ಉಡುಪಿ: ಈ ದೇಶದಲ್ಲಿ ಎಲ್ಲರಿಗೂ ಒಂದೇ ಮತ ಎನ್ನುವುದನ್ನು ಸಂವಿಧಾನ ನೀಡಿದೆ. ಈಗ ಅದನ್ನೇ ಬುಡಮೇಲು ಮಾಡುವ ಕೃತ್ಯಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಜನರ ಅಮೂಲ್ಯ ಮತದಾನದ ಹಕ್ಕನ್ನು ಚುನಾವಣಾ ಆಯೋಗದ ಮೂಲಕ ಅನ್ಯಾಯವಾಗಿ ಕಿತ್ತುಕೊಂಡಿದೆ. ಇದು ಪ್ರಜಾತಂತ್ರ ವ್ಯವಸ್ಥೆಗೆ ಅಪಾಯಕಾರಿ. ಬಿಜೆಪಿಯು ಅಧಿಕಾರ ಭದ್ರಪಡಿಸಿಕೊಳ್ಳಲು ಆಯುಕ್ತ ಜ್ಞಾನೇಶ್ ಕುಮಾರ್ ಮೂಲಕ ಕಾರ್ಯಾಂಗವನ್ನೇ ದುರ್ಬಳಕೆ ಮಾಡಿಕೊಂಡು ಅಪರಾಧಿಕ ಕೆಲಸ ಮಾಡಿಸುತ್ತಿದೆ ಎಂದು ಸಿಪಿಐಎಂ ಉಡುಪಿ ಜಿಲ್ಲಾ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಆರೋಪಿಸಿದರು.
ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ಪದಚ್ಯುತಗೊಳಿಸಿ ಬಂಧಿಸುವಂತೆ ಮತ್ತು ಎಸ್ಐಆರ್ ರದ್ದುಗೊಳಿಸುವಂತೆ ಆಗ್ರಹಿಸಿ ಉಡುಪಿಯ ಅಜ್ಜರಕಾಡು ಹುತಾತ್ಮ ಸ್ಮಾರಕದ ಬಳಿ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ಉಡುಪಿ ವಲಯ ಸಮಿತಿ ವತಿಯಿಂದ ಮಂಗಳವಾರ (ಅ.6) ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.
ಬಿಜೆಪಿ ನಾಯಕರು ಫಾರ್ಮ್-7 ಸಲ್ಲಿಸಿ ಮತದಾರ ಹೆಸರು ಡಿಲೀಟ್ ಮಾಡಿಸುತ್ತಿದ್ದಾರೆ. ಈ ರೀತಿ ಅರ್ಜಿ ಸಲ್ಲಿಸಿದವರ ವಿರುದ್ಧ ರಾಜ್ಯ ಸರ್ಕಾರ ಕ್ರಿಮಿನಲ್ ಕೇಸ್ ದಾಖಲಿಸಬೇಕು. ಈ ದೇಶದ ಕೆಲವೇ ಕೆಲವು ಮಂದಿಗೆ ಮಾತ್ರ ಹಕ್ಕುಗಳನ್ನು ಕೊಡುವ ಕಾನೂನು ಜಾರಿಗೆ ತರಲಾಗುತ್ತಿದೆ. ಇದರ ವಿರುದ್ಧ ಹೋರಾಟ ಅಗತ್ಯವಾಗಿದೆ ಎಂದರು.
ಸಿಪಿಐಎಂ ಉಡುಪಿ ವಲಯ ಸಮಿತಿ ಕಾರ್ಯದರ್ಶಿ ಶಶಿಧರ್ ಗೊಲ್ಲ ಮಾತನಾಡಿ, ಇಂದು ಅಲ್ಪಸಂಖ್ಯಾತರು, ದಲಿತರು, ಬಡವರು, ಮಹಿಳೆಯರು ಮತದಾನದ ಹಕ್ಕಿನಿಂದ ವಂಚಿತರಾಗುತ್ತಿದ್ದಾರೆ. ಎಸ್ಐಆರ್ ಪ್ರಕ್ರಿಯೆಯ ಹಿಂದೆ ಕೇಂದ್ರ ಸರ್ಕಾರದ ರಾಜಕೀಯ ತಂತ್ರ ಅಡಗಿದೆ ಎಂದರು.
ಜಿಲ್ಲಾ ಸಮಿತಿ ಸದಸ್ಯ ಕವಿರಾಜ್ ಎಸ್. ಕಾಂಚನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ದಲಿತ ಹಕ್ಕುಗಳ ಸಮಿತಿಯ ಅಧ್ಯಕ್ಷ ಸಂಜೀವ ಬಳ್ಕೂರು, ಮುಖಂಡರಾದ ಚಂದ್ರಶೇಖರ್ ವಿ., ಉಮೇಶ್ ಕುಂದರ್, ನಳಿನಿ, ಸರೋಜಾ, ಪ್ರಭಾಕರ್ ಕುಂದರ್, ವಾಮನ ಪೂಜಾರಿ, ಸುಭಾಸ್ಚಂದ್ರ ನಾಯಕ್, ಸುನೀತಾ ಶೆಟ್ಟಿ, ಬಲ್ಕೀಸ್, ಸುನಂದಾ, ರತ್ನಾ, ಲಲಿತಾ ಸುವರ್ಣ, ಸುನಂದಾ ಕುಕ್ಕಿಕಟ್ಟೆ, ವಸಂತಿ ಇತರರಿದ್ದರು.