ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಬೆಳ್ಳಿಹಬ್ಬ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಡಿ.ಕೆ. ಶಿವಕುಮಾರ್ ಅವರಿಗೆ ತೋನ್ಸೆ ಜಯಕೃಷ್ಣ ಎ. ಶೆಟ್ಟಿ ಆಮಂತ್ರಣ ನೀಡಿದರು. ಕೆ.ಪಿ. ಜಗದೀಶ್ ಅಧಿಕಾರಿ ಇದ್ದರು.
* ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯಿಂದ ಆಹ್ವಾನ
* ಆಗಸ್ಟ್ ತಿಂಗಳಲ್ಲಿ ನಡೆಯಲಿದೆ ಸಮಾರಂಭ
ಉಡುಪಿ: ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ (ಎನ್ಜಿಒ)ಯ ಬೆಳ್ಳಿ ಹಬ್ಬ ಸಮಾರಂಭ ಆಗಸ್ಟ್ ತಿಂಗಳಲ್ಲಿ ನಡೆಯಲಿದ್ದು, ಮುಖ್ಯ ಅತಿಥಿಯಾಗಿ ಪಾಳ್ಗೊಳ್ಳುವಂತೆ ಸಮಿತಿಯ ಸಂಸ್ಥಾಪಕ ತೋನ್ಸೆ ಜಯಕೃಷ್ಣ ಎ. ಶೆಟ್ಟಿ ಹಾಗೂ ಸಮಿತಿಯ ರಾಜ್ಯ ಸಂಯೋಜಕ ಕೆ.ಪಿ. ಜಗದೀಶ್ ಅಧಿಕಾರಿ ಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಆಮಂತ್ರಣ ನೀಡಿದರು.
ಬೆಂಗಳೂರಿನ ಸಿಎಂ ಕಚೇರಿಯಲ್ಲಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ, ಕಳೆದ 25 ವರ್ಷದಿಂದ ನಮ್ಮ ಸಮಿತಿಯು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಗಾಗಿ ನಿಸ್ವಾರ್ಥ ಹಾಗೂ ಪ್ರಾಮಾಣಿಕ ಕಾರ್ಯ ನಿರ್ವಹಿಸುತ್ತಿದೆ. ಪರಿಸರ ಸಂರಕ್ಷಣೆ, ಕೈಗಾರಿಕಾ ಅಭಿವೃದ್ಧಿ, ಮೂಲಸೌಕರ್ಯ ವೃದ್ಧಿ ಹಾಗೂ ಸಾರ್ವಜನಿಕ ಹಿತಾಸಕ್ತಿ ವಿಚಾರಗಳಲ್ಲಿ ಮಹತ್ವದ ಕೊಡುಗೆ ನೀಡುತ್ತಿದ್ದೇವೆ ಎಂದು ತಿಳಿಸಿದರು.
ಆಮಂತ್ರಣ ಸ್ವೀಕರಿಸಿ ಮಾತನಾಡಿದ ಸಿಎಂ, ನಿಮ್ಮ ಸಮಿತಿಯ ಕಾರ್ಯಚಟುವಟಿಕೆಗಳ ಬಗ್ಗೆ ನನಗೆ ಸಂಪೂರ್ಣ ಅರಿವು ಇದೆ. ಸಮಿತಿಯ ಬೆಳ್ಳಿ ಹಬ್ಬದಲ್ಲಿ ಭಾಗವಹಿಸುವುದು ನನಗೆ ಸಂತೋಷದ ವಿಚಾರ ಎಂದರು.
ವಿವಿಧ ಅಭಿವೃದ್ಧಿ ಕಾರ್ಯಗಳಲ್ಲಿ ಸಕ್ರಿಯ
ಮಂಗಳೂರು ವಿಮಾನ ನಿಲ್ದಾಣದಲ್ಲಿ ರಾತ್ರಿ ಲ್ಯಾಂಡಿಂಗ್ ಸೌಲಭ್ಯ ಕಲ್ಪಿಸಲು ರನ್ವೇ ವಿಸ್ತರಣೆ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಭಿವೃದ್ಧಿ, ನಂದಿಕೂರು ವಿದ್ಯುತ್ ಯೋಜನೆ ಅನುಷ್ಠಾನ, ಮಂಗಳೂರು-ಬೆಂಗಳೂರು ರೈಲು ಮಾರ್ಗದ ಬ್ರಾಡ್ಗೇಜ್ ಪರಿವರ್ತನೆ ಹಾಗೂ ಪುನರಾರಂಭ, ಮಂಗಳೂರು-ಬೈಂದೂರು ರಾಷ್ಟ್ರೀಯ ಹೆದ್ದಾರಿ ಚತುಷ್ಪಥಿಕರಣ ಸೇರಿದಂತೆ ಹಲವಾರು ಪ್ರಮುಖ ಅಭಿವೃದ್ಧಿ ಕಾರ್ಯಗಳಲ್ಲಿ ಸಮಿತಿಯು ಸಕ್ರಿಯ ಪಾತ್ರವಹಿಸಿದೆ. ಇದಲ್ಲದೆ, ಮಾಜಿ ರಕ್ಷಣಾ ಸಚಿವ ಹಾಗೂ ಎನ್ಡಿಎ ಸಂಚಾಲಕರಾಗಿದ್ದ ಪದ್ಮವಿಭೂಷಣ ದಿ. ಜಾರ್ಜ್ ಫರ್ನಾಂಡಿಸ್ ಹಾಗೂ ವಿವಿಧ ಜನಪ್ರತಿನಿಧಿಗಳ ಸಹಕಾರದೊಂದಿಗೆ ಮುಂಬಯಿ-ಮಂಗಳೂರು ಗರೀಬ್ ರಥ್ ರೈಲು ಸೇವೆ ಆರಂಭಿಸುವಲ್ಲಿಯೂ ಸಮಿತಿಯ ಪ್ರಯತ್ನ ಗಮನಾರ್ಹವಾಗಿವೆ ಎಂದು ಜಯಕೃಷ್ಣ ಎ. ಶೆಟ್ಟಿ ಅವರು ಸಿಎಂ ಗಮನಕ್ಕೆ ತಂದರು.