ಬೈಂದೂರು- ಕೊಲ್ಲೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕಳೆದೊಂದು ತಿಂಗಳಿಂದ ನಡೆಯುತ್ತಿರುವುದು.
ವಿಜಯವಾಣಿ ಸುದ್ದಿಜಾಲ ಬೈಂದೂರು
ದಕ್ಷಿಣ ಭಾರತದ ಪ್ರಸಿದ್ಧ ತೀರ್ಥಕ್ಷೇತ್ರ ಈ ಬಾರಿ ಹತ್ತು ಹಲವು ಕಾರಣಗಳಿಂದ ಸುದ್ದಿಯಲ್ಲಿದೆ. ರಾಷ್ಟ್ರಮಟ್ಟದ ಭಕ್ತರ ವಿಶೇಷ ಆಗಮನ ಒಂದೆಡೆಯಾದರೆ ಕೊಲ್ಲೂರು ಸಂಪರ್ಕ ಬೆಳೆಸುವ ಪ್ರಮುಖ ಹೆದ್ದಾರಿ ಸಣ್ಣ ಮಳೆಯಾದರೂ ಕೊಚ್ಚಿ ಹೋಗುತ್ತಿರುವ ಸುದ್ದಿ ಇನ್ನೊಂದೆಡೆ. ಈ ರಸ್ತೆಯಲ್ಲಿ ವಾಹನ ಚಲಾಯಿಸುವುದೇ ಸರ್ಕಸ್ ಎಂಬಂತಾಗಿದೆ.
ಬೈಂದೂರು- ಕೊಲ್ಲೂರು ರಸ್ತೆಯಲ್ಲಿ ಪ್ರತಿದಿನ ಸಾವಿರಾರು ವಾಹನಗಳು ಸಂಚರಿಸುತ್ತವೆ. ಬೇಸಿಗೆಯಲ್ಲಿ ಕಾಮಗಾರಿ ಆರಂಭವಾದರೂ ಸಹ ಪಶ್ಚಿಮಟ್ಟದ ತಪ್ಪಲಿನ ಮಳೆಯ ಅಬ್ಬರ ಅಧಿಕವಾಗಿರುವ ಮುಂದಾಲೋಚನೆ ಇಲ್ಲದ ಪರಿಣಾಮ ಈ ಸಮಸ್ಯೆ ಉದ್ಭವಿಸಿದೆ. ಮಳೆಗಾಲದಲ್ಲಿ ಆಗುವ ಸಮಸ್ಯೆ ಕುರಿತು ‘ವಿಜಯವಾಣಿ’ ಸರಣಿ ವರದಿ ಮೂಲಕ ಬೆಳಕು ಚೆಲ್ಲಿದರೂ ಇಲಾಖೆ ಗಂಭೀರವಾಗಿ ಪರಿಗಣಿಸಿಲ್ಲ. ಹೀಗಾಗಿ ಈ ರಸ್ತೆ ದಿನಕ್ಕೊಂದು ಸಮಸ್ಯೆ ಹುಟ್ಟುಹಾಕುತ್ತಿದೆ.
ರಸ್ತೆ ಅವ್ಯವಸ್ಥೆಯಿಂದಾಗಿ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾದ ಬಳಿಕ ಒಂದಿಷ್ಟು ಕಡೆ ತರಾತುರಿಯಲ್ಲಿ ಕೆಲಸ ನಡೆಯುತ್ತಿದೆ. ಆದರೆ ನದಿಯ ಸಮೀಪ ಮತ್ತು ಹೆದ್ದಾರಿಯಲ್ಲಿ ಬೃಹತ್ ಯಂತ್ರಗಳ ಮೂಲಕ ಕಾಮಗಾರಿ ನಡೆಸುವಾಗ ಯಾವುದೇ ಸುರಕ್ಷತಾ ಕ್ರಮ ಅನುಸರಿಸುತ್ತಿಲ್ಲ. ಇದರಿಂದಾಗಿ ಹೆದ್ದಾರಿಯಲ್ಲಿ ಸಂಚರಿಸುವ ಪ್ರವಾಸಿಗರಿಗೆ ಯಾವುದೇ ಎಚ್ಚರಿಕೆ ಫಲಕಗಳಿಲ್ಲದೆ ಅಪಾಯ ಎದುರಾಗುವ ಸಾಧ್ಯತೆಗಳು ದಟ್ಟವಾಗಿವೆ.
ನಿಯಮ ಗಾಳಿಗೆ ತೂರಿದ ಕಂಪನಿ
ಹೆದ್ದಾರಿ ಕಾಮಗಾರಿ ನಡೆಸುವಾಗ ಹಲವಾರು ಸುರಕ್ಷಾ ನಿಯಮ ಅನುಸರಿಸಬೇಕಾದ ಜವಾಬ್ದಾರಿಗಳಿದ್ದರೂ ಕಾಮಗಾರಿ ಕಂಪನಿ ವಾತ್ರ ನಿಯಮಗಳನ್ನು ಗಾಳಿಗೆ ತೂರಿದೆ. ಈ ಬಗ್ಗೆ ಅಧಿಕಾರಿಗಳು ಕೂಡ ಗಮನಹರಿಸುತ್ತಿಲ್ಲ ಎಂಬ ಗಂಭೀರ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ. ಹೆದ್ದಾರಿಯಲ್ಲಿ ಸಂಚರಿಸುವ ಪ್ರತಿ ಪ್ರಯಾಣಿಕರ ಜೀವವೂ ಅಮೂಲ್ಯವಾದ ಕಾರಣ ಇಲಾಖೆ ಇವುಗಳನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ವಾತ್ರವಲ್ಲದೆ ಕೊಲ್ಲೂರು- ರಾಣೆಬೆನ್ನೂರು ಹೆದ್ದಾರಿ ಕಾಮಗಾರಿ ಸಮರ್ಪಕವಾಗಿ ಪೂರ್ಣಗೊಳ್ಳಬೇಕಿದೆ.
ಭಕ್ತರಿಗೆ ಸಮಸ್ಯೆಯಾಗುವ ಸಾಧ್ಯತೆ
ಕೊಲ್ಲೂರು- ರಾಣೆಬೆನ್ನೂರು ಕರಾವಳಿ ಮತ್ತು ಮಲೆನಾಡು ಸಂಪರ್ಕ ಬೆಳೆಸುವ ಪ್ರಮುಖ ಹೆದ್ದಾರಿಯಾಗಿದೆ. ಈಗಿರುವ ಪರಿಸ್ಥಿತಿಯಲ್ಲಿ ಮಳೆಗಾಲದಲ್ಲಿ ಕೊಲ್ಲೂರು ರಸ್ತೆ ಸಂಪೂರ್ಣ ಬಂದ್ ಆಗುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಸ್ಥಳೀಯರಿಗೆ ಮತ್ತು ಸಾರ್ವಜನಿಕರಿಗೆ ತೊಂದರೆಯಾಗುವ ಜತೆಗೆ ಕೊಲ್ಲೂರು ಸಂಪರ್ಕಿಸಬೇಕಾದರೆ ಸುತ್ತು ಬಳಸಿ ಬರಬೇಕಾಗುತ್ತದೆ. ಹೀಗಾಗಿ ಪವಿತ್ರ ತೀರ್ಥಕ್ಷೇತ್ರಕ್ಕೆ ಆಗಮಿಸುವ ಭಕ್ತರಿಗೆ ಸಮಸ್ಯೆಯಾಗುವ ಸಾಧ್ಯತೆ ಇರುವ ಕಾರಣ ಜಿಲ್ಲಾಧಿಕಾರಿ ಈ ಬಗ್ಗೆ ಗಮನಹರಿಸಬೇಕು ಎನ್ನುವುದು ಸಾರ್ವಜನಿಕರ ಆಗ್ರಹ.
ಕಳೆದೊಂದು ತಿಂಗಳಿಂದ ಬೈಂದೂರು- ಕೊಲ್ಲೂರು ರಾಷ್ಟ್ರೀಯ ಹೆದ್ದಾರಿ ಪ್ರಯಾಣಿಕರ ಪಾಲಿಗೆ ಮೃತ್ಯುಕೂಪದಂತಾಗಿದೆ. ದ್ವಿಪಥ ರಸ್ತೆ ನಿರ್ವಾಣಕ್ಕಾಗಿ ನಡೆಸಿದ ಅರೆಬರೆ ಕಾಮಗಾರಿಯಿಂದಾಗಿ ಕಿರು ಸೇತುವೆಗಳು ಕೊಚ್ಚಿಹೋಗಿವೆ. ಹೀಗಾಗಿ ಈ ಬಾರಿಯ ಮಳೆಗಾಲ ಕಳೆಯುವುದು ಕಷ್ಟ ಎನ್ನುವಂತಾಗಿದೆ..
— ಸಿದ್ದೇಶ್ ಶ್ಯಾನುಭಾಗ್, ಉದ್ಯಮಿ, ಯಳಜಿತ್