ ಕಾಯಂಯೇತರ ಕಾರ್ಮಿಕರು ಕಡಿಮೆ ವೇತನಕ್ಕೆ, ಯಾವುದೇ ಕಾನೂನುಬದ್ಧ ಸವಲತ್ತುಗಳಿಲ್ಲದೆ ಅಭದ್ರತೆಯಲ್ಲಿ ದುಡಿಮೆ ಮಾಡುತ್ತಿದ್ದಾರೆ. ಈ ಹಿಂದೆ ಕಾರ್ಮಿಕ ಇಲಾಖೆಯು ರಾಜ್ಯದಲ್ಲಿ ಗುತ್ತಿಗೆ ಪದ್ದತಿ ನಿಯಂತ್ರಿಸಿ ಕಾಯಂಯೇತರರ ಖಾಯಂಗೆ ಶಾಸನ ರೂಪಿಸಲು ಕರಡು ಸಿದ್ದಪಡಿಸಿತ್ತು. ಈ ಬಗ್ಗೆ ಕಾನೂನು ರೂಪಿಸಬೇಕು ಎಂದು ಹೇಳಿದರು.

ಉಡುಪಿ ಜಿಲ್ಲಾ ಅಧ್ಯಕ್ಷ ರಾದ ಶಶಿಧರ್​ ಗೊಲ್ಲ, ಕಾರ್ಯದರ್ಶಿ ಚಂದ್ರಶೇಖರ್​. ವಿ ಕೋಶಾಧಿಕಾರಿ ಕವಿರಾಜ್​. ಎಸ್​.ಕಾಂಚನ್​, ಹಂಚು ಕಾರ್ಮಿಕ ಸಂಘದ ಜಿಲ್ಲಾ ಕಾರ್ಯದರ್ಶಿ ಎಚ್​.ನರಸಿಂಹ, ಜಿ.ಡಿ.ಪಂಜು, ಅಣ್ಣಪ್ಪ, ಕಟ್ಟಡ ಸಂಘದ ಉಡುಪಿ ಜಿಲ್ಲಾ ಮುಖಂಡರಾದ ರಾಜುಪಡುಕೊಣೆ, ಸುಭಾಸ್​ ಚಂದ್ರ ನಾಯಕ್​, ಗಣೇಶ್​ ತೊಂಡೆಮಕ್ಕಿ, ಸಂತೋಷ್​ ಹೆಮ್ಮಾಡಿ, ಚಿಕ್ಕಯ್ಯಮೊಗವೀರ, ನಾಗ ರತ್ನ ಪಡುವರಿ, ಅಂಗನವಾಡಿ ಮುಖಂಡರಾದ ಭಾರತಿ, ಯಶೋದಾ, ಜಿಲ್ಲಾ ಬೀಡಿ ಫೆಡರೇಶನ್​ ಮುಖಂಡರಾದ ಮಹಾಬಲ ಹೊಡೆಯರ ಹೋಬಳಿ, ಉಮೇಶ್​ ಕುಂದರ್​, ಸುನೀತಾ ಶೆಟ್ಟಿ, ಸುಮತಿ, ಬಲ್ಕೀಸ್​, ನಳಿನಿ, ಸಿಐಟಿಯು ಮುಖಂಡರಾದ ಸರೋಜ, ಮುರಳಿ, ನಾಗೇಶ್​, ರಾಮ ಕಾರ್ಕಡ, ಸೈಯಾದ್​, ಮೋಹನ್​ಚಂದ್ರ ನಿಟ್ಟೆ, ಶೀಲಾವತಿ, ಶಾರದ, ಸಾರಿಕಾ ನಾಗರತ್ನ ನಾಡ, ಶೋಭಾ ಉಪಸ್ಥಿತರಿದ್ದರು.
ಸಭೆಗೂ ಮುನ್ನ ಮಣಿಪಾಲದ ಟೈಗರ್​ ಸರ್ಕಲ್​ನಿಂದ ನೂರಾರು ಕಾರ್ಮಿಕರು ಮೆರವಣಿಗೆ ಮೂಲಕ ತೆರಳಿ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.