ಕುಡುಪು ಕ್ಷೇತ್ರದಲ್ಲಿ ರಥೋತ್ಸವ ಜರುಗಿತು.  
ಉಡುಪಿ

ಕುಡುಪು ಕ್ಷೇತ್ರದಲ್ಲಿ ರಥೋತ್ಸವ, ಅವಭೃತೋತ್ಸವ

ಮಂಗಳೂರು: ಕುಡುಪು ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ವಾರ್ಷಿಕ ಧ್ವಜಾರೋಹಣ ಉತ್ಸವದ ನಾಲ್ಕನೇ ದಿನ ಶ್ರೀ ದೇವರ ರಥೋತ್ಸವ ಓಕುಳಿ ಕಾರ್ಯಕ್ರಮ ಹಾಗೂ ಅವಭೃತೋತ್ಸವ ಧ್ವಜಾವರೋಹಣ ನಡೆಯಿತು.
ಬೆಳಗ್ಗೆ ಧನು ಪೂಜೆ ನೆರವೇರಿತು. ಪ್ರಾತಃಕಾಲದ ಪೂಜೆ ಬಳಿಕ ವಿಶೇಷ ಕಲಶಾಭಿಷೇಕ ಪಂಚಾಮೃತ ಮಹಾಭಿಷೇಕ, ಭಕ್ತರ ಹರಕೆಯ ತುಲಾಭಾರ ಸೇವೆ, ಸಹಸ್ರ ನಾಮರ್ಚನೆ, ಅಷ್ಟೋತ್ತರ ಅರ್ಚನೆ ಬಳಿಕ ಸರ್ವ ಆಭರಣ ಹಾಗೂ ವಿವಿಧ ಬಗೆಯ ಪುಷ್ಪಾದಿಗಳಿಂದ ಅಲಂಕರಿಸಿ ವಿಶೇಷ ಹರಿವಾಣ ನೈವೇದ್ಯ ನೆರವೇರಿಸಲಾಯಿತು.
ಮಧ್ಯಾಹ್ನ ಮಹಾನೈವೇದ್ಯ ಸಮರ್ಪಣೆ ಬಳಿಕ ಮಹಾಪೂಜೆ, ಶ್ರೀ ದೇವರ ಬಲಿ, ದೇವಳದ ರಾಜಾಂಗಣದಲ್ಲಿ ವಿಶೇಷ ಉಡುಕೆ ಸುತ್ತು ಚೆಂಡೆ ಸುತ್ತು ಸೇವೆ, ಮಹಾ ರಥದ ಬಳಿ ದೇವರ ರಥಾರೋಹಣ, ಭಕ್ತರಿಂದ ಮಹಾರಥಕ್ಕೆ ತೆಂಗಿನಕಾಯಿ ಒಡೆಯುವ ಸೇವೆ, ರಥ ಎಳೆಯುವ ಸೇವೆ, ಓಕುಳಿ ಮಹಾಪೂಜೆ ನಡೆಯಿತು. ಭಕ್ತರು ದೇವರ ಓಕುಳಿ ಪ್ರಸಾದ ಸ್ವೀಕರಿಸಿದರು. ಸಾಲಂಕೃತ ಪಲ್ಲಕ್ಕಿಯಲ್ಲಿ ದೇವರಿಗೆ ವಿವಿಧ ವಾದ್ಯಗಳ ಮೂರು ಸುತ್ತಿನ ಪಲ್ಲಕ್ಕಿ ಸೇವೆ, ದೇವರ ಬಲಿ, ಗರ್ಭಗುಡಿಯಲ್ಲಿ ವಿಶೇಷ ಆರತಿ ಬಳಿಕ ಅನ್ನಸಂತರ್ಪಣೆ ನೆರವೇರಿತು.
ದೇವಳದ ಭದ್ರಾ ಸರಸ್ವತಿ ತೀರ್ಥ ಸರೋವರದಲ್ಲಿ ಕಟ್ಟೆ ಪೂಜೆ ದೇವರಿಗೆ ಜಳಕ, ವಿಶೇಷ ಪಂಚಾಮೃತ ಅಭಿಷೇಕ, ಬಲಿ, ಓಡಬಲಿ ಸೇವೆ, ದರ್ಶನ ಬಲಿ ಸೇವೆ, ಬಳಿಕ ಧ್ವಜಸ್ತಂಭದ ಬಳಿ ಕ್ಷೇತ್ರದ ಪದಾತಿಯವರಿಗೆ ಮಹಾಪ್ರಸಾದ ನೀಡಿ ಧ್ವಜಾವರೋಹಣ ನಡೆಯಿತು. ರಾತ್ರಿ ಮಹಾಪೂಜೆ, ದೇವರ ಬಲಿ, ರಾಜಾಂಗಣದಲ್ಲಿ ವಿಶೇಷ ಉಡುಕೆ ಸುತ್ತು ಚೆಂಡೆ ಸುತ್ತು, ಪಾಲಕಿ ಸುತ್ತು ಹಾಗೂ ರಥೋತ್ಸವ ಸೇವೆ ನೆರವೇರಿತು. ಮಹಾರಥವನ್ನು ಕದಳಿ ಫಲ ಮತ್ತು ಹೂವಿನಿಂದ ಅಲಂಕರಿಸಲಾಗಿತ್ತು. ವಕೀಲ ಶ್ರೀ ರವಿ ಪ್ರಸನ್ನ ಭಕ್ತರಿಗೆ ವಿಶೇಷ ಫಲಾಹಾರದ ವ್ಯವಸ್ಥೆ ಮಾಡಿದ್ದರು. ಕ್ಷೇತ್ರದ ಆಡಳಿತ ಮೊಕ್ತೇಸರ, ಆನುವಂಶಿಕ ಮೊಕ್ತೇಸರ, ಆನುವಂಶಿಕ ಪವಿತ್ರ ಪಾಣಿ ಆನುವಂಶಿಕ ಅರ್ಚಕರು ಹಾಗೂ ಭಕ್ತರು ಭಾಗವಹಿಸಿದ್ದರು.