ಉಡುಪಿಯ ಡಿಸಿ ಕಚೇರಿ ಸಭಾಂಗಣದಲ್ಲಿ ನಡೆದ ಪ್ರವಾಸೋದ್ಯಮ ಅಭಿವೃದ್ಧಿ ಸಭೆಯಲ್ಲಿ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿದರು. ಸ್ವರೂಪಾ ಟಿ.ಕೆ., ವಿಂಧ್ಯಾ ಎನ್.ಎಂ., ಪೂರ್ಣಿಮಾ ಇತರರು ಇದ್ದರು.
* ಉಡುಪಿ ಸಂಸದ ಶ್ರೀನಿವಾಸ ಪೂಜಾರಿ ಮಾಹಿತಿ
* ಕೇಂದ್ರ ಸರ್ಕಾರಿ ಯೋಜನೆಯ ಅನುಷ್ಠಾನ ಸಭೆ
ಉಡುಪಿ: ದೇಶದಲ್ಲಿ ಸುಸ್ಥಿರ ಹಾಗೂ ಜವಾಬ್ದಾರಿಯುತ ಪ್ರವಾಸೋದ್ಯಮಕ್ಕಾಗಿ ಕೇಂದ್ರ ಪ್ರವಾಸೋದ್ಯಮ ಇಲಾಖೆಯು ದೇಶದ 50ಕ್ಕೂ ಹೆಚ್ಚು ಪ್ರವಾಸಿ ತಾಣಗಳಲ್ಲಿ ಜಾಗತಿಕ ಮಟ್ಟದ ಅಭಿವೃದ್ಧಿಗೆ ಮುಂದಾಗಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾಹಿತಿ ನೀಡಿದರು.
ಉಡುಪಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ (ಫೆ.7) ಆಯೋಜಿಸಿದ್ದ ಕೇಂದ್ರ ಸರ್ಕಾರದ ಜಾಗತಿಕ ಪ್ರವಾಸೋದ್ಯಮ ತಾಣ ಯೋಜನೆಯ ಅನುಷ್ಠಾನ ಸಭೆಯಲ್ಲಿ ಮಾತನಾಡಿದರು.
ಪರಿಸರ ಸ್ನೇಹಿ ಕಾರ್ಯ
ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸುಸ್ಥಿರತೆ ತರುವುದು ಕೇಂದ್ರ ಸರ್ಕಾರದ ಉದ್ದೇಶ. ಅದಕ್ಕಾಗಿ ನೈಸರ್ಗಿಕ, ಸಾಂಸತಿಕ ಸಂಪನ್ಮೂಲ ರಕ್ಷಿಸುವುದರೊಂದಿಗೆ ಪರಿಸರ ಸ್ನೇಹಿಯಾಗಿ ಪ್ರವಾಸೋದ್ಯಮ ತಾಣ ಅಭಿವೃದ್ಧಿ ಮಾಡಲಾಗುವುದು. ತನ್ಮೂಲಕ ಪ್ರವಾಸಿಗರನ್ನು ಆಕರ್ಷಿಸುವುದು ಹಾಗೂ ಮೂಲ ಸೌಕರ್ಯಗಳ ಅಭಿವೃದ್ಧಿಗೆ ವಿಶೇಷ ಗಮನ ಹರಿಸಲು 'ಡೆಸ್ಟಿನೇಷನ್ ಡೆವಲಪ್ಮೆಂಟ್ ಸ್ಕೀಮ್' ಜಾರಿಗೆ ತಂದಿದೆ. ಜಿಲ್ಲೆಯಲ್ಲಿ ಈ ಯೋಜನೆಗೆ ಕೋಡಿ- ಕನ್ಯಾಣ, ಕೋಡಿ ಕುಂದಾಪುರ, ಬಾರ್ಕೂರು ಪೋರ್ಟ್ ಪ್ರದೇಶ ಹಾಗೂ ತ್ರಾಸಿ-ಮರವಂತೆ ಪ್ರವಾಸಿ ತಾಣ ಗುರುತಿಸಲಾಗಿದೆ ಎಂದರು.
ಐಪಿಇ ಗ್ಲೋಬಲ್ನ ಹೇಮಲತಾ ಅವರು ಜಿಲ್ಲೆಯಲ್ಲಿ ಜಾಗತಿಕವಾಗಿ ಅಭಿವೃದ್ಧಿಪಡಿಸಿರುವ ಸ್ಥಳಗಳನ್ನು ಪಿಪಿಟಿ. ಮೂಲಕ ಪ್ರದರ್ಶಿಸಿ, ಸವಿವರ ನೀಡಿದರು. ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಮಾತನಾಡಿ, ಉಡುಪಿ ಜಿಲ್ಲೆಯು 93 ಕಿಮೀ ಉದ್ದದ ಕರಾವಳಿ ತೀರ, ಪಶ್ಚಿಮ ಘಟ್ಟಗಳ ಪ್ರಕೃತಿ ಸೌಂದರ್ಯ, ಹಳ್ಳ&ಕೊಳ್ಳ, ಹೊಳೆ ಹೊಂದಿದ್ದು ಪ್ರವಾಸಿಗರನ್ನು ಹೆಚ್ಚು ಆಕರ್ಷಿಸುತ್ತಿದೆ ಎಂದರು.
ಸಭೆಯಲ್ಲಿ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕಿ ವಿಂಧ್ಯಾ ಎನ್.ಎಂ., ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಹಾಗೂ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.
ಕೇಂದ್ರ ಸರ್ಕಾರದ ಯೋಜನೆಯಡಿ ನವೀಕರಿಸಬಹುದಾದ ಇಂಧನ ಬಳಕೆ, ಮೂಲ ಸೌಕರ್ಯ ಹಾಗೂ ಪ್ರವಾಸಿಗರಿಗೆ ಜಾಗತಿಕ ಮಾನದಂಡದಲ್ಲಿ ಅಭಿಯಾನ ಸೇರಿ ಜಿಲ್ಲೆಯ ಒಂದು ಪ್ರವಾಸಿ ತಾಣ ಆಯ್ಕೆ ಮಾಡಿ ಅಭಿವೃದ್ಧಿ ಮಾಡಲಾಗುವುದು. ದೇಶಾದ್ಯಂತ ಯೋಜನೆ ಅನುಷ್ಠಾನಕ್ಕಾಗಿ ಕೇಂದ್ರ 300 ಕೋಟಿ ರೂ. ಅನುದಾನ ನೀಡಲಿದೆ. ಪ್ರವಾಸಿ ತಾಣದ ಅಭಿವೃದ್ಧಿಗೆ ಖಾಸಗಿ ಸಹಭಾಗಿತ್ವಕ್ಕೂ ಉತ್ತೇಜಿಸಲಾಗುವುದು. ಅಗತ್ಯವಿರುವ ಭೂಮಿಯನ್ನೂ ಸಹ ಒದಗಿಸುವ ಅಗತ್ಯವಿದೆ.