ಜಾಗತಿಕ ಯುದ್ಧ ವಿರೋಧಿಸಿ ಮಕ್ಕಳ ಹಕ್ಕುಗಳ ಹೋರಾಟಗಾರ, ಕನ್ನಡ ಉಪನ್ಯಾಸಕ ರಾಮಾಂಜಿ ನಮ್ಮಭೂಮಿ ಉಡುಪಿ ಮಣಿಪಾಲದ ಟೈಗರ್​ ಸರ್ಕಲ್​ ಬಳಿ ಏಕಾಂಗಿ ಧರಣಿ ನಡೆಸಿದರು. 
ಉಡುಪಿ

ಯುದ್ಧ ಕೈಬಿಡಿ, ಬದುಕಲು ಬಿಡಿ..

* ಮಕ್ಕಳ ಹಕ್ಕುಗಳ ಹೋರಾಟಗಾರ ರಾಮಾಂಜಿ ಆಶಯ

* ಮಣಿಪಾಲ ಟೈಗರ್​ ವೃತ್ತದಲ್ಲಿ ಏಕಾಂಗಿ ಮೌನ ಧರಣಿ

ಉಡುಪಿ: ಐದು ತಿಂಗಳಿನಿಂದ ನಡೆಯುತ್ತಿರುವ ಜಾಗತಿಕ ಯುದ್ಧ ಸಂಬಂಧಿ ದುರ್ಘಟನೆಗಳನ್ನು ತಿಳಿದು, ಮನನೊಂದು, ಯುದ್ಧ ವಿರೋಧಿಸಿ ಏಕಾಂಗಿಯಾಗಿ ನೈತಿಕ ಪ್ರತಿಭಟನೆ ಮಾಡುತ್ತಿದ್ದೇನೆ. 'ರಕ್ತ ಸಿಂಚನ ನಿಲ್ಲಲಿ, ಹಸಿರು ಹಂದರ ಬೆಳೆಯಲಿ' ಎಂಬ ಆಶಯದೊಂದಿಗೆ ಮೌನ ಧರಣಿ ನಡೆಸಿದ್ದೇನೆ ಎಂದು ಮಕ್ಕಳ ಹಕ್ಕುಗಳ ಹೋರಾಟಗಾರ, ರಂಗಕರ್ಮಿ, ಕನ್ನಡ ಉಪನ್ಯಾಸಕ ರಾಮಾಂಜಿ ನಮ್ಮಭೂಮಿ ತಿಳಿಸಿದರು.
ಜಾಗತಿಕ ಯುದ್ಧದ ಮೂಲಕ ಜನಾಂಗದ ಮೇಲೆ ನಡೆಯುತ್ತಿರುವ ಹಿಂಸೆ ಮತ್ತು ಪ್ರಕೃತಿಯ ಮೇಲೆ ಆಗುತ್ತಿರುವ ದಬ್ಬಾಳಿಕೆ ಖಂಡಿಸಿ ಮಣಿಪಾಲದ ಟೈಗರ್​ ಸರ್ಕಲ್​ ಬಳಿ ಶನಿವಾರ (ಜೂ.13) ಬೆಳಗ್ಗೆ 8:30ರಿಂದ ಸಂಜೆ 6:30ರ ವರೆಗೆ ಧರಣಿ ನಡೆಸಿ ಗಮನ ಸೆಳೆದರು.

ಎಲ್ಲರಿಗೂ ಬದುಕಲು ಬಿಡಿ

ಇರಾನ್​ ವಿರುದ್ಧ ಇಸ್ರೇಲ್​ ಹಾಗೂ ಅಮೆರಿಕ ನಡೆಸುತ್ತಿರುವ ಜಂಟಿ ಸಮರದಿಂದ ಜಗತ್ತು ಸಮಸ್ಯೆ ಅನುಭವಿಸುವಂತಾಗಿದೆ. ಯಾರಿಗೂ ಯುದ್ಧ ಬೇಡ, ಶಾಂತಿ ಬೇಕು. ಎಲ್ಲರಿಗೂ ಬದುಕಲು ಬಿಡಿ. ಜಾಗತಿಕ ಮಟ್ಟದ ಸಹಬಾಳ್ವೆ, ಶಾಂತಿ, ಸೌಹಾರ್ದತೆ, ಪರಸ್ಪರ ಹೊಂದಾಣಿಕೆ, ಮಾನವ ಪ್ರೀತಿ, ಪರಿಸರ ಕಾಳಜಿ, ನಮ್ಮ ಮಕ್ಕಳ ಭವಿಷ್ಯಕ್ಕೆ ಉತ್ತಮ ವಾತಾವರಣ ಸೃಷ್ಟಿಯಾಗಬೇಕು ಎಂದು ರಾಮಾಂಜಿ ಆಶಿಸಿದರು.
ಮಾಜಿ ಸಚಿವ ವಿನಯಕುಮಾರ್​ ಸೊರಕೆ ಸ್ಥಳಕ್ಕೆ ಆಗಮಿಸಿ ಬೆಂಬಲಿಸಿದರು.
ರಾಮಾಂಜಿ ಅವರ ಈ ಪ್ರತಿಭಟನೆಗೆ ಹಲವರು ಬೆಂಬಲ ಸೂಚಿಸಿದ್ದಾರೆ. ಸ್ಥಳಕ್ಕೆ ಮಾಜಿ ಸಚಿವ ವಿನಯಕುಮಾರ್​ ಸೊರಕೆ, ಶಿಕ್ಷಣ ತಜ್ಞ ಡಾ.ಮಹಾಬಲೇಶ್ವರ್​ ರಾವ್​, ಕಸಾಪ ಉಡುಪಿ ತಾಲೂಕು ಘಟಕ ಅಧ್ಯಕ್ಷ ರವಿರಾಜ್​ ಎಚ್​.ಪಿ., ಕವಿ ಅಂಶುಮಾಲಿ ಇತರರು ಆಗಮಿಸಿ ಧರಣಿಗೆ ಬೆಂಬಲ ವ್ಯಕ್ತಪಡಿಸಿದರು.
ಜಾಗತಿಕ ಯುದ್ಧ ವಿರೋಧಿಸಿ ರಾಮಾಂಜಿ ಈಗಾಗಲೇ ಉಡುಪಿ, ಕುಂದಾಪುರ, ಮಂಗಳೂರಿನಲ್ಲಿ ಪ್ರತಿಭಟನೆ ನಡೆಸಿ ಗಮನ ಸೆಳೆದಿದ್ದಾರೆ.