ರಾ.ಹೆ. 66ರ ಕಾಮಗಾರಿ ಸ್ಥಳಕ್ಕೆ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಎ.ಕಿರಣ್ ಕುವಾರ್ ಕೊಡ್ಗಿ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು.  
ಉಡುಪಿ

ಮೇಲ್ಸೇತುವೆ ಡಿಪಿಆರ್‌ಗೆ ಕೇಂದ್ರ ಸಮ್ಮತಿ

ಇಂದಿರಾ ಎನ್ ಕೆ
ವಿಜಯವಾಣಿ ಸುದ್ದಿಜಾಲ ಕುಂದಾಪುರ
ರಾಷ್ಟ್ರೀಯ ಹೆದ್ದಾರಿ 66ರಲ್ಲಿರುವ ಸಮಸ್ಯೆಗಳನ್ನು ಪರಿಹರಿಸಲು ಹೊಸದಾಗಿ ಡಿಪಿಆರ್ ವಾಡಲು ಕೇಂದ್ರ ಸರ್ಕಾರ ಅನುಮತಿ ನೀಡಿದ್ದು, ಪಡುಬಿದ್ರಿ, ಉಡುಪಿಯ ಅಂಬಾಗಿಲು, ಬ್ರಹ್ಮಾವರ, ಕೋಟ ಜಂಕ್ಷನ್, ತೆಕ್ಕಟ್ಟೆ ಸೇರಿದಂತೆ ಒಟ್ಟು 4ರಿಂದ 5 ಜಂಕ್ಷನ್‌ಗಳಲ್ಲಿ ಮೇಲ್ಸೇತುವೆ ಮಾಡಬೇಕಿದೆ. ಹೊಸದಾಗಿ ಎರಡು ಕಂಪನಿಗಳಿಗೆ ಡಿಪಿಆರ್ ಮಾಡಲು ಕೇಂದ್ರ ಸರ್ಕಾರ ಅವಕಾಶ ವಾಡಿಕೊಟ್ಟಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಹೆದ್ದಾರಿ ಅಧಿಕಾರಿಗಳು, ಕುಂದಾಪುರ ಶಾಸಕ ಎ.ಕಿರಣ್ ಕುವಾರ್ ಕೊಡ್ಗಿ ಅವರೊಂದಿಗೆ ಬುಧವಾರ ರಾ.ಹೆ.66ರ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿ ಸಾರ್ವಜನಿಕರ ಸಮಸ್ಯೆಗಳನ್ನು ಅವಲೋಕಿಸಿ ಮಾತನಾಡಿದರು.
ಹೆಜಮಾಡಿಯಿಂದ ಕುಂದಾಪುರ ಶಾಸಿ ಸರ್ಕಲ್ ತನಕ 64 ಕಿ.ಮೀ. ಸರ್ವೀಸ್ ರಸ್ತೆ ವಾಡಬೇಕೆನ್ನುವ ಬೇಡಿಕೆಯಿದ್ದು, 29 ಕಿ.ಮೀ. ಮಂಜೂರಾಗಿ ಪ್ರಸ್ತುತ ಕಾಮಗಾರಿ ನಡೆಯುತ್ತಿದೆ. ಇನ್ನೂ 25ರಿಂದ 30 ಕಿ.ಮೀ. ಸರ್ವೀಸ್ ರಸ್ತೆಗೆ ಹೊಸದಾಗಿ ಪ್ರಸ್ತಾಪನೆ ಬಂದಿದ್ದು ಮಂಜೂರಾತಿ ಆಗುವ ನಿರೀಕ್ಷೆ ಇದೆ ಎಂದು ಕೋಟ ತಿಳಿಸಿದರು.
ಕೋಟೇಶ್ವರ ಗ್ರಾಪಂ ಅಧ್ಯಕ್ಷೆ ರಾಗಿಣಿ ದೇವಾಡಿಗ, ಬೀಜಾಡಿ ಗ್ರಾಪಂ ಅಧ್ಯಕ್ಷ ಪ್ರಕಾಶ್ ಜಿ.ಪೂಜಾರಿ, ಗೋಪಾಡಿ ಗ್ರಾಪಂ ಅಧ್ಯಕ್ಷ ಸುರೇಶ್ ಶೆಟ್ಟಿ ಗೋಪಾಡಿ, ಕುಂಭಾಶಿ ಗ್ರಾಪಂ ಅಧ್ಯಕ್ಷ ಆನಂದ ಪೂಜಾರಿ, ಪ್ರಮುಖರಾದ ಸತೀಶ್ ಪೂಜಾರಿ ವಕ್ವಾಡಿ, ಸುಧೀರ್ ಕೆ.ಎಸ್., ಕೃಷ್ಣ್ಣಗೊಲ್ಲ, ಸುರೇಶ್ ಕುಂದರ್, ವಿಟ್ಟಲ್ ಪೂಜಾರಿ ಐರೋಡಿ, ಶಾಸಕರ ಆಪ್ತ ಕಾರ್ಯದರ್ಶಿ ಮಹಿಮ ಶೆಟ್ಟಿ ಕೆ., ಸಂಸದರ ಆಪ್ತ ಕಾರ್ಯದರ್ಶಿ ಹರೀಶ್ ಶೆಟ್ಟಿ, ಆರ್ಕಿಟೆಕ್ ಇಂಜಿನಿಯರ್ ಆಶಿಕ, ನಾಸಿರ್, ನ್ಯಾಷನಲ್ ಆರ್ಕಿಟೆಕ್ ಪ್ರಾಜೆಕ್ಟ್ ಇಂಜಿನಿಯರ್ ಚಂದ್ರಶೇಖರ, ಸೈಟ್ ಇಂಜಿನಿಯರ್ ಸಂಜಯ್, ನಾಲ್ಕು ಗ್ರಾಪಂ ಸದಸ್ಯರು, ಸಾರ್ವಜನಿಕರು, ಪಕ್ಷದ ವಿವಿಧ ಕ್ಷೇತ್ರದ ಮುಖಂಡರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಹೆಜಮಾಡಿಯಿಂದ ಕುಂದಾಪುರದವರೆಗಿನ ರಾಷ್ಟ್ರೀಯ ಹೆದ್ದಾರಿಯ ಎರಡು ಕಡೆಯಿಂದ ಸರ್ವೀಸ್ ರಸ್ತೆ ಅಗಲೀಕರಣ ಆಗುತ್ತಾ ಇರುವುದರಿಂದ ಜನರಿಗೆ, ಅನೇಕ ದೇವಸ್ಥಾನಗಳಿಗೆ, ವ್ಯಾಪಾರಗಳಿಗೆ ತೊಂದರೆ ಆಗುತ್ತಿರುವುದು ಮತ್ತು ಕೆಲವು ಸಮಸ್ಯೆ ಆಗಿರುವುದು ಸತ್ಯ. ಅದರ ಮಧ್ಯದಲ್ಲಿ ಹೆಜಮಾಡಿಯಿಂದ ಕುಂದಾಪುರದವರೆಗೆ ದಿನನಿತ್ಯ ಅನೇಕ ಅಪಘಾತಗಳು ಆಗುತ್ತಿದೆ ಎಂಬ ವರದಿ ಹಿನ್ನೆಲೆಯಲ್ಲಿ ಅಪಘಾತ ನಿಯಂತ್ರಣಕ್ಕೆ ಕೆಲವು ಕಡೆ ಮೇಲ್ಸೇತುವೆ ಹಾಗೂ ಕೆಲವೆಡೆ ಸರ್ಕಲ್ ನಿರ್ಮಿಸಲಾಗುವುದು. ಸಾರ್ವಜನಿಕರು ಕಾಮಗಾರಿಗೆ ಸಹಕರಿಸಬೇಕು.