ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ. ತಿಪ್ಪೇಸ್ವಾಮಿ ತರಬೇತಿ ಕಾರ್ಯಾಗಾರ ಉದ್ಘಾಟಿಸಿದರು.
ಉಡುಪಿ: ಮಕ್ಕಳು ದೇಶದ ಆಸ್ತಿ. ಮಕ್ಕಳ ರಕ್ಷಣೆಯ ಕ್ಷೇತ್ರದಲ್ಲಿ ತೊಡಗಿರುವವರು ಮಕ್ಕಳ ಕಾನೂನುಗಳ ಬಗ್ಗೆ ಸ್ಪಷ್ಟ ಮಾಹಿತಿ ಹೊಂದಿದ್ದಾಗ ಮಕ್ಕಳಿಗೆ ಪರಿಣಾಮಕಾರಿಯಾಗಿ ನ್ಯಾಯ ದೊರೆಯುತ್ತದೆ. ಮಕ್ಕಳ ನ್ಯಾಯವನ್ನು ಖಚಿತ ಪಡಿಸುವ ಜವಾಬ್ದಾರಿ ನಮ್ಮದಾಗಿದ್ದು, ಸರ್ಕಾರ ಮಕ್ಕಳ ಹಕ್ಕುಗಳ ರಕ್ಷಣೆಗೆ ಬದ್ಧವಾಗಿದೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ. ತಿಪ್ಪೇಸ್ವಾಮಿ ಕೆ.ಟಿ. ಹೇಳಿದರು.
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ವಿಕಲ ಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಸಂಯುಕ್ತ ಆಶ್ರಯದಲ್ಲಿ ನಡೆದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ. 40 ರಷ್ಟು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿದ್ದಾರೆ. ಬೆಳೆಯುತ್ತಿರುವ ಮಕ್ಕಳ ಸಾಮಾಜಿಕ ಮತ್ತು ದೈಹಿಕ ಸ್ಥಿತಿಗತಿಗಳನ್ನು ಪರಿಗಣಿಸಿ, ಅವರು ಎದುರಿಸುವ ಸಮಸ್ಯೆ, ತಲ್ಲಣ ಹಾಗೂ ಅವರ ದೈಹಿಕ ಮತ್ತು ಮಾನಸಿಕ ಅವಶ್ಯಕತೆಗಳ ಬಗ್ಗೆ ವಾಸ್ತವಿಕ ಅರಿವಿನಿಂದ ಭವಿಷ್ಯವನ್ನು ರೂಪಿಸುವ ಅಗತ್ಯವಿದೆ. ವಿಶೇಷವಾಗಿ ಭಿನ್ನ ಸಾಮರ್ಥ್ಯದ ಮಕ್ಕಳ ಆರೈಕೆ ಮತ್ತು ಅವರ ಅಗತ್ಯಗಳು ಸಾಮಾನ್ಯ ಮಕ್ಕಳಿಗಿಂತ ಹೆಚ್ಚಾಗಿರುತ್ತವೆ. ಜಿಲ್ಲೆಯಲ್ಲಿ 16,763 ಮಕ್ಕಳಿದ್ದು, ಇದರಲ್ಲಿ ಸುಮಾರು 1.5 ಸಾವಿರ ಭಿನ್ನ ಸಾಮರ್ಥ್ಯದ ಮಕ್ಕಳಿದ್ದಾರೆ. ಇಂತಹ ಮಕ್ಕಳಿಗೆ ವಿಶೇಷ ಕಾಳಜಿಯ ಅಗತ್ಯವಿರುತ್ತದೆ. ಇವರ ಜೊತೆ ನೇರ ಸಂಪರ್ಕ ಹೊಂದಿರುವ ತಳಮಟ್ಟದ ಕಾರ್ಯಕರ್ತರು ಇವರ ಪುನರ್ವಸತಿಗೆ ಹೆಚ್ಚಿನ ಕಾಳಜಿ ವಹಿಸಿ, ಸಾಮಾನ್ಯ ಮಕ್ಕಳಂತೆ ಗೌರವಯುತ ಬದುಕು ಕಟ್ಟಿಕೊಳ್ಳಲು ನೆರವಾಗಬೇಕು ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತಿಕ್ ಬಾಯಲ್ ಮಾತನಾಡಿ, ಸಂವಿಧಾನದ 3 ನೇ ಭಾಗದಲ್ಲಿ 6 ರಿಂದ 14 ವರ್ಷ ವಯಸ್ಸಿನ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಪ್ರಾಥಮಿಕ ಶಿಕ್ಷಣವನ್ನು ಮೂಲಭೂತ ಹಕ್ಕನ್ನಾಗಿಸಿದೆ. ದೇಶದ ಪ್ರತಿಯೊಬ್ಬ ಮಗುವೂ ಕನಿಷ್ಠ ತಳಮಟ್ಟದ ಶಿಕ್ಷಣವನ್ನು ಹೊಂದಿರಬೇಕು ಎನ್ನುವ ಉದ್ದೇಶ ಇದರ ಹಿಂದಿದೆ. ಮಕ್ಕಳು ಶಾರೀರಿಕ ಮತ್ತು ಬೌದ್ಧಿಕವಾಗಿ ಬೆಳವಣಿಗೆ ಹೊಂದಲು ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿ ಊಟ, ನಲಿ-ಕಲಿ ಪಠ್ಯ ಕ್ರಮ, ಡಿಜಿಟಲ್ ಪಾಠಶಾಲೆಗಳು, ಸಮಗ್ರ ಶಿಕ್ಷಣ ಅಭಿಯಾನದಡಿ ಮೂಲಸೌಕರ್ಯ ಮತ್ತು ಶಿಕ್ಷಕರ ತರಬೇತಿ ಕಾರ್ಯಕ್ರಮಗಳಿಗೆ ಒತ್ತು ನೀಡಲಾಗುತ್ತಿದೆ ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್ ಮಾತನಾಡಿ, ಮಕ್ಕಳು ಅತ್ಯಂತ ದುರ್ಬಲರಾಗಿರುವುದರಿಂದ ಅವರ ಹಕ್ಕುಗಳ ರಕ್ಷಣೆಯಲ್ಲಿ ಹೆಚ್ಚು ಸಂವೇದನಾಶೀಲರಾಗಿ ವ್ಯವಹರಿಸಬೇಕು. ಅವರ ಜೊತೆ ವ್ಯವಹರಿಸುವಾಗ ಆ ಜಾಗದಲ್ಲಿ ತಮ್ಮನ್ನು ತಾವು ಕಲ್ಪಿಸಿಕೊಂಡು ಅವರಿಗೆ ನ್ಯಾಯ ಒದಗಿಸಬೇಕು ಎಂದರು.
ಯುನಿಸೆಫ್ ಪ್ರಾದೇಶಿಕ ಸಂಯೋಜಕ ಕೊಣಿಲ ರಾಘವೇಂದ್ರ ಭಟ್ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಶ್ಯಾಮಲಾ ಸಿ.ಕೆ, ಉಡುಪಿ ಉಪ ಪೊಲೀಸ್ ಅಧೀಕ್ಷಕ ಪ್ರಭು ಡಿ.ಟಿ, ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ರತ್ನಾ ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನಾಗರತ್ನ ನಾಯಕ್ ಸ್ವಾಗತಿಸಿ, ಸುರಕ್ಷಾ ನಿರೂಪಿಸಿ ವಂದಿಸಿದರು.