ತಲೆಗೆ ತೆಂಗಿನಕಾಯಿ ಬಿದ್ದು ಮೃತಪಟ್ಟ ಮಗು
ವಿಜಯವಾಣಿ ಸುದ್ದಿಜಾಲ ಬ್ರಹ್ಮಾವರ
ತಾಯಿಯ ಕಂಕುಳಿನಲ್ಲಿದ್ದ ಮಗುವಿನ ತಲೆಗೆ ತೆಂಗಿನಕಾಯಿ ಬಿದ್ದು ಒಂದೂವರೆ ವರ್ಷದ ಗಂಡು ಮಗು ಮೃತಪಟ್ಟಿದೆ.
ಹೆರಂಜೆ ನಿವಾಸಿ, ಮಗುವಿನ ತಾಯಿ ಸುಚಿತ್ರಾ ಪೂಜಾರಿ ಮಂಗಳವಾರ ಬೆಳಗ್ಗೆ 6 ವರ್ಷದ ಮಗಳು ದಿಯಾಳನ್ನು ಶಾಲಾ ಬಸ್‌ಗೆ ಬಿಡಲು ಹೊರಟಿದ್ದರು. ಈ ವೇಳೆ ಸಣ್ಣ ಮಗು ದಕ್ಷ್ ಪೂಜಾರಿಯನ್ನೂ ಎತ್ತಿಕೊಂಡು ಹೋಗುತ್ತಿದ್ದಾಗ ದಾರಿಬದಿಯಲ್ಲಿದ್ದ ತೆಂಗಿನಮರದಿಂದ ತೆಂಗಿನಕಾಯಿ ನೇರವಾಗಿ ಮಗುವಿನ ತಲೆ ಮೇಲೆ ಬಿದ್ದಿದೆ.
ಗಂಭೀರ ಗಾಯಗೊಂಡ ಮಗುವನ್ನು ಸ್ಥಳೀಯರು ಕೂಡಲೇ ಮಣಿಪಾಲ ಆಸ್ಪತ್ರೆಗೆ ದಾಖಲಿಸಿದರು. ವೈದ್ಯರು ಶಸಚಿಕಿತ್ಸೆ ನಡೆಸಿದರೂ ಫಲಕಾರಿಯಾಗದೆ ಸಂಜೆ ವೇಳೆಗೆ ಮಗು ಮೃತಪಟ್ಟಿದೆ. ಕಾಯಿ ಬಿದ್ದ ರಭಸಕ್ಕೆ ಮಗುವಿನ ತಲೆಯಲ್ಲಿ ಒಂದು ಇಂಚಿನಷ್ಟು ಜಜ್ಜಿದ ಗುಳಿಯಾಗಿತ್ತು.
ಮಗುವಿನ ತಂದೆ ಹೆರಂಜೆಯ ಪ್ರಶಾಂತ್ ಪೂಜಾರಿ ಬ್ರಹ್ಮಾವರ ಗಾಂಧಿ ಮೈದಾನ ಸಮೀಪ ಸಣ್ಣ ಗಾಡಿಯಲ್ಲಿ ಫಾಸ್ಟ್‌ಫುಡ್ ಅಂಗಡಿ ನಡೆಸುತ್ತಿದ್ದಾರೆ. ತಾಯಿ ಸುಚಿತ್ರಾ ಗೃಹಿಣಿಯಾಗಿದ್ದಾರೆ.
ಹಸಿ ತೆಂಗಿನಕಾಯಿ!
ಸಾಮಾನ್ಯವಾಗಿ ಹಿರಿ ಮಗಳನ್ನು ಶಾಲೆಗೆ ಬಿಡುವಾಗ ತಾಯಿಯು ಚಿಕ್ಕಮಗುವನ್ನು ಕರೆದೊಯ್ಯುತ್ತಿರಲಿಲ್ಲ. ಮಂಗಳವಾರ ಮಗುವನ್ನು ಶಾಲೆಗೆ ಕರೆದುಕೊಂಡು ಹೋಗುವ ವೇಳೆ ಮಳೆ ನಿಂತಿತ್ತು. ಆದ್ದರಿಂದ ಪುಟ್ಟ ಮಗುವನ್ನೂ ಕರೆದುಕೊಂಡು ಹೋಗಿದ್ದರು. ಮನೆಯಿಂದ ಶಾಲಾ ಬಸ್ ಬರುವಲ್ಲಿಗೆ 250ರಿಂದ 300 ಮೀಟರ್ ದೂರ ನಡೆದುಕೊಂಡು ಹೋಗಬೇಕು. 50 ಮೀ. ದೂರ ತೋಟದಲ್ಲಿ ಸಾಗಿ ನಂತರ ಗದ್ದೆ ಬದಿಯಾಗಿ ರಸ್ತೆ ಇರುವಲ್ಲಿಗೆ ತಲುಪಬೇಕು. ಇಷ್ಟು ಕಡಿಮೆ ಅಂತರದಲ್ಲಿ ಅದೂ ಹಸಿ ತೆಂಗಿನಕಾಯಿ ನೇರವಾಗಿ ಕಂಕುಳಿನಲ್ಲಿದ್ದ ಮಗುವಿನ ಮೇಲೆಯೇ ಬಿದ್ದಿರುವುದು ಎಲ್ಲರಲ್ಲೂ ಆಶ್ಚರ್ಯ ಮೂಡಿಸಿದೆ.