ಉಡುಪಿ

ಕರಾವಳಿಯಲ್ಲಿ ಹೈಕೋರ್ಟ್​ ಸಂಚಾರಿ ಪೀಠ; ನ್ಯಾಯಮೂರ್ತಿಗಳ ಸಮಿತಿ ರಚನೆ

* ಉಡುಪಿ ಜಿಲ್ಲಾ ಹೋರಾಟ ಸಮಿತಿ ಸ್ವಾಗತ

ಉಡುಪಿ: ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಹೈಕೋರ್ಟ್​ ಪೀಠ ಸ್ಥಾಪನೆಗಾಗಿ ನಡೆಯುತ್ತಿರುವ ಹೋರಾಟ ಹಾಗೂ ಮನವಿ ಪುರಸ್ಕರಿಸಿ ಕರ್ನಾಟಕ ಹೈಕೋರ್ಟ್​ನ ಮೂವರು ಮುಖ್ಯ ನ್ಯಾಯಮೂರ್ತಿಗಳ ಸಮಿತಿ ರಚಿಸಿ ಮಂಗಳವಾರ (ಸೆ.29) ಸುತ್ತೋಲೆ ಹೊರಡಿಸಲಾಗಿದೆ.

ಜಸ್ಟೀಸ್​ ಅನು ಶಿವರಾಮನ್​, ಜಸ್ಟೀಸ್​ ಎಸ್​.ಜಿ. ಪಂಡಿತ್​ ಹಾಗೂ ಜಸ್ಟೀಸ್​ ಮೊಹಮ್ಮದ್​ ನವಾಜ್​ ಅವರನ್ನೊಳಗೊಂಡ ಸಮಿತಿ ರಚಿಸಲಾಗಿದ್ದು, ಎಲ್ಲ ಪಾಲುದಾರರ ಜತೆ ಸಮಾಲೋಚನೆ ನಡೆಸಿ ವರದಿ ಸಲ್ಲಿಸಲು ಸೂಚಿಸಲಾಗಿದೆ.

ವಕೀಲ ಪ್ರೇಮಪ್ರಸಾದ್​ ಸ್ವಾಗತ

ಸುತ್ತೋಲೆ ಹೊರಡಿಸಿರುವ ಕ್ರಮಕ್ಕೆ ಕರಾವಳಿ ಹೈಕೋರ್ಟ್​ ಪೀಠ ಹೋರಾಟ ಸಮಿತಿಯ ಉಡುಪಿ ಜಿಲ್ಲಾ ಸಂಚಾಲಕ ಹಾಗೂ ಯೂ ಆ್ಯಕ್ಟ್​ ಸಂಸ್ಥಾಪಕ ವಕೀಲ ಪ್ರೇಮಪ್ರಸಾದ್​ ಶೆಟ್ಟಿ ಸ್ವಾಗತಿಸಿದ್ದಾರೆ. ಸದರಿ ಸಮಿತಿ ರಚನೆಯ ಘೋಷಣೆಯು ಕರಾವಳಿ ಪೀಠ ಸ್ಥಾಪನೆಯ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿದ್ದು, ನಮ್ಮ ಹೋರಾಟದ ಉದ್ದೇಶ ಈಡೇರಲಿದೆ ಎಂದು ತಿಳಿಸಿದ್ದಾರೆ.

ಹೋರಾಟದಲ್ಲಿ ನಮ್ಮೊಂದಿಗೆ ಸಹಕರಿಸಿದ ವಿವಿಧ ಸಂಘ-ಸಂಸ್ಥೆಗಳು, ವಕೀಲರ ಸಮೂಹ ಹಾಗೂ ಸಾರ್ವಜನಿಕರ ಅಭಿನಂದಿಸುತ್ತೇನೆ. ಮುಂದಿನ ದಿನಗಳಲ್ಲಿ ನಮ್ಮ ಹೋರಾಟ ಇನ್ನಷ್ಟು ಸಂಘಟಿತವಾಗಿ ಮಾಡಬೇಕಾದ ಅಗತ್ಯತೆ ಇದೆ. ಸಮಿತಿಯ ಮುಂದೆ ನಮ್ಮ ನ್ಯಾಯಯೋಚಿತ ಬೇಡಿಕೆ ಇಟ್ಟು ಶೀಘ್ರದಲ್ಲಿ ಪೀಠ ಸ್ಥಾಪನೆಯಾಗುವಂತೆ ಕ್ರಮ ಕೈಗೊಳ್ಳಲು ನಾವು ಮನವಿ ಮಾಡಲಿದ್ದೇವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.