ಮರವಂತೆ ರಾಷ್ಟ್ರೀಯ ಹೆದ್ದಾರಿ ಸಂಪರ್ಕಿಸುವ ಪಡುಕೋಣೆ ಸೇತುವೆಯ ಕೂಡು ರಸ್ತೆ.
ವಿಜಯವಾಣಿ ಸುದ್ದಿಜಾಲ ಕುಂದಾಪುರ
ಕುಂದಾಪುರ- ಗೋವಾ ಚತುಷ್ಪಥ ಹೆದ್ದಾರಿಗೆ ತಾಗಿಕೊಂಡಿರುವ ಮರವಂತೆ ವರಾಹ ಸ್ವಾಮಿ ದೇವಳದ ಹತ್ತಿರದಲ್ಲಿರುವ ಮರವಂತೆ- ಪಡುಕೋಣೆ ಸೇತುವೆಯಲ್ಲಿ ವಾಹನ ಸವಾರರು ಸರ್ಕಸ್ ಮಾಡುವಂತಾಗಿದೆ.
ಪಡುಕೋಣೆ ಜನರ ಅನುಕೂಲಕ್ಕೆಂದು 2017ರಲ್ಲಿ ಮರವಂತೆ ರಾಷ್ಟ್ರೀಯ ಹೆದ್ದಾರಿ ಸಂಪರ್ಕಿಸಲು ಸಂಪರ್ಕ ಸೇತುವೆ ನಿರ್ಮಾಣಗೊಂಡಿದೆ. ಆದರೆ ಇಲ್ಲಿ ಸೇತುವೆ ಮೇಲೇರುವುದು ಮತ್ತು ಸೇತುವೆಯಿಂದ ಕೆಳಗಿಳಿದು ರಾಷ್ಟ್ರೀಯ ಹೆದ್ದಾರಿ ತಲುಪುವುದು ಸಾಹಸ ಎಂಬಂತಾಗಿದೆ.
ದಶಕ ಸಂದರೂ ಬಗೆಹರಿದಿಲ್ಲ ಸಮಸ್ಯೆ
ಮರವಂತೆ- ಪಡುಕೋಣೆ ರಸ್ತೆಯ ವರಾಹ ದೇವಳ ಕ್ರಾಸ್ ಅಪಾಯಕಾರಿ ಎನಿಸಿದೆ. ಸೇತುವೆಯನ್ನು ನೇರ ಹೆದ್ದಾರಿಗೆ ಜೋಡಿಸುವ ಅವಕಾಶವಿದ್ದರೂ ಅದನ್ನು ಈವರೆಗೂ ನಿರ್ವಹಿಸದ ಕಾರಣ ಸೇತುವೆಯಿಂದ ಪ್ರಪಾತಕ್ಕೆ ಇಳಿದು ಮೇಲೇರಿ ರಾಷ್ಟ್ರೀಯ ಹೆದ್ದಾರಿ ಸಂಧಿಸಬೇಕು. ಮಣ್ಣಿನಿಂದ ಕೂಡಿರುವ ಈ ಹಾದಿ ಕೆಸರು ಗದ್ದೆಯಂತಾಗಿದ್ದು, ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ.
ಕಾಲ್ನಡಿಗೆಯಲ್ಲಿ ಬರುವವರಿಗೆ ಕೆಸರಿನ ಸಿಂಚನ ಆಗುತ್ತಿದೆ. ತಗ್ಗಿನಿಂದ ಇಳಿದು ಬರುವ ವಾಹನಗಳ ಮೇಲೇರಿ ಹೆದ್ದಾರಿಗೆ ಬರುವ ದಾವಂತದಲ್ಲಿ ಹೆದ್ದಾರಿಯಲ್ಲಿ ಸಾಗುವ ವಾಹನಗಳಿಗೆ ಅಡ್ಡ ಸಿಲುಕುವ ಘಟನೆಗಳು ನಡೆಯುತ್ತಿವೆ. ದೇವಳಕ್ಕೆ ಆಗಮಿಸುವ ಭಕ್ತರು, ಪ್ರವಾಸಿಗರು ಅಲ್ಲದೆ ಪಡುಕೋಣೆ ಭಾಗದಿಂದ ಬರುವ ನಾಗರಿಕರು ತೊಂದರೆ ಎದುರಿಸುತ್ತಿದ್ದಾರೆ.
ವರಾಹ ದೇವಳದ ಪಕ್ಕದಲ್ಲೇ ಸೇತುವೆಯಿದೆ. ಸೇತುವೆಯಿಂದ ಕೆಳಗಿಳಿಯುವ ಹಾದಿ ಕಮರಿನಿಂದ ಕೂಡಿದೆ. ಕಮರಿಗೆ ಇಳಿಸಿ ಹೆದ್ದಾರಿ ತಲುಪಿಸಲು ಎದೆ ಗಟ್ಟಿಬೇಕು. ದೇವಳಕ್ಕೆ ಬರುವ ಭಕ್ತರು, ಕಡಲ ಸೌಂದರ್ಯ ವೀಕ್ಷಿಸಲು ಬರುವ ಪ್ರವಾಸಿಗರು, ಪಡುಕೋಣೆ ಭಾಗಕ್ಕೆ ತೆರಳುವ ಸಹಸ್ರಾರು ನಾಗರಿಕರು ತೊಂದರೆ ಅನುಭವಿಸುತ್ತಿದ್ದಾರೆ. ಶಾಸಕರು, ಸಂಸದರು ಮತ್ತು ಸ್ಥಳೀಯ ಜನಪ್ರತಿನಿಧಿಗಳು ಗಮನಹರಿಸಿ ಕೂಡು ರಸ್ತೆ ಅಭಿವೃದ್ಧಿಗೆ ಕ್ರಮ ವಹಿಸಬೇಕು.
— ಗೋಪಾಲಕೃಷ್ಣ ನಾಡ ಸಾಮಾಜಿಕ ಕಾರ್ಯಕರ್ತ
ಸೇತುವೆ ನಿರ್ಮಾಣಗೊಂಡು ದಶಕ ಸಂದು ಹೋಗಿದೆ. ಆದರೂ ಸಮಸ್ಯೆ ಬಗೆಹರಿದಿಲ್ಲ. ಕೂಡು ರಸ್ತೆ ಎತ್ತರಿಸಿ ವಾಹನಗಳಿಗೆ ಅನುಕೂಲ ಮಾಡಿಕೊಡಿ ಎಂಬ ಮನವಿಗೆ ಸ್ಪಂದನ ಸಿಕ್ಕಿಲ್ಲ. ಪ್ರವಾಸಿಗರು, ಸ್ಥಳೀಯರು ಅತೀವ ತೊಂದರೆ ಎದುರಿಸುತ್ತಿದ್ದಾರೆ. ಇದರಿಂದ ಮರವಂತೆ ರಾಷ್ಟ್ರೀಯ ಹೆದ್ದಾರಿಯಿಂದ ಪಡುಕೋಣೆ ಭಾಗಕ್ಕೆ ಬಸ್ ಸೇವೆಯೂ ಸಿಗದಂತಾಗಿದೆ.